ಬಾಗಲಕೋಟೆ: ಕೋವಿಡ್ ವೈರಸ್ ಸ್ಯಾಂಪಲ್ ತಪಾಸಣೆಗೆ ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಯಂತ್ರಗಳ ಅಳವಡಿಕೆ ಪೂರ್ಣಗೊಂಡಿದ್ದು, ಐಸಿಎಂಆರ್‌ನಿಂದಲೂ ಪರವಾನಗಿ ದೊರೆತಿದೆ. ಮೇ 17ರಿಂದ ಜಿಲ್ಲಾ ಆಸ್ಪತ್ರೆಯಲ್ಲೇ ಕೋವಿಡ್-19ಪರೀಕ್ಷೆ ಆರಂಭಿಸಲಾಗುವುದು ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ಶನಿವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ| ಅರುಣ ಮಿಸ್ಕಿನ್ ಅವರು ನೀಡಿದ ಒಂದು ಯಂತ್ರ ಹಾಗೂ ರಾಜ್ಯ ಸರ್ಕಾರ ಪೂರೈಸಿದ ಯಂತ್ರ ಸೇರಿ ಎರಡು ಯಂತ್ರಗಳು ಜಿಲ್ಲಾ ಆಸ್ಪತ್ರೆಯಲ್ಲಿವೆ. ಅದಕ್ಕೆ ಬೇಕಾದ ಎಲ್ಲ ರೀತಿಯ ಕಿಟ್‌ಗಳೂ ಬಂದಿದ್ದು, ಮೇ 17ರಿಂದ ಪರೀಕ್ಷೆ ನಡೆಯಲಿವೆ. ಒಂದು ಗಂಟೆಗೆ 5 ಸ್ಯಾಂಪಲ್ ಪರೀಕ್ಷೆಯ ಸಾಮರ್ಥ್ಯವಿದ್ದು, ನಿತ್ಯ 110 ಸ್ಯಾಂಪಲ್ ಪರೀಕ್ಷೆ ಮಾಡಲಾಗುವುದು. ನೆಗೆಟಿವ್ ವರದಿ ಬಂದರೆ ಇಲ್ಲಿಯೇ ಘೋಷಣೆ ಮಾಡಲಾಗುವುದು. ಒಂದು ವೇಳೆ ಪಾಸಿಟಿವ್ ಪ್ರಕರಣ ಬಂದರೆ, ಆ ಸ್ಯಾಂಪಲ್ ಮತ್ತೂಮ್ಮೆ ಪರೀಕ್ಷೆಗೆ ಬೆಂಗಳೂರಿಗೆ ಕಳುಹಿಸಲಾಗುವುದು ಎಂದು ವಿವರಿಸಿದರು.
ಮೆಕ್ಕೆಜೋಳ; ಜಿಲ್ಲೆಗೆ 30 ಕೋಟಿ: ಲಾಕ್‌ಡೌನ್ ಸಂದರ್ಭದಲ್ಲಿ ಮೆಕ್ಕೆಜೋಳ ಬೆಳೆದ ರೈತರು ಕೆಲವರು ಮಾರಾಟ ಮಾಡಿದರೆ, ಇನ್ನೂ ಕೆಲವರಿಗೆ ಮಾರಾಟ ಮಾಡಲು ಆಗಿಲ್ಲ. ಜಿಲ್ಲೆಯ ಸುಮಾರು 61 ಸಾವಿರ ರೈತರು ಮೆಕ್ಕೆಜೋಳ ಬೆಳೆದಿದ್ದು, ಅವರಿಗೆ ತಲಾ 5 ಸಾವಿರ ಪ್ರೋತ್ಸಾಹಧನ ನೀಡಲಾಗುವುದು. ಜಿಲ್ಲೆಗೆ ಸುಮಾರು 30 ಕೋಟಿ ಹಣ ಬರಲಿದೆ ಎಂದರು.
ಖಾತ್ರಿ ಯೋಜನೆಗೆ 208 ಕೋಟಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಗೆ 208 ಕೋಟಿ ರೂ. ಅನುದಾನ ದೊರೆತಿದೆ. ಈ ಹಣದಲ್ಲಿ ಸುಮಾರು 42 ಲಕ್ಷ ಮಾನವ ದಿನಗಳ ಸೃಜನೆಗೆ ಅವಕಾಶವಿದೆ. ಬೇರೆ ಜಿಲ್ಲೆಗೆ ದುಡಿಯಲು ವಲಸೆ ಹೋಗಿ ಮರಳಿ ಬಂದ ಕಾರ್ಮಿಕರಿಗೂ ಸ್ಥಳೀಯವಾಗಿ ಉದ್ಯೋಗ ನೀಡಲಾಗುವುದು. ಯಾರೂ ವಲಸೆ ಹೋಗುವುದು ಬೇಡ. ಅಲ್ಲದೇ ಯಾರಿಗೆ ಪಡಿತರ ಚೀಟಿ ಇಲ್ಲವೋ ಅವರು ಕೂಡಲೇ ಅರ್ಜಿ ಸಲ್ಲಿಸಿದರೆ, ತಕ್ಷಣ ಪಡಿತರ ಚೀಟಿ ನೀಡಲಾಗುವುದು ಎಂದು ಕಾರಜೋಳ ತಿಳಿಸಿದರು.
ಈ ವರೆಗೆ ಜಿಲ್ಲೆಯಿಂದ 4725 ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದು, 4597 ನೆಗೆಟಿವ್ ಬಂದಿದ್ದು, 71 ಪಾಸಿಟಿವ್ ಬಂದಿವೆ. 42 ಸ್ಯಾಂಪಲ್‌ಗಳ ವರದಿ ಬರಬೇಕಿದೆ. ಮೇ 17ರಿಂದ ಜಿಲ್ಲೆಯಲ್ಲೇ ಕೊರೊನಾ ಪರೀಕ್ಷೆ ನಡೆಯಲಿದ್ದು, ಸ್ಥಳೀಯವಾಗಿ ವರದಿ ಬರಲಿದೆ. ಅಲ್ಲದೇ ಜಿಲ್ಲೆಯ 14 ಮೊಬೈಲ್ ಕ್ಲಿನಿಕ್‌ನಲ್ಲಿ 7497 ಜನರಿಗೆ ಸ್ಕ್ರಿನಿಂಗ್ ಮಾಡಲಾಗಿದೆ. ಜಿಲ್ಲೆಯ 13 ಕಂಟೇನ್ಮೆಂಟ್ ಪ್ರದೇಶಗಳಲ್ಲಿ 4 ಪ್ರದೇಶಗಳನ್ನು ಕೈಬಿಡಲಾಗಿದೆ ಎಂದು ಹೇಳಿದರು.
ಹೊರ ರಾಜ್ಯದಿಂದ ಇನ್ನೂ ಬರಲಿದ್ದಾರೆ 590 ಜನ: ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಈಗಾಗಲೇ 31 ಸಾವಿರದಷ್ಟು ಜನರು ಬಂದಿದ್ದಾರೆ. ಲಾಕ್‌ಡೌನ್ ಸಡಿಲಿಕೆ ಬಳಿಕ ಬೇರೆ ರಾಜ್ಯದಿಂದ 1144 ಹಾಗೂ ಬೇರೆ ಜಿಲ್ಲೆಯಿಂದ 3310 ಜನರು ಜಿಲ್ಲೆಗೆ ಬಂದಿದ್ದಾರೆ. ಅಲ್ಲದೇ ಇನ್ನೂ 590 ಜನ ಬೇರೆ ರಾಜ್ಯದಿಂದ ಹಾಗೂ 1656 ಜನ ಬೇರೆ ಜಿಲ್ಲೆಯಿಂದ ಬರಲು ಅನುಮತಿ ಕೇಳಿದ್ದಾರೆ. ಹೊರ ರಾಜ್ಯದಿಂದ ಬಂದವರಿಗೆ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುವುದು ಎಂದು ಹೇಳಿದರು.
ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಡಾ|ವೀರಣ್ಣ ಚರಂತಿಮಠ, ಡಿಸಿ ಕ್ಯಾಪ್ಟನ್ ಡಾ| ರಾಜೇಂದ್ರ, ಎಸ್ಪಿ ಲೋಕೇಶ ಜಗಲಾಸರ, ಜಿ.ಪಂ. ಸಿಇಒ ಗಂಗೂಬಾಯಿ ಮಾನಕರ, ಡಿಎಚ್‌ಒ ಡಾ|ಅನಂತ ದೇಸಾಯಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಪ್ರಕಾಶ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.