ಬೆಂಗಳೂರು: ಕೋವಿಡ್ ಸೋಂಕಿತರಿಗೆ ಸಮರ್ಪಕವಾಗಿ ಹಾಸಿಗೆ ಹಂಚಿಕೆ ಮಾಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿರುವ ಮೂವರು ಸಚಿವರು ವ್ಯವಸ್ಥೆ ಸುಧಾರಣೆಗೆ ಹಲವು ತೀರ್ಮಾನ ಕೈಗೊಂಡಿದ್ದು, ನಿತ್ಯ ಆರೋಗ್ಯ ಬುಲೆಟಿನ್ ಪ್ರಕಟಿಸುವ ರೀತಿಯಲ್ಲೇ ಹಾಸಿಗೆ ಹಂಚಿಕೆ ಸ್ಥಿತಿಗತಿಯ ಬುಲೆಟಿನ್ ನೀಡಿ ಪಾರದರ್ಶಕವಾಗಿ ನಿರ್ವಹಿಸುವ ಭರವಸೆ ನೀಡಿದ್ದಾರೆ.
ಸಂಪುಟ ಸಭೆಯಲ್ಲಿ ಕೊರೊನಾ ನಿರ್ವಹಣೆ ಜವಾಬ್ದಾರಿ ಹಂಚಿಕೆ ಹಿನ್ನೆಲೆಯಲ್ಲಿ ಸಚಿವರಾದ ಬಸವರಾಜ ಬೊಮ್ಮಾಯಿ, ಆರ್.ಅಶೋಕ್ ಹಾಗೂ ಅರವಿಂದ ಲಿಂಬಾವಳಿ ಅವರು ಬುಧವಾರ ಆರೋಗ್ಯ ಸೌಧದಲ್ಲಿನ ಕರ್ನಾಟಕ ವಾರ್ ರೂಮ್‌ಗೆ (ಬೆಂಗಳೂರು ಹೊರತುಪಡಿಸಿ) ಭೇಟಿ ನೀಡಿದ ಬಳಿಕ ಸಭೆ ನಡೆಸಿದರು.
ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ, ರಾಜಧಾನಿ ಸಹಿತ ರಾಜ್ಯದಲ್ಲಿ ಕೋವಿಡ್ ಚಿಕಿತ್ಸೆಗೆ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಖಾಲಿಯಿರುವ ಒಟ್ಟು ಹಾಸಿಗೆಗಳ ಬಗ್ಗೆ ವಿವರವಾದ ಬುಲೆಟಿನ್ ಪ್ರಕಟಿಸಲಾಗುವುದು. ರಾಜ್ಯಾದ್ಯಂತ ನಿತ್ಯ ಭರ್ತಿಯಾದ, ಖಾಲಿಯಿರುವ ಹಾಸಿಗೆ, ಯಾವೆಲ್ಲ ವಿಭಾಗಗಳ ಹಾಸಿಗೆ ಭರ್ತಿ, ಖಾಲಿ ಎಂಬ ಬಗ್ಗೆ ಪಾರದರ್ಶಕ ವಿವರ ನೀಡುವ ವ್ಯವಸ್ಥೆಯನ್ನು ಎರಡು- ಮೂರು ದಿನಗಳಲ್ಲಿ ರೂಪಿಸಲಾಗುವುದು ಎಂ ದರು.
ಹಾಸಿಗೆ ಬಗ್ಗೆ ವೈದ್ಯರ ನಿರ್ಧಾರ ಅಂತಿಮ :
ಇನ್ನು ಮುಂದೆ ರೋಗಿ ಇಂತಹದ್ದೇ ಹಾಸಿಗೆ ಬೇಕು ಎಂದು ನಿರ್ಧರಿಸುವಂತಿಲ್ಲ. ಬದಲಿಗೆ ಕೋವಿಡ್ ಕೇರ್ ಸೆಂಟರ್‌ನ ವೈದ್ಯರು ರೋಗಿಯ ಆರೋಗ್ಯ ಸ್ಥಿತಿ ಆಧರಿಸಿ ಸೂಕ್ತ ಹಾಸಿಗೆ ವ್ಯವಸ್ಥೆ ಮಾಡಲಿದ್ದಾರೆ ಎಂದು ಹೇಳಿದರು. ಯಾರಿಗಾದರೂ ಸೋಂಕು ತಗಲಿರುವ ಬಗ್ಗೆ ಸಂಶಯವಿದ್ದರೆ, ಲಕ್ಷಣವಿದ್ದರೆ ಕೂಡಲೇ ಕೋವಿಡ್ ಕೇರ್ ಸೆಂಟರ್ ಸಂಪರ್ಕಿಸಿದರೆ ಸೂಕ್ತ ರೀತಿಯಲ್ಲಿ ಸ್ಪಂದನೆ ಸಿಗಲಿದೆ. ಹೆಚ್ಚು ಪ್ರಕರಣಗಳು ವರದಿಯಾಗುವ ಜಿಲ್ಲೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕೋವಿಡ್ ಕೇರ್ ಸೆಂಟರ್ ತೆರೆಯಲಾಗುತ್ತದೆ ಎಂದು ತಿಳಿಸಿದರು.