Advertisement

ಕೋವಿಡ್‌ ಅಕ್ರಮ ಆಮೂಲಾಗ್ರ ತನಿಖೆ; ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಶಿಫಾರಸು

12:36 AM Jul 18, 2023 | Team Udayavani |

ವಿಧಾನಮಂಡಲ: ಕೊರೊನಾ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿರುವುದನ್ನು ಪತ್ತೆ ಹಚ್ಚಿರುವ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ, ಇದಕ್ಕೆ ಕಾರಣರಾದವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಹಾಗೆಯೇ, ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ರೋಗಿಗಳು ಸಾವನ್ನಪ್ಪಿದ ಪ್ರಕರಣವನ್ನು ಪ್ರತಿಷ್ಠಿತ ಸ್ವಾಯತ್ತ ಸಂಸ್ಥೆ ಮೂಲಕ ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಬೇಕು ಎಂದೂ ಶಿಫಾರಸು ಮಾಡಿದೆ.

Advertisement

ಸಮಿತಿ ಅಧ್ಯಕ್ಷರೂ ಆಗಿರುವ ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ಮಂಡಿಸಿದ ವರದಿಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿ, ಸಮಿತಿಗೆ ಸರಿಯಾದ ಮಾಹಿತಿಗಳನ್ನು ನೀಡದೆ ಮುಚ್ಚಿಟ್ಟ ಅಧಿಕಾರಿಗಳ ಕರ್ತವ್ಯಲೋಪದ ಕುರಿತು ಸಾಕಷ್ಟು ಟೀಕೆ-ಟಿಪ್ಪಣಿಗಳಿವೆ.

19.84 ಕೋಟಿ ರೂ. ಹೆಚ್ಚುವರಿ ವೆಚ್ಚ
2021ರಲ್ಲಿ ಕೊರೊನಾ ನಿಯಂತ್ರಿಸಲು ಆಸ್ಪತ್ರೆಗಳಿಗೆ ಅಗತ್ಯವಿದ್ದ ಯುಪಿಎಸ್‌, ಪರೀಕ್ಷಾ ರಾಸಾಯನಿಕ ಉಪಕರಣ ಸೇರಿದಂತೆ ಕೆಲ ಸಾಧನ ಸಾಮಗ್ರಿಗಳನ್ನು ಹೆಚ್ಚುವರಿ ವೆಚ್ಚ ಮಾಡಿ ಖರೀದಿಸಿರುವುದನ್ನು ಬೊಟ್ಟು ಮಾಡಿ ತೋರಿಸಿದೆ. ಹಿಮಾಚಲ ಪ್ರದೇಶ ಸರ್ಕಾರವು ಪ್ರತಿ ಯುನಿಟ್‌ಗೆ 1.30 ಲಕ್ಷ ರೂ.ಗಳಲ್ಲಿ ಖರೀದಿಸಿದ ಯುನಿಟ್‌ಗಳನ್ನು ಕರ್ನಾಟಕ ಸರ್ಕಾರ 2.96 ಲಕ್ಷ ರೂ. ಕೊಟ್ಟು ಖರೀದಿಸಿದೆ. ಇದೇ ದರಕ್ಕೆ 1,195 ಯುನಿಟ್‌ಗಳನ್ನು ಟೆಂಡರ್‌ ಮೂಲಕ ಖರೀದಿಸಿದ್ದು, ಹಿಮಾಚಲ ಪ್ರದೇಶಕ್ಕಿಂತ 19.85 ಕೋಟಿ ರೂ. ಹೆಚ್ಚುವರಿ ವೆಚ್ಚ ನೀಡಿ ಖರೀದಿ ಮಾಡಿದೆ. ಸಾಲದ್ದಕ್ಕೆ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಪೂರ್ಣಪ್ರಮಾಣದಲ್ಲಿ ನೀಡಿಲ್ಲ. ಈ ಹೆಚ್ಚುವರಿ ವೆಚ್ಚಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿದೆ.

1.10 ಕೋಟಿ ಅಪ್ರಯೋಜಕ ಮಾತ್ರೆಗಳ ಖರೀದಿ
ಐವರ್‌ವೆುಕ್ಟಿನ್‌ ಮಾತ್ರೆಯನ್ನು ಬಳಸುವುದರಿಂದ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಯಾವುದೇ ಪ್ರಯೋಜನವಿಲ್ಲ ಎಂಬ ಮುನ್ನೆಚ್ಚರಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ನೀಡಿದ್ದರೂ 2021ರ ಏಪ್ರಿಲ್‌-ಮೇನಲ್ಲಿ 1.10 ಕೋಟಿ ಮಾತ್ರೆಗಳನ್ನು ಖರೀದಿಸಲಾಗಿದೆ. ವಿವಿಧ ಜಿಲ್ಲಾ ಉಗ್ರಾಣಗಳಲ್ಲಿ 9.68 ಲಕ್ಷ ಮಾತ್ರೆಗಳು ದಾಸ್ತಾನು ಉಳಿದಿದ್ದವು. ಇವುಗಳನ್ನು ಸರಬರಾಜುದಾರರಿಗೆ ಹಿಂದಿರುಗಿಸಲೂ ಕ್ರಮ ವಹಿಸಿಲ್ಲ. ಇದರ ಖರೀದಿಗೆ ಮಾಡಿದ ಖರ್ಚಿನ ವಿವರವನ್ನು ಸಮಿತಿಗೆ ಒದಗಿಸಿಲ್ಲ. ಇಂತಹ ಗಂಭೀರ ಲೋಪದೋಷಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು.

ಹಕ್ಕುಚ್ಯುತಿ ಮಂಡನೆಗೆ ಸೂಚನೆ
2021ರ ಏ.6ರಂದು ಜೆಮ್‌ ಪೋರ್ಟಲ್‌ ಮೂಲಕ 6.90 ಲಕ್ಷ ಕಿಟ್‌ ಖರೀದಿಗೆ ಟೆಂಡರ್‌ ಕರೆದಿದ್ದ ಇಲಾಖೆಗೆ 3.45 ಲಕ್ಷ ಕಿಟ್‌ಗಳನ್ನಷ್ಟೇ ಕೊಟ್ಟ ಸುದರ್ಶನ್‌ ಫಾರ್ಮಾ ಇಂಡಸ್ಟ್ರೀಸ್‌ ಸಂಸ್ಥೆಗೆ ನೋಟಿಸ್‌ ಜಾರಿ ಮಾಡಿದ್ದು ಬಿಟ್ಟರೆ ಬೇರಾವ ಕಾನೂನು ಕ್ರಮವೂ ಆಗಿಲ್ಲ. ಇಲಾಖೆ -ಸಂಸ್ಥೆ ನಡುವಿನ ಕಾನೂನು ಬಾಹಿರ ಹೊಂದಾಣಿಕೆಯನ್ನು ಇದು ತೋರಿಸುತ್ತದೆ.

Advertisement

2021ರ ಏ.25ರಂದು 20 ಲಕ್ಷ ಕಿಟ್‌ ಪೂರೈಕೆಗೆ ಕರೆದಿದ್ದ ಟೆಂಡರ್‌ನಲ್ಲಿ ಬೋಗಿಲಾಲ್‌ ಸಂಸ್ಥೆ ಭಾಗವಹಿಸಿದ್ದರೂ ಪ್ರಯೋಗಾಲಯದ ವರದಿ ತೃಪ್ತಿಕರವಾಗಿಲ್ಲದ್ದರಿಂದ ಕಿಟ್‌ಗಳನ್ನು ತಿರಸ್ಕರಿಸಿದ ಇಲಾಖೆ, ಟ್ರವಿಟ್ರಾನ್‌ ಹೆಲ್ತ್‌ ಕೇರ್‌ನಿಂದ 15 ಲಕ್ಷ ಕಿಟ್‌ ಪಡೆಯಲು ಮುಂದಾಯಿತು. 50 ಸಾವಿರ ಕಿಟ್‌ಗಳನ್ನಷ್ಟೇ ಕೊಟ್ಟ ಸಂಸ್ಥೆಗೆ ನೋಟಿಸ್‌ ನೀಡಿ, ಕಿಟ್‌ ಪೂರೈಕೆ ಆದೇಶವನ್ನು ರದ್ದುಪಡಿಸಿತ್ತು. ಸಂಸ್ಥೆ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ಮಂಡಿಸುವ ನಿರ್ಣಯ ಕೈಗೊಳ್ಳಬೇಕು ಎಂದು ಸೂಚಿಸಿದೆ.

ಸಮಿತಿ ಗಮನಿಸಿದ ಕೋವಿಡ್‌ ಕರ್ಮಕಾಂಡ
– ರ್ಯಾಪಿಡ್‌ ಆಂಟಿಜನ್‌ ಟೆಸ್ಟ್‌ ಕಿಟ್‌ ಖರೀದಿ ವೇಳೆ ಪಾರದರ್ಶಕ ಕಾಯ್ದೆ ಉಲ್ಲಂ ಸಿದ್ದು, ಅಧಿಕಾರಿಗಳು ಉದ್ದೇಶಪೂರ್ವಕ ಈ ಕಾರ್ಯ ಎಸಗಿದಂತಿದೆ.

– ಕಪ್ಪು ಶಿಲೀಂಧ್ರ ಚಿಕಿತ್ಸೆಗೆ 50 ಸಾವಿರ ವಯಲ್‌ ಆಂಪೋಟೆರಿಸಿನ್‌ ಔಷಧಿಯನ್ನು ಕಡಿಮೆ ದರಕ್ಕೆ ಪೂರೈಸಲು ಮುಂದಾಗಿದ್ದ ಭಾರತ್‌ ಸೆರಮ್ಸ್‌ ಅಂಡ್‌ ವ್ಯಾಕ್ಸಿನ್‌ ಬದಲು ಹೆಚ್ಚು ದರ ಕೋಟ್‌ ಮಾಡಿದ್ದ ಮೈಲಾನ್‌ ಫಾರ್ಮಾಸಿಟಿಕಲ್‌ ಸಂಸ್ಥೆಯಿಂದ ಖರೀದಿಸಿದ್ದರಿಂದ 1.14 ಕೋಟಿ ರೂ. ಅಧಿಕ ವೆಚ್ಚ

– ಪಿಎಂ ಕೇರ್ಸ್‌ ನಿಧಿಯಡಿ ಹಂಚಿಕೆಯಾದ ವೆಂಟಿಲೇಟರ್‌ಗಳನ್ನು ಸುಸ್ಥಿತಿಯಲ್ಲಿ ಸರ್ಕಾರಕ್ಕೆ ಹಿಂದಿರುಗಿಸಬೇಕೆಂಬ ಷರತ್ತಿದ್ದರೂ 165 ವೆಂಟಿಲೇಟರ್‌ಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಹಂಚಿಕೆ ಮಾಡಲಾಗಿದೆ.

– ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್‌, ರೆಮಿಡಿಸಿವರ್‌, ವೆಂಟಿಲೇಟರ್‌ ಕೊರತೆ ಇದ್ದರೂ, ಕೊರತೆ ಇರಲಿಲ್ಲ ಎಂದು ಸಮಿತಿಯ ದಾರಿ ತಪ್ಪಿಸಲು ಪ್ರಯತ್ನಿಸಿದ್ದ ಆರೋಗ್ಯ ಅಧಿಕಾರಿಗಳು

– ಆರ್ಥಿಕ ಮತ್ತು ಸಾಂಖೀÂಕ ನಿರ್ದೇಶನಾಲಯದ ಪ್ರಕಾರ ರಾಜ್ಯದಲ್ಲಿ 2020ರ ಜನವರಿ-ಜುಲೈ ಅವಧಿಯಲ್ಲಿ 2,69,029 ಜನರು ಕೋವಿಡ್‌ನಿಂದ ಮೃತಪಟ್ಟಿದ್ದರೆ, 2021ರ ಜನವರಿ-ಜುಲೈ ನಡುವೆ 4,26,943ರಷ್ಟು ಮರಣ ಸಂಭವಿಸಿತ್ತು. ಆದರೆ, ಆರೋಗ್ಯ ಇಲಾಖೆ ನೀಡಿರುವ ಅಂಕಿ-ಅಂಶಗಳಲ್ಲಿ 1,20,708 ಮರಣ ಸಂಖ್ಯೆಗಳನ್ನು ಕಡಿಮೆ ತೋರಿಸಿ ಬೇಜವಾಬ್ದಾರಿ ಹಾಗೂ ಘೋರ ಅಪರಾಧ ಎಸಗಿದೆ.

– ವ್ಯಾಕ್ಸಿನ್‌ ಬುಕ್ಕಿಂಗ್‌ ಪೋರ್ಟಲ್‌ ತೆರೆಯದೇ ಇದ್ದುದರಿಂದ ಬೇಕಾದವರಿಗೆ ಲಸಿಕೆ ಹಂಚಿದ ಅಧಿಕಾರಿಗಳು, ಆಸ್ಪತ್ರೆಗಳಲ್ಲಿ ಅಕ್ರಮ ಹಾಸಿಗೆ ಹಂಚಿಕೆ ಕುರಿತು ಸಮಿತಿಗೆ ಸಂಪೂರ್ಣ ಮಾಹಿತಿ ನೀಡಲು ಸೂಚನೆ.

Advertisement

Udayavani is now on Telegram. Click here to join our channel and stay updated with the latest news.

Next