ಲಂಡನ್: ಜಗತ್ತಿನಾದ್ಯಂತ ಲಕ್ಷಾಂತರ ಮಂದಿಯನ್ನು ಬಲಿಪಡೆದು ಮನುಕುಲವನ್ನೇ ಕಾಡಿದ ಕೋವಿಡ್ ಸೋಂಕು, ಜನರ ಜೀವವನ್ನಷ್ಟೇ ಅಲ್ಲ, ಜೀವಿತಾವಧಿಯನ್ನೂ ಕಿತ್ತುಕೊಂಡಿದೆ ಎಂಬ ಆಘಾತಕಾರಿ ಅಂಶವೊಂದು ಈಗ ಬಯಲಾಗಿದೆ.
2ನೇ ವಿಶ್ವಯುದ್ಧದ ಬಳಿಕ ಜನರ ಜೀವಿತಾವಧಿ ಅತಿಹೆಚ್ಚು ಕುಂಠಿತಗೊಂಡಿದ್ದು ಕೋವಿನ್ ಸೋಂಕಿನಿಂದಾಗಿ. ಮರಣಪ್ರಮಾಣದಲ್ಲಿ ಜಗತ್ತು ಈವರೆಗೆ ಸಾಧಿಸಿದ್ದ ಪ್ರಗತಿಯನ್ನು ಕಣ್ಣಿಗೆ ಕಾಣದ ವೈರಸ್‌ವೊಂದು ಕ್ಷಣಮಾತ್ರದಲ್ಲಿ ನುಚ್ಚು ನೂರು ಮಾಡಿದೆ ಎಂದು ಆಕ್ಸ್‌ಫರ್ಡ್ ವಿವಿ ನಡೆಸಿದ ಅಧ್ಯಯನವೊಂದು ತಿಳಿಸಿದೆ. ಆಕ್ಸ್‌ಫರ್ಡ್‌ನ ಲೆವೆರ್‌ಹೆಲ್ಮ್ ಸೆಂಟರ್ ಫಾರ್ ಡೆಮಾಗ್ರಾಫಿಕ್ ಸೈನ್ಸ್‌ನ ಸಂಶೋಧಕರು ಅಧ್ಯಯನ ನಡೆಸಿದ್ದು, ಅದರಲ್ಲಿ ಭಾರತೀಯ ಮೂಲದ ಡಾ| ರಿಧಿ ಕಶ್ಯಪ್ ಕೂಡ ಒಬ್ಬರು.
ಯುರೋಪ್, ಅಮೆರಿಕ, ಚಿಲಿ ಸೇರಿ 29 ದೇಶಗಳ ಮರಣಪ್ರಮಾಣದ ದಾಖಲೆಗಳನ್ನು ಇಟ್ಟುಕೊಂಡು ಈ ಅಧ್ಯಯನ ನಡೆಸಲಾಗಿದೆ. 29ರ ಪೈಕಿ 27 ದೇಶಗಳಲ್ಲಿ ಜೀವಿತಾವಧಿ 2020ರಲ್ಲಿ ಕುಂಠಿತಗೊಂಡಿದೆ. 2015ಕ್ಕೆ ಹೋಲಿಸಿದರೆ 2020ರಲ್ಲಿ 15 ದೇಶಗಳ ಮಹಿಳೆಯರು ಮತ್ತು 10 ದೇಶಗಳ ಪುರುಷರ ಜೀವಿತಾವಧಿ ಇಳಿಕೆಯಾಗಿದೆ. ಜೀವಿತಾವಧಿ ಹೆಚ್ಚು ಕುಸಿತಗೊಂಡಿದ್ದು ಅಮೆರಿಕದಲ್ಲಿ. ಪುರುಷರ ಜೀವಿತಾವಧಿ 2019ಕ್ಕೆ ಹೋಲಿಸಿದರೆ ಈಗ 2.2 ವರ್ಷಗಳಷ್ಟು ಕುಸಿತವಾಗಿದೆ.
ಇದನ್ನೂ ಓದಿ:ಕೋವಿಡ್ : ರಾಜ್ಯದಲ್ಲಿಂದು 504 ಮಂದಿಯಲ್ಲಿ ಪ್ರಕರಣ ಪತ್ತೆ : 893 ಸೋಂಕಿತರು ಗುಣಮುಖ
ಈ ಅಧ್ಯಯನ ಬಳಿಕ ನಮಗೆ ಕೊರೊನಾ ಎನ್ನುವುದು ಕೆಲವು ದೇಶಗಳ ಮೇಲೆ ಎಂಥ ಭೀಕರ ಪರಿಣಾಮ ಬೀರಿದೆ ಎನ್ನುವುದು ಅರಿವಾಯಿತು. ಕಡಿಮೆ ಹಾಗೂ ಮಧ್ಯಮ ಆದಾಯವಿರುವ ದೇಶಗಳಲ್ಲಿಯೂ ಇಂಥ ಅಧ್ಯಯನ ನಡೆದರೆ, ಜಾಗತಿಕವಾಗಿ ಕೊರೊನಾ ಬೀರಿರುವ ಪರಿಣಾಮ ಅರ್ಥವಾಗಬಹುದು.
-ಡಾ| ರಿಧಿ ಕಶ್ಯಪ್, ಅಧ್ಯಯನ ವರದಿಯ ಲೇಖಕಿ