ವಿಜಯಪುರ: ಜಿಲ್ಲೆಯಲ್ಲಿ ಮಂಗಳವಾರ ಮತ್ತೆ 52 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದರೆ, ಮತ್ತೂಂದೆಡೆ ಚಿಕಿತ್ಸೆ ಫಲಕಾರಿಯಾಗದೇ ಸೋಂಕಿತ ಮೂವರು ಮೃತಪಟ್ಟಿದ್ದಾರೆ. ಇದರ ಮಧ್ಯೆ ಗುಣಮಟ್ಟದ ಚಿಕಿತ್ಸೆಯಿಂದ 80 ಜನರು ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.
ವಿಜಯಪುರ ನಗರದ ಶಾಪೇಟೆಯ 55 ವರ್ಷದ ಸೋಂಕಿತ ಪಿ 24773 ಜು. 5ರಂದು ನಿಮೋನಿಯಾ, ಜ್ವರ, ತೀವ್ರ ಉಸಿರಾಟ ತೊಂದರೆ ಲಕ್ಷಣಗಳಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಕೋವಿಡ್ ಸೋಂಕು ದೃಢಪಟ್ಟಿದ್ದು ಜು. 11ರಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ನಗರದ ಮುರಾಣಕೇರಿ ಕಾಲೋನಿ ನಿವಾಸಿ 50 ವರ್ಷದ ಸೋಂಕಿತ ಪಿ 31880, ಜು. 10ರಂದು ಜ್ವರ, ತೀವ್ರ ಉಸಿರಾಟ ತೊಂದರೆ ಲಕ್ಷಣಗಳಿಂದ, ದೀರ್ಘ ಕಾಲದ ಸಕ್ಕರೆ-ಹೃದಯ ಕಾಯಿಲೆ, ರಕ್ತದೊತ್ತಡ ಹೀಗೆ ಹಲವು ರೋಗಗಳಿಂದ ಬಳಲುತ್ತಿದ್ದು, ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ಪಾಸಿಟಿವ್ ದೃಢಪಟ್ಟು ಅದೇ ದಿನ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ನಗರದ ಕಾಳಿಕಾ ನಗರದ ಆಶ್ರಮದ ಪ್ರದೇಶದ ನಿವಾಸಿ 68 ವರ್ಷದ ಸೋಂಕಿತ ಪಿ 35216 ಜು. 7ರಂದು ಕೆಮ್ಮು, ತೀವ್ರ ಉಸಿರಾಟ ತೊಂದರೆ ಲಕ್ಷಣಗಳಿಂದ ಬಳಲುತ್ತಿದ್ದರು. 7 ವರ್ಷದಿಂದ ಸಕ್ಕರೆ ಕಾಯಿಲೆ ಇದ್ದ ಅವರಿಗೆ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಸೋಂಕು ದೃಢಪಟ್ಟಿತ್ತು. ಸದರಿ ರೋಗಿ ಜು. 13ರಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಶಿಷ್ಟಾಚಾರದಂತೆ ನೆರವೇರಿಸಲಾಗಿದೆ. ಈ ಮೂವರ ಸಾವಿನೊಂದಿಗೆ ಜಿಲ್ಲೆಯಲ್ಲಿ ಸೋಂಕಿನಿಂದ ಮೃತರಾದವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ.
ಮಂಗಳವಾರವೇ ಜಿಲ್ಲೆಯಲ್ಲಿ ಮತ್ತೆ 52 ಜನರಿಗೆ ಕೋವಿಡ್ ಸೋಂಕು ದೃಢಟ್ಟಿದ್ದು ಈವರೆಗೆ 896 ಜನರಿಗೆ ಸೋಂಕು ತಗುಲಿದಂತಾಗಿದೆ. ಇದರಲ್ಲಿ 15 ಪೊಲೀಸರು ಹಾಗೂ ತಹಶೀಲ್ದಾರ್ ಕಚೇರಿಯ ನಾಲ್ವರು ಸಿಬ್ಬಂದಿಗಳಿಗೆ ಸೋಂಕು ದೃಢಪಟ್ಟಿದೆ. ಸದರಿ ಕಚೇರಿಗಳ ಸೀಲ್‌ಡೌನ್ ಮತ್ತು ಸ್ಯಾನಿಟೈಸೇಷನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಕೋವಿಡ್
ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆಯಿಂದಾಗಿ 80 ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಇದರೊಂದಿಗೆ ಆಸ್ಪತ್ರೆಯಿಂದ ಬಿಡುಗಡೆ ಆದವರ ಸಂಖ್ಯೆ 654ಕ್ಕೆ ಏರಿಕೆಯಾಗಿದೆ. ಉಳಿದಂತೆ 223 ಸೋಂಕಿತರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.