Advertisement

ಧಾರವಾಡ : ಗ್ರಾಮಗಳ ತುಂಬಾ ಕೊರೊನಾಯಣ

08:29 PM May 05, 2021 | Team Udayavani |

ವರದಿ: ಬಸವರಾಜ ಹೊಂಗಲ್‌

Advertisement

ಧಾರವಾಡ: ಅಮ್ಮ ಮೈಗೆ ಹಚ್ಚುವ ಸೋಪುಗಳು ಯಾಕೆ ವಾಸನೆ ಬರುತ್ತಿಲ್ಲ? ಎಂದು ಪ್ರಶ್ನೆ ಕೇಳುತ್ತಿರುವ ಹಳ್ಳಿಯ ಮಕ್ಕಳು. ಗುಟಕಾವೂ ರಚಿಸುತ್ತಿಲ್ಲವಲ್ಲೋ ಎಂದು ಪರಸ್ಪರ ಸ್ನೇಹಿತರನ್ನು ಕೇಳಿಕೊಳ್ಳುತ್ತಿರುವ ಹಳ್ಳಿಯ ಪಡ್ಡೆ ಹುಡುಗರು. ಮೈ ಕೈ ನೋವು, ನೆಗಡಿ, ಕೆಮ್ಮಿನಿಂದ ಬಳಲುತ್ತಿರುವ ರೈತ ಸಮೂಹ. ಒಟ್ಟಿನಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶವನ್ನು ಕೋವಿಡ್‌ ಸಣ್ಣಗೆ ಪ್ರವೇಶ ಮಾಡಿಯಾಗಿದ್ದು, ಇನ್ನೇನಿದ್ದರೂ ಅದನ್ನು ಎದುರಿಸುವುದೊಂದೇ ದಾರಿ.

ಹೌದು, ಇದು ವಾಸ್ತವ. ಹೆಚ್ಚು ಕಡಿಮೆ ಒಂದು ತಿಂಗಳ ಮೊದಲು ಲಾಕ್‌ಡೌನ್‌ ಹೇರಿದ್ದರೆ ಒಂದಿಷ್ಟು ಹಳ್ಳಿಗಳಲ್ಲಿಯಾದರೂ ಇಂದು ಮೊದಲಿನಂತೆ ಉತ್ತಮ ವಾತಾವರಣ ಇರಲು ಸಾಧ್ಯವಿತ್ತೋ ಏನೋ. ಜಿಲ್ಲೆಯಲ್ಲಿ 144 ಗ್ರಾಪಂಗಳ ಸುಮಾರು 250ಕ್ಕೂ ಅಧಿಕ ಹಳ್ಳಿಗಳಲ್ಲಿ ಸದ್ಯಕ್ಕೆ ಕೋವಿಡ್ ಗುಪ್ತಗಾಮಿನಿಯಾಗಿ ತೀವ್ರವಾಗಿ ಬಾಧಿಸುತ್ತಿದೆ. ಎಲ್ಲರಿಗೂ ಆರಂಭದಲ್ಲಿ ಮೈ ಕೈ ನೋವು, ಜ್ವರ, ನೆಗಡಿ, ಕೆಮ್ಮಿನ ಲಕ್ಷಣಗಳೊಂದಿಗೆ ಲಗ್ಗೆ ಹಾಕುತ್ತಿರುವ ಮಹಾಮಾರಿ ಗ್ರಾಮೀಣರನ್ನು ಸುಟ್ಟು ಸುಣ್ಣವಾಗಿಸಿದೆ. ಅದರಲ್ಲೂ ವಯಸ್ಸಾದವರು, ಲಸಿಕೆ ಪಡೆಯದವರು, ಈಗಾಗಲೇ ಬೇರೆ ರೋಗಗಳಿಂದ ಬಳಲುತ್ತಿರುವವರು, ಮುಂಚೆಯೇ ಅಸ್ತಮಾದಂತಹ ಕಾಯಿಲೆ ಇದ್ದ ರೈತರು ಅಕ್ಷರಶಃ ನೆಲಕಚ್ಚಿದ್ದಾರೆ.

ಪರೀಕ್ಷೆಮಾಡಲೇ ಇಲ್ಲ

ಹಳ್ಳಿಗಳಿಂದ ದುಡಿಯಲು ಹೊರ ರಾಜ್ಯಗಳಿಗೆ ಅದರಲ್ಲೂ ಪುಣೆ, ಮುಂಬೈ, ನಾಶಿಕ್‌, ಔರಂಗಾಬಾದ, ಕೊಲ್ಲಾಪುರ, ಸೊಲ್ಲಾಪುರ ಹಾಗೂ ಕರ್ನಾಟಕ ರಾಜಧಾನಿ ಬೆಂಗಳೂರಿನಿಂದ ಮರಳಿ ಬಂದವರಿಂದಲೇ ಹಳ್ಳಿಗಳಿಗೆ ಕೊರೊನಾ ನುಸುಳಿದೆ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಇಷ್ಟಕ್ಕೂ ಇವರೆಲ್ಲ ಕಳೆದ ಒಂದು ತಿಂಗಳಿನಿಂದ ಲಾಕ್‌ಡೌನ್‌ ಸುದ್ದಿ, ವಾರಾಂತ್ಯ ಕರ್ಫ್ಯೂ ಬಂದಾಗ ಓಡೋಡಿ ಬಂದು ಗ್ರಾಮಗಳನ್ನು ಸೇರಿಕೊಂಡು ಬಿಟ್ಟಿದ್ದಾರೆ. ಸರ್ಕಾರ ಆವಾಗ ಅವರನ್ನು ವಿಚಾರಿಸಲೇ ಇಲ್ಲ. ಗ್ರಾಮಸ್ಥರು ಕೂಡ ಈ ಬಾರಿ ಸ್ವಯಂ ಕರ್ಫ್ಯೂ ಹೇರುವ ಗೋಜಿಗೆ ಹೋಗಲೇ ಇಲ್ಲ. ಹೀಗಾಗಿ ಇದೀಗ ಕೊರೊನಾ ಎಲ್ಲೆಡೆ ಆವರಿಸಿ ಕೊಂಡಿದೆ.

Advertisement

ತಪ್ಪದ ಸೀಜನ್‌ ಜ್ವರದ ಕಾಟ
ಕೊರೊನಾ 2ನೇ ಅಲೆಯು ಅತೀ ಕ್ರೂರತೆ ಮೆರೆದು ಚಿಕಿತ್ಸೆ ಸಿಗದೇ ಸಂಕಷ್ಟಕ್ಕೆ ಒಳಗಾಗಿರುವ ಜನಸಾಮಾನ್ಯರ ಮಧ್ಯೆ 1ನೇ ಅಲೆ ಕೊರೊನಾದಲ್ಲಿ ಯಾವುದೇ ಸಂಕಷ್ಟಕ್ಕೆ ಒಳಗಾಗದೇ ಹಳ್ಳಿಯಲ್ಲಿ ಕೆಲಸ ಮಾಡಿಕೊಂಡಿದ್ದ ಗ್ರಾಮೀಣರಿಗೆ ಈ ಬಾರಿ ಸೀಜನ್‌ ಜ್ವರ ತೀವ್ರವಾಗಿ ಬಾಧಿಸುತ್ತಿದೆ. ಕೆಲವು ಹಳ್ಳಿಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಕೆಲವು ಹಳ್ಳಿಗಳಲ್ಲಿ ಸ್ಥಳೀಯ ವೈದ್ಯರೇ ದೇವರಾಗಿ ಕೆಲಸ ಮಾಡುತ್ತಿದ್ದಾರೆ.

ಲಸಿಕೆಯಿಂದ ಕೊಂಚ ರಿಲೀಫ್‌

ಹಾಗೂ ಹೀಗೂ ಕಳೆದ ಒಂದು ತಿಂಗಳ ಹಿಂದಿನ ವರೆಗೆ ಪ್ರತಿ ಗ್ರಾಮಕ್ಕೆ ಕನಿಷ್ಠ 50-75 ಜನರು ಲಸಿಕೆ ಪಡೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ. ಸ್ಥಳೀಯ ಆಶಾ ಕಾರ್ಯಕರ್ತೆಯರ ಜಾಗೃತಿ ಕಾರ್ಯಕ್ರಮಗಳು, ಜನರಲ್ಲಿ ಸ್ವಯಂಪ್ರೇರಣೆ ಅರಿವು ಇರುವವರೆಲ್ಲರೂ ತಪ್ಪದೇ ಲಸಿಕೆ ಪಡೆದುಕೊಂಡಿದ್ದಾರೆ. ಇದು ಕೊಂಚ ರಿಲೀಫ್‌ ನೀಡಿದೆ.

ಹಳ್ಳಿಗಳಲ್ಲಿ ತಲೆ ಎತ್ತಿದ ಫಾರ್ಮಸಿ

ಕೆಲವು ಗ್ರಾಮಗಳಲ್ಲಿ ಹೊಸದಾಗಿ ಸಣ್ಣ ಸಣ್ಣ ಫಾರ್ಮಸಿಗಳು ತಲೆ ಎತ್ತಿದ್ದು, ಅವೇ ಸದ್ಯಕ್ಕೆ ಗ್ರಾಮೀಣರಿಗೆ ಔಷಧಿ ಪೂರೈಸುತ್ತಿವೆ. ಇಲ್ಲವಾದರೆ ಲಾಕ್‌ಡೌನ್‌ ಮಧ್ಯೆ ಅವರು ಹುಬ್ಬಳ್ಳಿ-ಧಾರವಾಡ ಸೇರಿದಂತೆ ಪಟ್ಟಣ ಪ್ರದೇಶಗಳಿಗೆ ಬಂದು ಔಷಧಿಗಳನ್ನು ಕೊಂಡುಕೊಂಡು ಹೋಗಬೇಕಾಗಿತ್ತು.

ಪರೀಕ್ಷೆಗೆ ಹಳ್ಳಿಗರ ಹಿಂದೇಟು  

ಹಳ್ಳಿಗಳಲ್ಲಿ ಕೋವಿಡ್‌ ಪರೀಕ್ಷೆಗೆ ಯಾರೂ ಮುಂದಾಗುತ್ತಿಲ್ಲ. ಒಂದು ವೇಳೆ ಮನೆ ಮನೆ ಪರೀಕ್ಷೆ ಮಾಡಿಸಿದರೆ ಪ್ರತಿ ಮನೆಯಲ್ಲೂ ಕನಿಷ್ಠ ಒಬ್ಬಿಬ್ಬರಿಗೆ ಕೋವಿಡ್‌ ಸೋಂಕು ಇರುವುದು ಪತ್ತೆಯಾಗುತ್ತದೆ. ಕೋವಿಡ್‌ ಲಕ್ಷಣಗಳಿರುವವರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಇದೀಗ ಲಕ್ಷ ದಾಟಿರಬಹುದು. ಸರ್ಕಾರದ ಬಳಿಯೂ ಯಾವುದೇ ಅಂಕಿ-ಅಂಶಗಳು ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next