Advertisement

ಕೋವಿಡ್ 19: ಮೇ 4ರಿಂದ ಇಟಲಿಯಲ್ಲಿ ಲಾಕ್ ಡೌನ್ ತೆರವು, ಬ್ರಿಟನ್ ನಲ್ಲಿಯೂ ಯೋಜನೆ ಸಿದ್ಧತೆ

08:07 AM Apr 28, 2020 | Nagendra Trasi |

ಫ್ರಾನ್ಸ್/ಬ್ರಿಟನ್: ಮಾರಣಾಂತಿಕ ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಜಗತ್ತಿನಾದ್ಯಂತ ಲಾಕ್ ಡೌನ್ ಅನ್ನು ಎರಡು ಹಂತಗಳಲ್ಲಿ ಜಾರಿಗೊಳಿಸಲಾಗಿತ್ತು. ಭಾರತದಲ್ಲಿಯೂ ಮೇ 3ರಂದು ಲಾಕ್ ಡೌನ್ ಅಂತ್ಯಗೊಳ್ಳಲಿದ್ದು, ಆ ಬಳಿಕ ಹಾಟ್ ಸ್ಪಾಟ್ ಗಳಲ್ಲಿ ಲಾಕ್ ಡೌನ್ ಮುಂದುವರಿಯಲಿದ್ದು, ಉಳಿದೆಡೆ ಸಡಿಲಿಕೆಯಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. ಮತ್ತೊಂದೆಡೆ ಇಟಲಿ, ಬ್ರಿಟನ್ ನಲ್ಲಿ ಲಾಕ್ ಡೌನ್ ತೆರವುಗೊಳಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ವರದಿ ವಿವರಿಸಿದೆ.

Advertisement

ಜಾಗತಿಕವಾಗಿ ಕೋವಿಡ್ 19 ವೈರಸ್ ಗೆ 2,06,542 ಜನರು ಸಾವನ್ನಪ್ಪಿದ್ದರು, ಒಟ್ಟು 29,71,639 ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಇದರ ಜತೆಗೆ ನಿಧಾನಕ್ಕೆ ಲಾಕ್ ಡೌನ್ ತೆರವುಗೊಳಿಸುವ ಮೂಲಕ ದೈನಂದಿನ ಜೀವನ ಮತ್ತು ಆರ್ಥಿಕ ಚಟುವಟಿಕೆ ಪುನರಾರಂಭಿಸುವ ಇರಾದೆ ಹೊಂದಲಾಗಿದೆ ಎಂದು ವರದಿ ಹೇಳಿದೆ.

ಇಟಲಿಯಲ್ಲಿ ಮೇ 4ರಿಂದ ಭಾಗಶಃ ಲಾಕ್ ಡೌನ್ ತೆರವು:
ದೀರ್ಘಕಾಲದ ಲಾಕ್ ಡೌನ್ ಅನ್ನು ಭಾಗಶಃವಾಗಿ ತೆರವುಗೊಳಿಸಲು ಇಟಲಿ ಸಿದ್ದತೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಮೇ 4ರಿಂದ ಫ್ಯಾಕ್ಟರಿಗಳು ಮತ್ತು ಇನ್ನಿತರ ಚಟುವಟಿಕೆಗಳನ್ನು ಪುನರಾರಂಭಿಸಲು ಅವಕಾಶ ನೀಡಲಾಗುವುದು. ಆದರೆ ಕೆಲವೇ ಮಂದಿಗೆ ಭೇಟಿ ನೀಡಲು, ಕೆಲಸಕ್ಕೆ ತೆರಳಲು ಅವಕಾಶ ನೀಡಲಾಗುವುದು ಎಂದು ಪ್ರಧಾನಿ ಗ್ಯುಸೆಪ್ಪ್ ಕೋಂಟೆ ತಿಳಿಸಿದ್ದಾರೆ. ಎರಡನೇ ಹಂತದ ಕೋವಿಡ್ 19 ಸೋಂಕು ಹರಡದಂತೆ, ಆರ್ಥಿಕ ಚಟುವಟಿಕೆಗೆ ಹೊಡೆತ ಬೀಳದಂತೆ ವ್ಯವಸ್ಥಿತವಾಗಿ ವ್ಯವಹಾರ ನಡೆಸಲು ಅವಕಾಶ ನೀಡಲಾಗುವುದು ಎಂದು ಹೇಳಿದರು.

ನಾವು ವೈರಸ್ ಜತೆಯೇ ಬದುಕಬೇಕಾಗಿದೆ ಮತ್ತು ನಾವು ಸಾಧ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ ಎಂದು ಕೋಂಟೆ ತಿಳಿಸಿದ್ದಾರೆ.

ಲಾಕ್ ಡೌನ್ ತೆರವಿಗೆ ಬ್ರಿಟನ್ ನಲ್ಲಿಯೂ ಸಿದ್ಧತೆ:
ಕೋವಿಡ್ 19 ವೈರಸ್ ಸೋಂಕಿನಿಂದ ಚೇತರಿಸಿಕೊಂಡ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು, ಪ್ರಸ್ತುತ ಜಾರಿಯಲ್ಲಿರುವ ಲಾಕ್ ಡೌನ್ ಅನ್ನು ತೆರವುಗೊಳಿಸುವುದು ಹೇಗೆ ಎಂಬ ಲೆಕ್ಕಾಚಾರದಲ್ಲಿ ತೊಡಗಿರುವುದಾಗಿ ವರದಿ ತಿಳಿಸಿದೆ. ಯುನೈಟೆಡ್ ಕಿಂಗ್ ಡಮ್ ನಲ್ಲಿ ಕೋವಿಡ್ 19ಗೆ 20,732 ಮಂದಿ ಸಾವನ್ನಪ್ಪಿದ್ದು, 1,52,840 ಜನರಿಗೆ ಸೋಂಕು ದೃಢಪಟ್ಟಿರುವುದಾಗಿ ವರದಿ ತಿಳಿಸಿದೆ.

Advertisement

ಕೆನಡಾದಲ್ಲಿ ಕೋವಿಡ್ 19 ವೈರಸ್ ಸಾವಿನ ಪ್ರಮಾಣ ಇಳಿಕೆ:
ಕೆನಡಾದಲ್ಲಿ ಕೋವಿಡ್ 19 ವೈರಸ್ ಸಾವಿನ ಪ್ರಮಾಣ ಕಡಿಮೆಯಾಗುತ್ತಿರುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಕಳೆದ ಏಳು ದಿನಗಳಲ್ಲಿ ಕೋವಿಡ್ 19 ಮರಣ ಪ್ರಮಾಣ ಶೇ.10ಕ್ಕಿಂತ ಕೆಳಕ್ಕೆ ಇಳಿದಿದೆ ಎಂದು ಕೆನಡಾ ಸಾರ್ವಜನಿಕ ಆರೋಗ್ಯ ಏಜೆನ್ಸಿ ತಿಳಿಸಿದೆ.

ಶಾಲಾ ಪುನರಾರಂಭಕ್ಕೆ ದಕ್ಷಿಣ ಕೊರಿಯಾ ಸಜ್ಜು:
ಮೇ ತಿಂಗಳಿನಲ್ಲಿಯೇ ಶಾಲೆಗಳನ್ನು ಪುನರಾಂಭಿಸಲು ದಕ್ಷಿಣ ಕೊರಿಯಾ ಸರ್ಕಾರದ ಶಿಕ್ಷಣ ಅಧಿಕಾರಿಗಳು ಸಿದ್ದತೆ ನಡೆಸುತ್ತಿದ್ದಾರೆ. ಉನ್ನತ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಶಾಲೆ ಆರಂಭಿಸಲಾಗುವುದು ಪೂರ್ವ ಸಿದ್ದತೆ ನಡೆಸಿದ್ದು, ದಿನಾಂಕವನ್ನು ಅಧಿಕಾರಿಗಳು ಘೋಷಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next