ವರದಿ : ಬಸವರಾಜ ಹೊಂಗಲ್
ಧಾರವಾಡ: ಒಂದೆಡೆ ಹಳ್ಳಿಗಳನ್ನು ಹಿಂಡಿ ಹಿಪ್ಪಿ ಮಾಡುತ್ತಿರುವ ಕೊರೊನಾ ಮಹಾಮಾರಿ, ಇನ್ನೊಂದೆಡೆ ಸಾಲು ಸಾಲಾಗಿ ಬೀಳುತ್ತಿರುವ ಮುಂಗಾರುಪೂರ್ವ ಮಳೆಗಳು, ಮನೆಯಲ್ಲಿರುವವರಿಗೆಲ್ಲ ಜ್ವರ, ನೆಗಡಿ, ಕಫ, ದನಕರುಗಳ ಸಾಕುವುದು ಇನ್ನೊಂದು ಸವಾಲು, ಇದರ ಮಧ್ಯೆಯೇ ಬಿತ್ತನೆಗೆ ಬೀಜ ಸ್ವತ್ಛಗೊಳಿಸಬೇಕು, ಹೊಲ ಹಸನು ಮಾಡಬೇಕು.
ಹೌದು. ಗ್ರಾಮಾಂತರ ಪ್ರದೇಶ ಅಕ್ಷರಶಃ ಕೊರೊನಾ ಎರಡನೇ ಅಲೆಗೆ ಸಿಲುಕಿ ನರಳಿ ಹೋಗಿದ್ದು,ಇಡೀ ರೈತ ಸಂಕುಲ ತೀವ್ರ ಆತಂಕಕ್ಕೊಳಗಾಗಿದೆ. ಕಳೆದ ವರ್ಷ ಲಾಕ್‌ಡೌನ್ ಸಂದರ್ಭದಲ್ಲಿ ಹೊಲಮನೆ ಕೆಲಸ ಮಾಡಿಕೊಂಡು ಹಾಗೂ ಹೀಗೂ ಸಮಯ ತಳ್ಳಿದ್ದ ಗ್ರಾಮೀಣರಿಗೆ ರೋಗ ಲಕ್ಷಣಗಳೇ ಕಾಣಿಸಿಕೊಂಡಿರಲಿಲ್ಲ. ಅವರ ಆರೋಗ್ಯ ಕೂಡ ಮಹಾಮಾರಿಯನ್ನು ದೂರವಿಟ್ಟಿತ್ತು. ಆದರೆ ಈ ವರ್ಷ ನಗರಗಳಿಂದ ಹಳ್ಳಿಗಳಿಗೆ ಮರಳಿದವರು ಕ್ವಾರಂಟೈನ್ ಆಗದೇ ಎಲ್ಲೆಂದರಲ್ಲಿ ಓಡಾಡಿ, ಮದುವೆ, ಜಾತ್ರೆ ಮಾಡಿದ್ದು, ಇದೀಗ ಗ್ರಾಮೀಣ ಪ್ರದೇಶದಲ್ಲಿ ಮನೆಗೊಬ್ಬರು ತೀವ್ರ ಜ್ವರ ಸೇರಿದಂತೆ ಕೊರೊನಾ ಲಕ್ಷಣಗಳಿಂದಲೇ ನರಳುತ್ತಿದ್ದಾರೆ. ಸ್ಥಳೀಯ ವೈದ್ಯರು ಏನೆಲ್ಲ ಕಸರತ್ತು ಮಾಡಿದರೂ ಕೆಲವರನ್ನು ಉಳಿಸಿಕೊಳ್ಳುವುದೂ ಕಷ್ಟವಾಗುತ್ತಿದೆ.
ಬಿತ್ತನೆಗೆ ಸಿದ್ಧತೆ: ಜಿಲ್ಲೆಯಲ್ಲಿ ಪ್ರತಿವರ್ಷ ಮುಂಗಾರು ಪೂರ್ವ ಮಳೆಗಳು ಬೀಳುತ್ತಿದ್ದಂತೆಯೇ ಯುಗಾದಿ ಮತ್ತು ಬಸವ ಜಯಂತಿ ಮಧ್ಯದಲ್ಲಿಯೇ ಭೂಮಿಯನ್ನು ಬಿತ್ತನೆಗೆ ಹದ ಮಾಡುವುದು ಸಾಮಾನ್ಯ. ಈ ವರ್ಷ ಎಲ್ಲಾ ಹಳ್ಳಿಗಳಲ್ಲೂ ಕಳೆದ 15 ದಿನಗಳಿಂದ ಉತ್ತಮ ಮಳೆ ಸುರಿಯುತ್ತಲೇ ಇದೆ. ಭೂಮಿ ಹಸನು ಮಾಡುವ ರೈತರು ಮಾಡುತ್ತಲೇ ಇದ್ದಾರೆ. ಆದರೆ ಮೇಲಿಂದ ಮೇಲೆ ಗ್ರಾಮಗಳಲ್ಲಿ ಸಂಭವಿಸುತ್ತಿರುವ ಅಸಹಜ ಸಾವುಗಳು ರೈತ ಸಂಕುಲವನ್ನೇ ಬೆಚ್ಚಿ ಬೀಳುವಂತೆ ಮಾಡಿದ್ದು, ಕೃಷಿ ಚಟುವಟಿಕೆ ಕೈಗೊಳ್ಳಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಿಗಳು, ಹಳ್ಳಿಯಲ್ಲಿನ ನೆಂಟಿಷ್ಟರು, ಅಕ್ಕಪಕ್ಕದವರು ಹೀಗೆ ಪ್ರತಿದಿನ ಒಂದೊಂದು ಕುಟುಂಬದಲ್ಲೂ ಒಂದೊಂದು ಸಾವು ಸಂಭವಿಸುತ್ತಿದ್ದು, ಕೃಷಿಕರನ್ನು ಆತಂಕಕ್ಕೀಡು ಮಾಡಿದೆ.
ಜಿಲ್ಲೆಯಲ್ಲಿ ಕಳೆದ ವರ್ಷ ಇಷ್ಟೊತ್ತಿಗಾಗಲೇ 2 ಲಕ್ಷ ಹೆಕ್ಟೇರ್ ಭೂಮಿ ಬಿತ್ತನೆಗೆ ಸಜ್ಜಾಗಿತ್ತು. ಈ ವರ್ಷ ಇದು 1ಲಕ್ಷ ಹೆಕ್ಟೇರ್‌ಗೆ ಸೀಮಿತವಾಗಿದೆ ಎನ್ನುತ್ತಿದ್ದಾರೆ ಕೃಷಿ ಇಲಾಖೆ ಅಧಿಕಾರಿಗಳು. ತಾಲೂಕಾವಾರು ಲೆಕ್ಕದಲ್ಲಿ ಧಾರವಾಡ, ಕಲಘಟಗಿ, ಅಳ್ನಾವರ ತಾಲೂಕಿನಲ್ಲಿ ಅತೀ ಹೆಚ್ಚಾಗಿ ಭತ್ತ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇನ್ನು ಧಾರವಾಡ ತಾಲೂಕಿನ ಪೂರ್ವಭಾಗ, ಹುಬ್ಬಳ್ಳಿ, ಕುಂದಗೋಳ, ನವಲಗುಂದ, ಅಣ್ಣಿಗೇರಿ ತಾಲೂಕಿನಲ್ಲಿ ಶೇಂಗಾ, ಸೋಯಾ, ಹೆಸರು, ಆಲೂಗಡ್ಡೆ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.