ಬೆಂಗಳೂರು/ಚಿಕ್ಕಬಳ್ಳಾಪುರ: ಕೋವಿಡ್-19 ಸೋಂಕು ತಾಗಿದ್ದ ಚಿಕ್ಕಬಳ್ಳಾಪುರದ ವೃದ್ಧರೊಬ್ಬರು ಇಂದು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ರಾಮುಲು, ಚಿಕ್ಕಬಳ್ಳಾಪುರದ 69 ವರ್ಷದ ವ್ಯಕ್ತಿಯೊಬ್ಬರು ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದಾರೆ. ಪಾರ್ಥಿವ ಶರೀರವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಅಂತ್ಯಕ್ರಿಯೆಗೆ ಇಲಾಖೆಯು ಸಿದ್ಧತೆ ನಡೆಸುತ್ತಿದೆ. ದಯಮಾಡಿ ಸಾರ್ವಜನಿಕರು ಮನೆಯಲ್ಲೇ ಸುರಕ್ಷಿತವಾಗಿರಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ಹಲವು ದಿನಗಳಿಂದ ತೀವ್ರ ಉಸಿರಾಟದ ತೊಂದರೆಯಿಂದ ಬೆಂಗಳೂರಿನ ವಿಕ್ರಮ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿಕ್ಕಬಳ್ಳಾಪುರದ 17ನೇ ವಾಡ್೯ ನಿವಾಸಿಯ ಗಂಟಲು ದ್ರವ್ಯದ ಮಾದರಿಯನ್ನು ಮಂಗಳವಾರ ವೈದ್ಯಕೀಯ ಪರೀಕ್ಷೆಗೆ ಒಪಡಿಸಿದಾಗ ಸೋಂಕು ಪಾಸಿಟಿವ್ ಬಂದಿತ್ತು. ಕೂಡಲೇ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರ ಸಂಪರ್ಕದಲ್ಲಿ ಇದ್ದ ಐದು ಮಂದಿಯನ್ನು ಚಿಕ್ಕಬಳ್ಳಾಪುರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮತ್ತೊಬ್ಬರು ಬೆಂಗಳೂರಿನಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಜಿಲ್ಲೆಯಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ ಎರಡಕ್ಕೆ ಏರಿಕೆ ಕಂಡಿದೆ. ಈ ಹಿಂದೆ ಗೌರಿಬಿದನೂರು ಪಟ್ಟಣದಲ್ಲಿ 70 ವರ್ಷದ ವೃದ್ದೆ ಬಲಿಯಾಗಿದ್ದಳು.
ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಮಂಗಳವಾರ ಸಂಜೆಯ ವರದಿಯಂತೆ ರಾಜ್ಯದಲ್ಲಿ 26 ಸೋಂಕಿತ ಪ್ರಕರಣಗಳು ದೃಢವಾಗಿದೆ.