Advertisement

ಕೋವಿಡ್ ಹೆಚ್ಚಳ: ದ.ಕ. ಆಸ್ಪತ್ರೆಗಳಲ್ಲಿ ಜಾಗವಿಲ್ಲ!

11:03 PM Sep 05, 2020 | mahesh |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ದಿನೇದಿನೆ ಏರುತ್ತಿದ್ದು, ವೆಂಟಿಲೇಟರ್‌ ಮತ್ತು ಐಸಿಯು ಬೆಡ್‌ ಭರ್ತಿಯಾದ ಪರಿಣಾಮ ರೋಗಿಗಳು ತುರ್ತು ಚಿಕಿತ್ಸೆಗೆ ಪರದಾಡುವಂತಾಗಿದೆ. ಸರಕಾರಿ ವೆನ್ಲಾಕ್‌ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ 30 ಬೆಡ್‌ಗಳಿದ್ದು, ಅಷ್ಟೇ ವೆಂಟಿಲೇಟರ್‌ಗಳಿವೆ. ಅಲ್ಲದೆ ವಾರ್ಡ್‌ನಲ್ಲಿ ಹೈ ಡಿಪೆಂಡೆನ್ಸಿ ಯುನಿಟ್‌ ತೆರೆದು ಹೆಚ್ಚುವರಿಯಾಗಿ 15 ವೆಂಟಿಲೇಟರ್‌ ಬೆಡ್‌ ಹಾಕಲಾಗಿದೆ. 380 ಹೈ ಆಕ್ಸಿಜನ್‌ ಬೆಡ್‌ ಇದೆ. ಕೊರೊನಾಕ್ಕೆ ಚಿಕಿತ್ಸೆ ನೀಡುವ ಜಿಲ್ಲೆಯ 9 ಖಾಸಗಿ ಆಸ್ಪತ್ರೆಗಳು ಮತ್ತು ವೆನ್ಲಾಕ್‌ ಸಹಿತ ಒಟ್ಟು 120 ಐಸಿಯು ಬೆಡ್‌, 117 ವೆಂಟಿಲೇಟರ್‌ ಬೆಡ್‌ ಮತ್ತು 611 ಹೈ ಆಕ್ಸಿಜನ್‌ ಬೆಡ್‌ಗಳು ಕೊರೊನಾ ರೋಗಿ ಗಳಿಗೆ ಮೀಸಲಾಗಿವೆ. ಸದ್ಯ ಇವೆಲ್ಲವೂ ಭರ್ತಿಯಾಗಿದ್ದು, ಹೊಸದಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗೆ ಅಗತ್ಯವಿರುವವರು ದಾರಿಕಾಣದಾಗಿದ್ದಾರೆ.

Advertisement

ಆಸ್ಪತ್ರೆಗಳ ಅಸಹಾಯಕತೆ
ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50 ಹಾಸಿಗೆಗಳನ್ನು ಕೊರೊನಾ ರೋಗಿಗಳಿಗೆ ಮೀಸಲಿಡಬೇಕೆಂಬ ನಿಯಮವನ್ನು ಎಲ್ಲ ಆಸ್ಪತ್ರೆಗಳು ಪಾಲಿಸಿವೆ. ಐಸಿಯುವನ್ನು ಸಾಮಾನ್ಯ ಐಸಿಯು, ಕೋವಿಡ್‌ ಐಸಿಯು ಮತ್ತು ಕೋವಿಡ್‌ ಶಂಕಿತರಿಗಿರುವ ಐಸಿಯು ಎಂದು ವಿಭಾಗಗಳನ್ನು ಮಾಡಿ
ಕೊಳ್ಳಲಾಗಿದೆ. ಅಪಘಾತ ಸಹಿತ ಯಾವುದೇ ತತ್‌ಕ್ಷಣದ ಚಿಕಿತ್ಸೆ ಅಗತ್ಯವಿರುವವರು ಬಂದರೂ ಸಾಮಾನ್ಯ ಐಸಿಯುವಿಗೆ ಸ್ಥಳಾಂತರಿಸುವ ಮುನ್ನ ಕೊರೊನಾ ಪರೀಕ್ಷೆ ಅಗತ್ಯ. ವರದಿಯ ಬಳಿಕ ನೆಗೆಟಿವ್‌ ಇದ್ದಲ್ಲಿ ಸಾಮಾನ್ಯ ಐಸಿಯುಗೆ, ಪಾಸಿಟಿವ್‌ ಬಂದಲ್ಲಿ ಕೋವಿಡ್‌ ಐಸಿಯುಗೆ ಸ್ಥಳಾಂತರಿಸಲಾಗುತ್ತದೆ. ವರದಿ ಬರುವ ಮೊದಲೇ ಸಾಮಾನ್ಯ ಐಸಿಯುಗೆ ಕಳುಹಿಸಿದರೆ ಬಳಿಕ ಪಾಸಿಟಿವ್‌ ಎಂದಾದಲ್ಲಿ ಆತನಿಂದ ಸಾಮಾನ್ಯ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುವರಿಗೂ ಕೊರೊನಾ ಹರಡುವ ಸಾಧ್ಯತೆ ಇರುವುದರಿಂದ ಈ ರೀತಿಯ ಮುನ್ನೆಚ್ಚರಿಕೆ ಅನಿವಾರ್ಯವೂ ಆಗಿದೆ. ಹೀಗಾಗಿ ಆಸ್ಪತ್ರೆ ಮಂದಿಯೂ ಅಸಹಾಯಕರಾಗಿದ್ದಾರೆ.

ರೋಗಿಯ ಪರದಾಟ
ವೆನ್ಲಾಕ್‌ನ ಐಸಿಯುವಿನಲ್ಲಿ ಹಾಸಿಗೆ ಲಭ್ಯವಿಲ್ಲ ಎಂಬುದಾಗಿ ಖಾಸಗಿ ಆಸ್ಪತ್ರೆಗಳಿಗೆ ತೆರಳುವ ರೋಗಿ ಕಡೆಯವರಿಗೆ ಅಲ್ಲಿಯೂ ಐಸಿಯು ಫುಲ್‌ ಎಂಬ ಉತ್ತರ ಸಿಗುತ್ತಿದೆ. ಗಂಭೀರ ಸ್ಥಿತಿಯಲ್ಲಿರುವವರಿಗೆ ಪ್ರಾಣಾಪಾಯವೂ ಎದುರಾಗುತ್ತಿದೆ. ಹೊರ ಜಿಲ್ಲೆಯವರೂ ಮಂಗಳೂರಿಗೆ ಚಿಕಿತ್ಸೆಗೆ ಬರುವುದರಿಂದ ಹೆಚ್ಚಿನ ಒತ್ತಡ ಇಲ್ಲಿದೆ.

ಕೊನೆಯವರೆಗೆ ಕಾಯಬೇಡಿ
ಗರ್ಭಿಣಿಯರು, 60 ವರ್ಷ ಮೇಲ್ಪಟ್ಟವರು, 10 ವರ್ಷ ಕೆಳಗಿನ ಮಕ್ಕಳು, ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು ಮತ್ತು ಸೋಂಕಿತರ ಪ್ರಾಥಮಿಕ ಸಂಪರ್ಕಿತರು ಆರಂಭಿಕ ಲಕ್ಷಣ ಕಂಡು ಬಂದಾಗಲೇ ಆಸ್ಪತ್ರೆಗೆ ಬಂದು ಪರೀಕ್ಷಿಸಿಕೊಳ್ಳಬೇಕು. ಕೊನೆಯವರೆಗೆ ಕಾದು ರೋಗ ಉಲ್ಬಣಗೊಂಡ ಮೇಲೆ ಆಸ್ಪತ್ರೆಗೆ ಧಾವಿಸಿದರೆ ಐಸಿಯು, ವೆಂಟಿಲೇಟರ್‌ ಸಮಸ್ಯೆ ಎದುರಾಗಿ ಪ್ರಾಣಕ್ಕೆರವಾಗುವ ಸಾಧ್ಯತೆ ಇರುತ್ತದೆ. ಜನರೇ ಜಾಗೃತರಾಗಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಚಂದ್ರ ಬಾಯರಿ ಮನವಿ ಮಾಡಿದ್ದಾರೆ.

1077ಕ್ಕೆ ಕರೆ ಮಾಡಿ
ಗಂಭೀರ ಸ್ಥಿತಿಯಲ್ಲಿರುವ ರೋಗಿ ಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಅಗತ್ಯವಿದ್ದು, ದಾಖಲಾಗಲು ಏನೇ ಸಮಸ್ಯೆಗಳಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಹಾಯವಾಣಿ 1077ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Advertisement

ಐಸಿಯು ಕೊರತೆಯಿದೆ: ಡಿಸಿ
ಹೊರಜಿಲ್ಲೆಯ ರೋಗಿಗಳು ಬರುತ್ತಿರುವುದರಿಂದ ಸದ್ಯ ಐಸಿಯು ಸಮಸ್ಯೆ ಎದುರಾಗಿದೆ. ಸರಕಾರದ ಕಡೆಯಿಂದ 103 ವೆಂಟಿಲೇಟರ್‌ಗಳನ್ನು ಹೆಚ್ಚುವರಿಯಾಗಿ ತರಿಸಿದ್ದು, ಕೆಲವನ್ನು ಬಳಸಿಕೊಳ್ಳಲಾಗುತ್ತಿದೆ. ಉಳಿದವುಗಳನ್ನು ಶೀಘ್ರ ವಿತರಿಸಲಾಗುವುದು. ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಸುಮಾರು 50 ಐಸಿಯು ಬೆಡ್‌, 5-8 ವೆಂಟಿಲೇಟರ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ.
– ಡಾ| ಕೆ.ವಿ. ರಾಜೇಂದ್ರ, ದ.ಕ. ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next