ನಾಗಮಂಗಲ: ಕೋವಿಡ್ ಸೋಂಕು ಪರೀಕ್ಷೆಯನ್ನು ವ್ಯಾಪಕವಾಗಿ ಮತ್ತು ವೇಗವಾಗಿ ಪರೀಕ್ಷಿಸುವ ಸಲುವಾಗಿ ಇನ್ನೊಂದು ವಾರದಲ್ಲಿ ಶ್ರೀ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಕೋವಿಡ್ ಪ್ರಯೋಗಾಲಯವನ್ನು ತೆರೆಯಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಭರವಸೆ ನೀಡಿದರು.
ಆದಿಚುಂಚನಗಿರಿ ವಿಶ್ವವಿದ್ಯಾಲಯದಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕೋವಿಡ್-19 ಸಂಬಂಧ ಜಿಲ್ಲಾ ಜನಪ್ರತಿನಿಧಿಗಳು, ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಕೋವಿಡ್ ಪ್ರಯೋಗಾಲಯ ತೆರೆಯಲು ಸಮ್ಮತಿಸಿದ್ದಾರೆಂದು ಹೇಳಿದರು.
ಹೊರ ರಾಜ್ಯಗಳಿಂದ ಎರಡು ಸಾವಿರ ಜನ ಬಂದರೂ ಅವರನ್ನು ಕ್ವಾರಂಟೈನ್ ಮಾಡಲು ಸ್ಥಳಾವಕಾಶ ಮಾಡಿಕೊಳ್ಳಲಾಗಿದೆ. ಕೋವಿಡ್ ಪಾಸಿಟಿವ್ ಬಂದವರಿಗೆ ಮಿಮ್ಸ್ ಆಸ್ಪತ್ರೆ ಸೇರಿದಂತೆ ಹಲವೆಡೆ ಚಿಕಿತ್ಸೆ ನೀಡಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಹಾಸ್ಟಲ್, ಕೆಲವು ಖಾಸಗಿ ಆಸ್ಪತ್ರೆಗಳು ಸ್ಥಳ ನೀಡಲು ಮುಂದೆ ಬಂದಿವೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಮುಂಬೈ ಸೇರಿದಂತೆ ಹೊರ ರಾಜ್ಯಗಳಿಂದ ಆಗಮಿಸಿರುವ ಮಕ್ಕಳೂ ಸೇರಿದಂತೆ 1500ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೆ, ರಾಜ್ಯ ಸರ್ಕಾರ ಮೇ 31ರವರೆಗೆ ಬೇರೆ ರಾಜ್ಯದಿಂದ ಬರಲು ಅನುಮತಿ ನೀಡಿಲ್ಲ ಎಂದರು. ಜಿಲ್ಲಾಧಿಕಾರಿ ವೆಂಕಟೇಶ್ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೂ ಒಟ್ಟು 168 ಪ್ರಕರಣ ಕಂಡು ಬಂದಿದೆ. 23 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
1500ಕ್ಕೂ ಹೆಚ್ಚು ಜನ ಮಹಾರಾಷ್ಟ್ರ ಮತ್ತು ಇತರ ರಾಜ್ಯದಿಂದ ಬಂದಿದ್ದಾರೆ. 900 ಜನರಿಗೆ ಪರೀಕ್ಷೆ ಮಾಡ ಲಾಗಿದೆ. 250 ರಿಂದ 300 ಜನರಿಗೆ ಪರೀಕ್ಷೆ ಮಾಡಲಾಗುತ್ತಿದೆ. ಹೊರಗಿನಿಂದ ಬಂದವರನ್ನು ನೇರವಾಗಿ ಕ್ವಾರಂಟೈನ್ ಮಾಡ ಲಾಗಿದೆ. ಎಂತದೇ ಪರಿಸ್ಥಿತಿ ಬಂದರೂ ನಿಭಾಯಿಸಲು ಜಿಲ್ಲಾಡಳಿತ ಸಿದ್ದವಾಗಿದೆ ಎಂದರು.
ಮಾರ್ಗದರ್ಶನ ಪಾಲಿಸಿ: ಚುಂಚಶ್ರೀ: ಲಾಕ್‌ಡೌನ್ ಮುಕ್ತವಾದ ತಕ್ಷಣ ಕೊರೊನಾ ಮುಕ್ತವಾಗಿಲ್ಲ. ಹಿಂದಿಗಿಂತಲೂ ಈಗ ನಾವೆಲ್ಲ ಎಚ್ಚರಿಕೆಯಿಂದ ಇರಬೇಕು ಎಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ಕೋವಿಡ್ ನಿಯಂತ್ರಣದಲ್ಲಿ ಸರ್ಕಾರಕ್ಕೆ ಶ್ರೀಮಠ ಸಹಕಾರ ನೀಡಲು ಸಿದ್ಧವಿದೆ. 71 ಜನರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಾಕ್ಷಣ ಜಿಲ್ಲೆಯ ಜನ ಅಧೀರರಾಗಬೇಕಿಲ್ಲ.
ಈ ಪರಿಸ್ಥಿತಿ ಯನ್ನು ಎದುರಿಸುವ ಶಕ್ತಿಯನ್ನು ಎಲ್ಲರೂ ರೂಢಿಸಿ ಕೊಳ್ಳಬೇಕು ಎಂ ದರು. ಸಭೆಯಲ್ಲಿ ಶ್ರೀ ಪುರುಷೋತ್ತಮಾನಂದ ನಾಥ ಸ್ವಾಮೀಜಿ, ಶ್ರೀ ಪ್ರಸನ್ನನಾಥ ಸ್ವಾಮೀಜಿ, ಜಿಪಂ ಸಿಇಒ ಯಾಲಕ್ಕಿಗೌಡ, ಎಸ್ಪಿ ಪರಶುರಾಮ, ಶಾಸಕರಾದ ಪುಟ್ಟರಾಜು, ಸುರೇಶ್‌ಗೌಡ, ಶ್ರೀನಿವಾಸ್, ಕೆ.ಟಿ.ಶ್ರೀಕಂಠೇಗೌಡ ಇತರರಿದ್ದರು.