ದೇಶದಲ್ಲಿ ಮೂರನೇ ಅಲೆ ಅಥವಾ ಒಮಿಕ್ರಾನ್ ರೂಪಾಂತರಿ ಹೆಚ್ಚಾಗಿ ಬಾಧಿಸದ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಬಹುತೇಕ ಕೊರೊನಾ ನಿಯಮಾವಳಿಗಳನ್ನು ಜನ ದೂರ ಸರಿಸಿದ್ದಾರೆ. ಆದರೆ ಸದ್ದಿಲ್ಲದೇ ನಾಲ್ಕನೇ ಅಲೆ ಆರಂಭವಾಗುತ್ತಿದ್ದು, ಇದರ ಪ್ರಭಾವ ಎಷ್ಟಿದೆ ಎಂಬುದನ್ನು ಇನ್ನೂ ಯಾರಿಗೂ ಅರಿಯಲು ಆಗಿಲ್ಲ. ಹಾಗೆಯೇ, ದಿಲ್ಲಿ ಸೇರಿದಂತೆ ದೇಶದ ಕೆಲವು ರಾಜ್ಯಗಳಲ್ಲಿ ಕೊರೊನಾ ಸೋಂಕು ನಿಧಾನಗತಿಯಲ್ಲಿ ಹೆಚ್ಚಳವಾಗುತ್ತಿದೆ. ಪಾಸಿಟಿವಿಟಿ ದರವೂ ಏರಿಕೆಯಾಗುತ್ತಿದ್ದು, ಕರ್ನಾಟಕದಲ್ಲಿ ಎರಡು ಒಮಿಕ್ರಾನ್‌ನ ಸಬ್‌ವೇರಿಯಂಟ್ ಪ್ರಕರಣಗಳು ಕಾಣಿಸಿಕೊಂಡಿದ್ದು, ಒಂದಷ್ಟು ಆತಂಕಕ್ಕೂ ಕಾರಣವಾಗಿದೆ.
ಮೊದಲ ಅಲೆಗಿಂತಲೂ ಎರಡನೇ ಅಲೆ ವೇಳೆ ದೇಶ ಕೊರೊನಾದಿಂದ ಭಾರೀ ಪ್ರಮಾಣದಲ್ಲಿ ನಲುಗಿತ್ತು. ಹಾಸಿಗೆ ಸಿಗದೆ, ಆಮ್ಲ
ಜನಕವೂ ಸರಿಯಾಗಿ ಸಮಯಕ್ಕೆ ಲಭ್ಯವಾಗದೇ ಅಸಂಖ್ಯಾತ ಮಂದಿ ಪ್ರಾಣಬಿಟ್ಟಿದ್ದರು. ಕೊರೊನಾದ ಎರಡನೇ ಅಲೆ ಮನುಕುಲವನ್ನೇ ಬಹುವಾಗಿ ಕಾಡಿತ್ತು ಎಂದು ಹೇಳಿದರೆ ತಪ್ಪಾಗಲಾರದು. ಆದರೆ ಮೂರನೇ ಅಲೆ ವೇಳೆ ವೇಗವಾಗಿ ಹರಡುವ ಒಮಿಕ್ರಾನ್ ರೂಪಾಂತರಿ ಕಾಣಿಸಿಕೊಂಡು ಎಲ್ಲೆಡೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ಇದು ತೀವ್ರವಾಗಿ ಹರಡುವ ಶಕ್ತಿ ಹೊಂದಿದ್ದು ಬಿಟ್ಟರೆ, ಆರೋಗ್ಯದ ಮೇಲೆ ಅಷ್ಟಾಗಿ ಕೆಟ್ಟ ಪರಿಣಾಮ ಬೀರಲಿಲ್ಲ. ಹೀಗಾಗಿ ಮೂರನೇ ಅಲೆಯನ್ನು ಸಲೀಸಾಗಿ ದಾಟಿದೆವು.
ಈಗ ಕೊರೊನಾ ಸೋಂಕಿನ ಮೂಲ ದೇಶ ಚೀನದಲ್ಲೇ ಸೋಂಕು ಹೆಚ್ಚಾಗಿ ಬಾಧಿಸುತ್ತಿದೆ. ಶಾಂಘೈಯಂಥ ನಗರದಲ್ಲಿ ಇನ್ನೂ ಲಾಕ್‌ಡೌನ್ ತೆರವಾಗಿಲ್ಲ. ದೇಶದ ಬಹುತೇಕ ಜನರಿಗೆ ಲಸಿಕೆ ನೀಡಿದ್ದರೂ ಕೊರೊನಾ ಹೆಚ್ಚಳದ ಗತಿ ಬದಲಾಗಿಲ್ಲ. ಅಲ್ಲಿಯೂ ಆಹಾರ ಸೇರಿದಂತೆ ಅಗತ್ಯ ವಸ್ತುಗಳಿಗೆ ಜನ ನಲುಗುತ್ತಿರುವುದನ್ನು ನೋಡುತ್ತಿದ್ದೇವೆ.
ಸದ್ಯ ಭಾರತದಲ್ಲಿಯೂ ಅರ್ಹ ಜನಸಂಖ್ಯೆಯ ಬಹುತೇಕ ಮಂದಿ ಲಸಿಕೆ ಪಡೆದಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ, ಇಡೀ ಜನಸಂಖ್ಯೆಗೆ ಕೊರೊನಾ ಬಂದು ಹೋಗಿರಬಹುದು ಎಂದು ವಿಶ್ಲೇಷಿಸಲಾಗಿದೆ. ಹೀಗಾಗಿ ಕೊರೊನಾ ಎದುರಿಸುವ ಶಕ್ತಿ ಭಾರತೀಯರಲ್ಲಿ ಒಂದಷ್ಟು ಹೆಚ್ಚಾಗಿಯೇ ಇದೆ.
ಒಂದು ಲಸಿಕೆ ಪಡೆದಿದ್ದೇವೆ ಎಂಬ ಅಭಯ, ಕೊರೊನಾಗೆ ತೆರೆದುಕೊಂಡಿರುವ ಸಾಧ್ಯತೆಗಳಿಂದಾಗಿ ಜನರಲ್ಲಿ ಕೊರೊನಾ ವಿರುದ್ಧದ ಹೋರಾಟದ ಶಕ್ತಿ ಬಂದಿದೆ. ಇಷ್ಟೆಲ್ಲ ಆಗಿದ್ದರೂ ಇನ್ನೂ ಕೊರೊನಾದ ರೂಪಾಂತರಿ ಹೇಗಿರಬಹುದು ಎಂದು ಹೇಳುವುದಕ್ಕೆ ಯಾರಿಗೂ ಸಾಧ್ಯವಾಗಿಲ್ಲ. ಒಂದು ವೇಳೆ ಹಿಂದಿನ ಎಲ್ಲ ರೂಪಾಂತರಿಗಳಿಗಿಂತ ಹೆಚ್ಚು ಸಾಮರ್ಥ್ಯದ ರೂಪಾಂತರಿ ಕಾಣಿಸಿಕೊಂಡರೆ ಲಸಿಕೆಯೂ ಕೆಲಸ ಮಾಡದೇ ಇರಬಹುದು. ಹೀಗಾಗಿ ಜನತೆ ಮುಂದಿರುವ ಏಕೈಕ
ಅಸ್ತ್ರವೆಂದರೆ, ಮುಂಜಾಗ್ರತೆ ಮಾತ್ರ. ಮಾಸ್ಕ್ ಧರಿಸುವುದು, ಆಗಾಗ ಕೈತೊಳೆದುಕೊಳ್ಳುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿಕೊಳ್ಳಬೇಕು. ಈಗಾಗಲೇ ಕೊರೊನಾ ಹೋಗಿಯಾಗಿದೆ ಎಂಬ ಅಂಶವನ್ನು ಮನಸ್ಸಿನಿಂದ ತೆಗೆದುಹಾಕಬೇಕು. ಇಲ್ಲದಿದ್ದರೆ, ಹೊಸ ರೂಪಾಂತರಿಯ ಕಾಟದಿಂದಾಗಿ ಎರಡನೇ ಅಲೆಯಲ್ಲಿ ಎದುರಿಸಿದ ನೋವು, ಸಂಕಟಗಳನ್ನೇ ಮತ್ತೆ ಎದುರಿಸಬೇಕಾದೀತು ಎಚ್ಚರ.