ಬಾಗಲಕೋಟೆ: ಮಹಾರಾಷ್ಟ್ರದಿಂದ ಪಕ್ಕದ ಯಾದಗಿರಿ ಜಿಲ್ಲೆಗೆ ಬಂದಿದ್ದ ವ್ಯಕ್ತಿಗಳಲ್ಲಿ ಅತೀ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಹೊರರಾಜ್ಯದಿಂದ ಬಂದಿರುವ 2465 ಜನರ ಆರೋಗ್ಯದ ಮೇಲೆ ಜಿಲ್ಲಾಡಳಿತ ತೀವ್ರ ನಿಗಾ ಇಟ್ಟಿದೆ. ಹೌದು, ಯಾದಗಿರಿ ಜಿಲ್ಲೆಯಲ್ಲಿ ಒಂದೇ ದಿನ 72 ಜನರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ರವಿವಾರವೂ ಯಾದಗಿರಿಯಲ್ಲಿ ಕೊರೊನಾ ಕೇಕೆ ಮುಂದುವರಿದಿದ್ದು, ಇದು ಜಿಲ್ಲೆಗೆ ಹೊಂದಿಕೊಂಡಿರುವ ಜಿಲ್ಲೆಯೂ ಆಗಿದೆ. ಕಬ್ಬು ಕಟಾವು ಮಾಡಲು, ಇಟ್ಟಿಗೆ ಭಟ್ಟಿ, ವಿವಿಧ ಕಾರ್ಖಾನೆ, ಆಸ್ಪತ್ರೆಗಳಲ್ಲಿ ದುಡಿಯುವ ಉದ್ದೇಶಕ್ಕಾಗಿ ಮಹಾರಾಷ್ಟ್ರದ ಕೊಲ್ಲಾಪುರ, ಮುಂಬೈ, ರತ್ನಾಗಿರಿ, ಸಾಂಗ್ಲಿ ಹೀಗೆ ಹಲವೆಡೆ ಹೋಗಿದ್ದ ಜನರು ಅಪಾರ ಸಂಖ್ಯೆಯಲ್ಲಿ ಮರಳಿದ್ದಾರೆ. ಸದ್ಯ ಅವರನ್ನೆಲ್ಲ ಜಿಲ್ಲಾಡಳಿತ, ವಸತಿ ನಿಲಯ, ಶಾಲೆ, ಕಾಲೇಜುಗಳಲ್ಲಿ ಕ್ವಾರಂಟೈನ್ ಮಾಡಿದ್ದು, ಅವರೆಲ್ಲರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ.
2465 ಜನ ಕ್ವಾರಂಟೈನ್: ಹೊರರಾಜ್ಯದಿಂದ ಬಂದಿರುವ ಒಟ್ಟು 2465 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಅದರಲ್ಲೂ ಬಾಗಲಕೋಟೆ ಜಿಲ್ಲಾ ಕೇಂದ್ರದಲ್ಲೇ ಅತೀ ಹೆಚ್ಚು ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು, ಮಹಿಳೆಯರು, ಮಕ್ಕಳು, ವಯಸ್ಸಾದವರು, ಬೇರೆ ಬೇರೆ ಕಾಯಿಲೆಗಳಿದ್ದರೆ, ಅವರ ಆರೋಗ್ಯದ ಕುರಿತು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಮಾಹಿತಿ ಪಡೆಯಲಾಗುತ್ತಿದೆ.
ಸಾಮಾಜಿಕ ಅಂತರ: ಕ್ವಾರಂಟೈನ್ ಕೇಂದ್ರಗಳಲ್ಲೂ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಅವರೆಲ್ಲರಿಗೂ ನಿತ್ಯ ಅನ್ನ, ಸಾಂಬಾರ ಸಹಿತ ವಿವಿಧ ರೀತಿಯ ಅಡುಗೆ ಸಿದ್ಧಪಡಿಸಿ, ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಅದರಲ್ಲೂ ಬಾದಾಮಿ ತಾಲೂಕಿನ ಚಿಕ್ಕಮುಚ್ಚಳಗುಡ್ಡದ ಕ್ವಾರಂಟೈನ್ ಕೇಂದ್ರದಲ್ಲಿ ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಕ್ವಾರಂಟೈನ್ ನಲ್ಲಿದ್ದವರಿಗೆ ಪ್ರತಿದಿನ ಬೇರೆ ಬೇರೆ ರೀತಿಯ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಉಳಿದೆಡೆ ಅನ್ನ-ಸಾಂಬಾರ ಮಾತ್ರ ಕೊಡುತ್ತಿದ್ದು, ಇದಕ್ಕೆ ಕೆಲವರು ಅಸಮಾಧಾನವೂ ವ್ಯಕ್ತಪಡಿಸಿದ್ದಾರೆ.
ಇನ್ನೂ ಬರಬೇಕಿದೆ 587 ಜನರ ವರದಿ: ಜಿಲ್ಲೆಯಿಂದ ಕಳುಹಿಸಲಾಗಿದ್ದ 313 ಸ್ಯಾಂಪಲ್‌ಗಳ ಪೈಕಿ 91 ಸ್ಯಾಂಪಲ್‌ಗಳ ವರದಿ ನೆಗೆಟಿವ್ ಬಂದಿದ್ದು, ಇನ್ನು 222 ಸ್ಯಾಂಪಲ್‌ಗಳ ವರದಿ ನಿರೀಕ್ಷಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ| ಕೆ.ರಾಜೇಂದ್ರ ತಿಳಿಸಿದ್ದಾರೆ. ಜಿಲ್ಲೆಯಿಂದ ರವಿವಾರ ಹೊಸದಾಗಿ ಮತ್ತೆ 365 ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ರವಾನಿಸಲಾಗಿದ್ದು, ಬಾಕಿ 222 ಮತ್ತು ಹೊಸ 365 ಸೇರಿ ಒಟ್ಟು 587 ಸ್ಯಾಂಪಲ್‌ಗಳ ವರದಿ ಬರಬೇಕಿದೆ. ಜಿಲ್ಲೆಯಲ್ಲಿ ಇನ್‌ಸ್ಟಿಟ್ಯೂಟ್ ಕ್ವಾರಂಟೈನ್‌ನಲ್ಲಿ ಒಟ್ಟು 2465 ಜನರನ್ನು ಇರಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 6029 ಜನರ ಸ್ಯಾಂಪಲ್‌ಗಳನ್ನು ಕಳುಹಿಸಲಾಗಿದ್ದು, ಈ ಪೈಕಿ 5335 ನೆಗಟಿವ್ ಪ್ರಕರಣ, 77 ಪಾಸಿಟಿವ್ ಬಂದಿದ್ದು, ಅದರಲ್ಲಿ 42 ಜನರು ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಜಿಲ್ಲೆಯ ಒಟ್ಟು 77 ಪಾಸಿಟಿವ್ ಪ್ರಕರಣಗಳಲ್ಲಿ 42 ಜನ ಗುಣಮುಖರಾಗಿದ್ದರೆ, ಇನ್ನೂ 34 ಜನ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಗಲಕೋಟೆ ನಗರದ ಓರ್ವ ವೃದ್ಧ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇನ್ನು 7 ಕಂಟೇನ್ಮೆಂಟ್ ಝೋನ್‌ಗಳಿವೆ. ಇಲ್ಲಿವರೆಗೆ ಒಟ್ಟು 13 ಸ್ಯಾಂಪಲ್‌ಗಳು ಮಾತ್ರ ರಿಜೆಕ್ಟ್ ಆಗಿರುತ್ತವೆ. 14 ದಿನಗಳ ಕಾಲ ಇನ್ ಸ್ಟಿಟ್ಯೂಶನ್ ಕ್ವಾರಂಟೈನ್‌ನಲ್ಲಿದ್ದ 305 ಜನ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸ್ಥಾಪಿಸಲಾದ 9 ಚೆಕ್‌ಪೋಸ್ಟ್‌ಗಳ ಪೈಕಿ 4 ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿವರೆಗೆ ಚೆಕ್‌ಪೋಸ್ಟ್‌ಗಳ ಮೂಲಕ 53461 ವಾಹನಗಳ ತಪಾಸಣೆ ಹಾಗೂ 2,06,722 ಜನರನ್ನು ಥರ್ಮಲ್ ಸ್ಕ್ರೀನಿಂಗ್ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ.