ಯಾದಗಿರಿ: ವಡಗೇರಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶೀಘ್ರ ಕೋವಿಡ್ ಆಸ್ಪತ್ರೆ ಕಾರ್ಯಾರಂಭಗೊಳ್ಳಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಬಿ.ಚವ್ಹಾಣ್ ಸೂಚಿಸಿದರು.
ಜಿಲ್ಲೆಯ ವಡಗೇರಾದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಆಕ್ಸಿಜನ್ ಪ್ಲಾಂಟ್ ವೀಕ್ಷಿಸಿ ಅವರು ಮಾತನಾಡಿದರು.
ಹಾಸಿಗೆ, ಆಮ್ಲಜನಕ, ಮಾತ್ರೆ, ಔಷಧ , ವೈದ್ಯಕೀಯ ಉಪಕರಣ ಮುಂತಾದವುಗಳ ವ್ಯವಸ್ಥೆ ಮಾಡಿಕೊಂಡು ಕೋವಿಡ್ ಆಸ್ಪತ್ರೆ ಕಾರ್ಯಾರಂಭಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ| ಇಂದುಮತಿ ಕಾಮಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಗುರುಮಠಕಲ್, ಸೈದಾಪುರ, ವಡಗೇರಾ, ಅರಕೇರಾ, ದೋರನಹಳ್ಳಿ ಹಾಗೂ ಹುಣಸಗಿ ಕೇಂದ್ರಗಳಲ್ಲಿ ಆಕ್ಸಿಜನ್ ಪ್ಲಾಂಟ್ ಸಿದ್ಧವಿದ್ದು, ಮೂರ್‍ನಾಲ್ಕು ದಿನಗಳಲ್ಲಿ ಆಕ್ಸಿಜನ್ ಜಂಬೋ ಸಿಲಿಂಡರ್‌ಗಳು ಬರಲಿವೆ. ಶೀಘ್ರವೇ ವಡಗೇರಾದಲ್ಲಿ ಕೋವಿಡ್ ಆಸ್ಪತ್ರೆಗೆ ಚಾಲನೆ ನೀಡಲಾಗುವುದು. 30 ಹಾಸಿಗೆ ಸಾಮರ್ಥ್ಯದ ಈ ಆಸ್ಪತ್ರೆಯಲ್ಲಿ 18 ಬೆಡ್‌ಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡಲಾಗುತ್ತದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಆಸ್ಪತ್ರೆಯಲ್ಲಿ ಖಾಲಿ ಇರುವ ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು ಹಾಗೂ ಅರಿವಳಿಕೆ ತಜ್ಞ ವೈದ್ಯರು ಹಾಗೂ ಆಂಬ್ಯುಲೆನ್ಸ್ ವ್ಯವಸ್ಥೆಗೆ ಕ್ರಮವಹಿಸಬೇಕು. ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡು ಕೋವಿಡ್ ಆಸ್ಪತ್ರೆ ಆರಂಭಿಸುವ ಮೂಲಕ ಈ ಭಾಗದ ಸೋಂಕಿತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ವೆಂಕಟರೆಡ್ಡಿ ಗೌಡ ಮುದ್ನಾಳ್, ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ತಹಶೀಲ್ದಾರ್ ರಮೇಶ್ ಗುತ್ತೇದಾರ್, ತಾಲೂಕು ವೈದ್ಯಾ ಧಿಕಾರಿ ಡಾ| ಜಗನ್ನಾಥ್ ರೆಡ್ಡಿ ಇದ್ದರು.