ಮುಂಬಯಿ, ಜೂ. 5 : ರಾಜ್ಯದಲ್ಲಿ ಕೋವಿಡ್ ಸೋಂಕಿತ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ವೈದ್ಯರು ಕೂಡ ದೊಡ್ಡ ಪ್ರಮಾಣದಲ್ಲಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಭಾರತೀಯ ವೈದ್ಯಕೀಯ ಸಂಘ (ಐಎಂಎ) ಪ್ರಕಾರ, ರಾಜ್ಯದಲ್ಲಿ 500 ಕ್ಕೂ ಹೆಚ್ಚು ವೈದ್ಯರು ಕೋವಿಡ್ ಮಹಾಮಾರಿಯ ಸೋಂಕಿಗೆ ಒಳಗಾಗಿದ್ದಾರೆ.
ಐಎಂಎ ಸದಸ್ಯ ನೀಡಿದ ಮಾಹಿತಿ ಪ್ರಕಾರ, ಕೋವಿಡ್ ಸೋಂಕಿಗೆ ಗುರಿಯಾದ ವೈದ್ಯರ ಪೈಕಿ ಸರಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರ ಸಂಖ್ಯೆ ಹೆಚ್ಚಾಗಿದೆ. ಕೋವಿಡ್ ರಾಜ್ಯದಲ್ಲಿ ಸಾರ್ವಜನಿಕ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಕೋವಿಡ್ ಮತ್ತು ಲಾಕ್‌ಡೌನ್ ಸಮಯದಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಮತ್ತು ನೌಕರರು ಸೋಂಕಿಗೆ ಗುರಿಯಾಗಿದ್ದಾರೆ.
ರಾಜ್ಯದಲ್ಲಿ 500 ಕ್ಕೂ ಹೆಚ್ಚು ವೈದ್ಯರಿಗೆ ಸೋಂಕು ತಗಲಿವೆ. ಕೋವಿಡ್ ಸೋಂಕಿಗೆ ಹೆಚ್ಚಾಗಿ ಸರಕಾರಿ ನಿವಾಸಿ ವೈದ್ಯರು ಗುರಿಯಾಗಿದ್ದಾರೆ. ಎಲ್ಲಕ್ಕಿಂತ ಅಧಿಕ ಮುಂಬಯಿ ಸಯನ್ ಆಸ್ಪತ್ರೆಯಲ್ಲಿ 70 ವೈದ್ಯರು ಕೋವಿಡ್ ಸೋಂಕಿಗೆಗುರಿಯಾಗಿದ್ದಾರೆ. ಅನಂತರ ಕೆಇಎಂನಲ್ಲಿ 40 ವೈದ್ಯರು ಮತ್ತು ನಾಯರ್ ಆಸ್ಪತ್ರೆಯಲ್ಲಿ 35 ವೈದ್ಯರು ಸೊಂಕಿತರಾಗಿದ್ದಾರೆ ಎಂದು ಮಹಾರಾಷ್ಟ್ರ ನಿವಾಸಿ ವೈದ್ಯರ ಸಂಘಟನೆ ಮಾಹಿತಿ ನೀಡಿದೆ. ಐಎಂಎ ಮಹಾರಾಷ್ಟ್ರಘಟಕದ ಅಧ್ಯಕ್ಷ ಡಾ| ಅವಿನಾಶ್ ಭೋಡೆ ಮಾತನಾಡಿ, ಕೋವಿಡ್ ಸೋಂಕಿನಿಂದ ಮುಂಬಯಿಯಲ್ಲಿ ಸುಮಾರು ಮೂವರು ಅಲೋಪತಿ ವೈದ್ಯರು ಸಾವನ್ನಪ್ಪಿದ್ದಾರೆ. ಪುಣೆಯಲ್ಲಿ ವೈದ್ಯರೊಬ್ಬರು ಮೃತಪಟ್ಟಿದ್ದಾರೆ.
ಆದರೆ, ನಮಗೆ ಸರಕಾರದ ವತಿಯಿಂದ ಹೆಸರುಗಳು ಬಂದಿಲ್ಲ. ಕೋವಿಡ್ ಸೋಂಕಿತ ವೈದ್ಯರಿಗಾಗಿ ಕೆಲವು ಜಿಲ್ಲೆಗಳಲ್ಲಿಯ ಹಾಸಿಗೆಗಳನ್ನು ಕಾಯ್ದಿರಿಸಲು ಖಾಸಗಿ ಆಸ್ಪತ್ರೆಗಳು ಒಪ್ಪಿಕೊಂಡಿವೆ. ಆದರೆ ಕೆಲವು ಸ್ಥಳಗಳಲ್ಲಿಯ ಜಿಲ್ಲಾಧಿಕಾರಿಗಳು ಅಂತಹ ಕಾಯ್ದಿರಿಸಿದ ಹಾಸಿಗೆಗಳನ್ನು ಇಡಲು ನಿರಾಕರಿಸಿದ್ದಾರೆ ಎಂದು ಭೋಂಡೆ ಹೇಳಿದ್ದಾರೆ. ಮುಂಬಯಿ ಆಸ್ಪತ್ರೆಯಲ್ಲಿ ನಿಭಾಯಿಸಬಲ್ಲಷ್ಟು ರೋಗಿಗಳಿದ್ದಾರೆ. ಇತರ ಕೆಲವು ಜಿಲ್ಲೆಗಳಲ್ಲಿ, ಖಾಸಗಿ ಆಸ್ಪತ್ರೆಗಳು ವೈದ್ಯರಿಗೆ ಹಾಸಿಗೆಗಳನ್ನು ಕಾಯ್ದಿರಿಸಲು ಪ್ರಾರಂಭಿಸಿವೆ. ಐಎಂಎ ರಾಜ್ಯದಲ್ಲಿ 75,000 ವೈದ್ಯಕೀಯ ಸದಸ್ಯರನ್ನು ಹೊಂದಿದೆ. ಆದ್ದರಿಂದ, ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ವೈರಸ್ ಸೋಂಕಿತ ವೈದ್ಯರ ಚಿಕಿತ್ಸೆಗಾಗಿ ಒಪ್ಪಂದಕ್ಕೆ ಸಂಸ್ಥೆ ಸಿದ್ಧತೆ ನಡೆಸಿದೆ ಎಂದರು.