Advertisement

ಕೋವಿಡ್-19 ದ್ವಿತೀಯ ಅಲೆ ತಡೆಗೆ ಡಿಸೆಂಬರ್‌ ನಿರ್ಣಾಯಕ

06:48 AM Nov 30, 2020 | keerthan |

ಬೆಂಗಳೂರು: ಮೊದಲ ಹಂತದ ಪರೀಕ್ಷೆ ಗೆದ್ದಾಯಿತು. ಈಗ ಎರಡನೇ ಹಂತದ ಸರದಿ. ಈ  ಪರೀಕ್ಷೆಯಲ್ಲಿ ವಿಧಾನಸಭೆ ಮತ್ತು ಲೋಕ ಸಭೆ ಉಪ ಚುನಾವಣೆಗಳು ಹಾಗೂ ಗ್ರಾಮ ಪಂಚಾಯತ್‌ ಚುನಾವಣೆ ಅಬ್ಬರ, ಶಾಲೆ ಪುನರಾರಂಭ, ಚಳಿಯ ನಡುಕ, ವರ್ಷಾಂತ್ಯದ ಸಂಭ್ರಮ ಇವೆಲ್ಲವೂ ಸೇರಿವೆ. ಇದರಲ್ಲಿ ಉತ್ತೀರ್ಣರಾಗಲು ಈಗಿನಿಂದಲೇ ಪೂರ್ವ ಸಿದ್ಧತೆ ನಡೆಯಬೇಕಿದೆ!

Advertisement

ರಾಜ್ಯದ ಮಟ್ಟಿಗೆ ಡಿಸೆಂಬರ್‌ ತಿಂಗಳು ಎರಡನೇ ಅಲೆಯನ್ನು ತಡೆಯುವಲ್ಲಿ ಮತ್ತೂಂದು ನಿರ್ಣಾಯಕ ಘಟ್ಟ ಆಗಲಿದೆಯೇ? – ಹೌದು ಎನ್ನುತ್ತಾರೆ ರಾಜ್ಯದ ಆರೋಗ್ಯ ತಜ್ಞರು.

ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಕೆಯಾದ ಅನಂತರ ಎರಡು ಕ್ಷೇತ್ರಗಳ ಉಪಚುನಾವಣೆ, ನಾಡ ಹಬ್ಬ ಸಹಿತ ಸರಣಿ ಹಬ್ಬಗಳು, ಪದವಿ ಕಾಲೇಜು ಆರಂಭದಂಥ ಪ್ರಮುಖ ವಿದ್ಯಮಾನಗಳು  ಜರಗಿದವು. ಇವುಗಳ ನಡುವೆಯೂ ನವೆಂಬರ್‌ ಮೊದಲ ವಾರಕ್ಕೆ ಹೋಲಿಸಿದರೆ ಕೊನೆಯ ವಾರ ಸೋಂಕಿನ ತೀವ್ರತೆ ಅರ್ಧಕ್ಕರ್ಧ ಕಡಿಮೆಯಾಗಿದೆ. ನಿತ್ಯ ಸರಾಸರಿ ಹೊಸ ಪ್ರಕರಣಗಳು ಮೂರು ಸಾವಿರದಿಂದ ಒಂದೂವರೆ ಸಾವಿರಕ್ಕೆ, ಸಾವು 30ರಿಂದ 15ಕ್ಕೆ ಇಳಿಕೆಯಾಗಿವೆ.

ಎಚ್ಚರ ತಪ್ಪದಿರಿ!: ಡಿಸೆಂಬರ್‌ನಲ್ಲಿ ರಾಜ್ಯದಲ್ಲಿ ಎರಡು ವಿಧಾನ ಸಭೆ ಕ್ಷೇತ್ರಗಳು ಮತ್ತು ಒಂದು ಲೋಕಸಭೆ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುವ ನಿರೀಕ್ಷೆಯಿದೆ. ಗ್ರಾ.ಪಂ. ಚುನಾವಣೆಗಳು ನಿಗದಿಯಾಗಲಿವೆ. ವೈದ್ಯಕೀಯ ಕಾಲೇಜುಗಳು ಆರಂಭವಾಗಲಿವೆ. ಹಿಂದಿನ ತಿಂಗಳುಗಳಿಗಿಂತ ಚಳಿ ಹೆಚ್ಚು ಇರಲಿದೆ.

ವರ್ಷಾಂತ್ಯ ಹಿನ್ನೆಲೆಯಲ್ಲಿ ದೀರ್ಘಾವಧಿ ರಜೆ, ಪ್ರವಾಸ, ಕಾರ್ಯಕ್ರಮಗಳು, ಮೋಜು ಮಸ್ತಿ, ಕ್ರಿಸ್ಮಸ್‌ ಸಂಭ್ರಮಾಚರಣೆಗಳೂ ಇರಲಿವೆ. ಇವು ರಾಜ್ಯದ ಪಾಲಿಗೆ ಎರಡನೇ ಹಂತದ ಪ್ರಮುಖ ಪರೀಕ್ಷೆಗಳಾಗಿವೆ.

Advertisement

ಡಿಸೆಂಬರ್‌ ಪೂರ್ತಿ ನಿರ್ಣಾಯಕ ಘಟ್ಟವಾಗಿದೆ. ಕೊರೊನಾ ಮೊದಲ ಅವಧಿಯ ಲೋಪಗಳು ಮರುಕಳಿಸದಂತೆ ಎಚ್ಚರವಹಿಸುವ ಆವಶ್ಯಕತೆ ಇದೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಮುಂದಿನ ವಾರ ಸಭೆ

ಸೋಂಕಿನ ಎರಡನೇ ಅಲೆಯನ್ನು ಯಾವ ರೀತಿ ತಪ್ಪಿಸಬಹುದು ಎಂಬ ಕುರಿತು ಚರ್ಚಿಸಲು ಸರಕಾರ ತಜ್ಞರ ಸಮಿತಿ ಸಭೆ ನಡೆಸಲು ನಿರ್ಧರಿಸಿದೆ. ಮುಂದಿನ ವಾರ ನಡೆಯಲಿರುವ ಸಭೆಯಲ್ಲಿ ಯಾವೆಲ್ಲ ಪೂರ್ವಸಿದ್ಧತೆಗಳನ್ನು ನಡೆಸ ಬೇಕು. ಈ ಹಿಂದೆ ವಿಧಿಸಿದ್ದ ಯಾವ ನಿಯಮಗಳನ್ನು ಮತ್ತೆ ಜಾರಿಗೆ ತರಬೇಕು ಎಂಬ ಅಂಶಗಳು ಚರ್ಚೆಯಾಗಲಿವೆ. ಸೋಂಕು ನಿಯಂತ್ರಣ ವಿಚಾರದಲ್ಲಿ ಸದ್ಯ ಜನರು ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ಆದ್ದರಿಂದಲೇ ಸೋಂಕಿನ ಪ್ರಮಾಣ ತಗ್ಗಿದೆ. ಮುಂದಿನ ಒಂದು ತಿಂಗಳು ಎಚ್ಚರ ತಪ್ಪದೆ ಇದೇ ಜವಾಬ್ದಾರಿ ನಿಭಾಯಿಸಿದರೆ ಎರಡನೇ ಅಲೆಯನ್ನು ತಡೆಯಬಹುದು ಎಂದು ಕೊರೊನಾ ನಿಯಂತ್ರಣ ತಜ್ಞರ ಸಮಿತಿ ಸದಸ್ಯ ಡಾ| ವಿ. ರವಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next