Advertisement
2019-20ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡು ಹಾಹಾಕಾರ ಸೃಷ್ಟಿಸಿದ ಕೊರೊನಾ ಮರುವರ್ಷ ಬೇರೆಯದೇ ರೀತಿಯಲ್ಲಿ ಅಪಾರ ತೊಂದರೆಗೆ ಕಾರಣ ವಾಗಿತ್ತು. ಮೊದಲ ವರ್ಷ ಕಾಯಿಲೆ ಸಂಪೂರ್ಣವಾಗಿ ಅಪರಿಚಿತ ವಾಗಿದ್ದುದರಿಂದ ಸಾವುನೋವುಗಳು ಸಂಭವಿಸಿದವು. ಆಗ ಜಗತ್ತಿನಾದ್ಯಂತ ಸೃಷ್ಟಿಯಾದದ್ದು ಮನುಕುಲ ಇತ್ತೀಚೆಗಿನ ದಶಕಗಳಲ್ಲಿ ಅನುಭವಿಸಿರದಂತಹ ಆರೋಗ್ಯ ತುರ್ತುಸ್ಥಿತಿ. ಅದರಿಂದ ಹೇಗೋ ಪಾರಾಗಿ ನಿಟ್ಟುಸಿರು ಬಿಡುವ ವೇಳೆಗೆ ಮರುವರ್ಷ ಅದೇ ಕೊರೊನಾ ತುಸು ಹೊಸ ರೂಪ ತಳೆದು ಕಂಗೆಡಿಸಿತು. ಆಗ ಆಮ್ಲಜನಕ ಕೊರತೆ ಉಂಟಾದುದು, ಬ್ಲ್ಯಾಕ್ ಫಂಗಸ್ ಕಾಟ ಮರೆಯಲಾಗದ್ದು. ಮೊದಲ ವರ್ಷದ ಅನುಭವವನ್ನು ಪಾಠವಾಗಿ ಇರಿಸಿ ಕೊಂಡು ಮರುವರ್ಷದ ಅಲೆಯನ್ನು ಎದುರಿಸಲು ಮುಂದಾದಾಗ ಅದು ಬೇರೆಯದೇ ರೂಪದಲ್ಲಿ ಕಾಡಿತ್ತು ಎಂಬುದು ಗಮನದಲ್ಲಿ ಇರಿಸಿಕೊಳ್ಳಬೇಕಾದ ಅಂಶ.
Related Articles
Advertisement
ಈ ಹಿನ್ನೆಲೆಯಲ್ಲಿ ಆತಂಕ ಪಡದೆ ಉತ್ತಮ ಆರೋಗ್ಯಾಭ್ಯಾಸಗಳನ್ನೂ ನಾವು ಹೊಂದುವುದು ಅಗತ್ಯವಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಮೂಲ ಸೌಲಭ್ಯಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸುವುದು ಅಗತ್ಯ. ಶನಿವಾರದಿಂದ ರವಿವಾರದ ಅವಧಿಯಲ್ಲಿ ಕೇಂದ್ರ ಸರಕಾರದ ಮಾಹಿತಿ ಪ್ರಕಾರ 335 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ ರೂಪಾಂತರಿ ಜೆಎನ್.1 ಇಲ್ಲದೇ ಇರುವುದು ಸಮಾಧಾನದ ಸಂಗತಿ.
ಕೊರೊನಾದಂತಹ ಅಪರಿಚಿತ ಸೋಂಕು ರೋಗಗಳ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರಬೇಕು ಎಂಬುದಕ್ಕೆ ರೂಪಾಂತರ ಹೊಂದಬಲ್ಲ ಅದರ ಸಾಮರ್ಥ್ಯ ಪ್ರಧಾನ ಕಾರಣ. ಅಲ್ಲದೆ ಇಂತಹ ಕಾಯಿಲೆಗಳನ್ನು ಗುಣಪಡಿಸಲು ಸಿದ್ಧ ಔಷಧಗಳು ಇಲ್ಲ. ಅದರಿಂದ ಉಂಟಾಗುವ ರೋಗ ಲಕ್ಷಣಗಳನ್ನು ಉಪಶಮನಗೊಳಿಸುವ ಔಷಧಗಳು ಮಾತ್ರ ನಮ್ಮಲ್ಲಿ ಲಭ್ಯವಿವೆ. ಹೀಗಾಗಿಯೇ ಪ್ರತೀ ಬಾರಿ ಹೊಸ ತಳಿ, ಹೊಸ ರೂಪಾಂತರಿ ಪತ್ತೆಯಾದಾಗ ಗಾಬರಿಗೊಳ್ಳದೆ ಸನ್ನದ್ಧತೆ ಹೆಚ್ಚಿಸಿಕೊಳ್ಳಬೇಕು, ಮುಂಜಾಗರೂಕತೆಯಿಂದ ಇರಬೇಕು.