ಮುಂಬಯಿ: ಬುಡಕಟ್ಟು ಪ್ರಾಬಲ್ಯದ ಪಾಲ್ಘರ್ ಜಿಲ್ಲೆಯ ಉಸ್ಗಾಂವ್‌ನಲ್ಲಿ ತನ್ನ ಮೊದಲ ಪೀಡಿಯಾಟ್ರಿಕ್ ಕೋವಿಡ್ -19 ಆಸ್ಪತ್ರೆ ಲೋಕಾರ್ಪಣೆಗೊಂಡಿದೆ ಎಂದು ಬುಡಕಟ್ಟು ಪರ ಸಂಘಟನೆ ಶ್ರಮಜೀವಿ ಸಂಘಟನೆಯ ಅಧ್ಯಕ್ಷ ವಿವೇಕ್ ಪಂಡಿತ್ ಅವರು ಹೇಳಿದ್ದಾರೆ.
ಇದು ವಿರಾರ್ ಪೂರ್ವದ ಸಿರ್ಸಾದ್ ಫಾಟಾದಿಂದ 4 ಕಿ. ಮೀ. ದೂರದಲ್ಲಿದೆ. ಸಾಂಕ್ರಾಮಿಕ ರೋಗದ ಮೂರನೇ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದು, ಆದ್ದರಿಂದ ಉಸ್ಗಾಂವ್‌ನಲ್ಲಿರುವ ನಮ್ಮ ಅಸ್ತಿತ್ವದಲ್ಲಿರುವ ಶ್ರಮಜೀವಿ ಆಸ್ಪತ್ರೆಯಲ್ಲಿ ಮಕ್ಕಳ ಹಾಸಿಗೆಗಳಿಗೆ ನಾವು ವ್ಯವಸ್ಥೆ ಮಾಡಿದ್ದೇವೆ. ವಾಡಾ, ಜವಾಹರ್, ಭಿವಾಂಡಿ, ವಸಾಯಿ ಮತ್ತು ತಾಲೂಕು ಮೊದಲಾದ ಸ್ಥಳಗಳ ರೋಗಿಗಳು ಇದರ ಸದುಪಯೋಗವನ್ನು ಪಡೆಯಲಿದ್ದಾರೆ.
ಬುಡಕಟ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಅವರ ಮೇಲೆ ಕೊರೊನಾ ಮೂರನೇ ಅಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಪಾಲ್ಘರ್ ಜಿಲ್ಲೆಯಲ್ಲಿ ಯಾವುದೇ ಆಸ್ಪತ್ರೆ ಅಥವಾ ಮಕ್ಕಳ ತಜ್ಞರು ಇಲ್ಲ. ಪಾಲ^ರ್‌ನಲ್ಲಿ ಬುಡಕಟ್ಟು ಮಕ್ಕಳು ಸೋಂಕಿಗೆ ಒಳಗಾದರೆ ಎಲ್ಲಿಗೆ ಹೋಗುತ್ತಾರೆ ಎಂಬ ಭಯ ನಮ್ಮಲ್ಲಿದ್ದು, ಇದೀಗ ಬಳಕೆಗೆ ಸಿದ್ಧವಾದ ಈ ಆಸ್ಪತ್ರೆ ಮಕ್ಕಳಲ್ಲಿ ಭವಿಷ್ಯದ ಆರೋಗ್ಯ ಬಿಕ್ಕಟ್ಟನ್ನು ನಿಭಾಯಿಸಲಿದೆ ಎಂದು ವಿವೇಕ್ ಪಂಡಿತ್ ಹೇಳಿದ್ದಾರೆ.
ಈ ಆಸ್ಪತ್ರೆಯಲ್ಲಿ ಒಟ್ಟು 137 ಹಾಸಿಗೆಗಳನ್ನು ವ್ಯವಸ್ಥೆ ಮಾಡಬಹುದು. ಈ ಮೊದಲು ನಾವು ವಯಸ್ಕರಿಗೆ 100 ಹಾಸಿಗೆಗಳ ಕೋವಿಡ್ ಆಸ್ಪತ್ರೆಯನ್ನು ನಡೆಸುತ್ತಿದ್ದೆವು. 10 ಆಮ್ಲಜನಕ ಹಾಸಿಗೆಗಳು ಮತ್ತು ಮಕ್ಕಳಿಗೆ ಎರಡು ವೆಂಟಿಲೇಟರ್ ಹಾಸಿಗೆಗಳು ಇರಲಿವೆ. ನಮ್ಮ ಆಸ್ಪತ್ರೆಯು ಎಲ್ಲ ಜಾತಿ ಮತ್ತು ಸಮುದಾಯಗಳ ರೋಗಿಗಳಿಗೆ ಸೇವೆ ಸಲ್ಲಿಸುತ್ತಿದ್ದು, ಚಿಕಿತ್ಸೆ ಸಂಪೂರ್ಣವಾಗಿ ಉಚಿತವಾಗಿದೆ. ಬುಡಕಟ್ಟು ಜನಾಂಗದವರೂ ಚಿಕಿತ್ಸೆಗಾಗಿ ಇಲ್ಲಿಗೆ ಬರಬಹುದು. ನಮ್ಮಲ್ಲಿ ಹಲ ವಾರು ಅನುಭವಿ ವೈದ್ಯರು ಮತ್ತು ದಾದಿಯರು ಇದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ಬಹಳಷ್ಟು ರೋಗಿಗಳನ್ನು ಬ್ಯಾಡ್ಮಿಂಟನ್, ಚೆಸ್ ಮತ್ತು ಲುಡೋ ಮುಂತಾದ ಆಟಗಳೊಂದಿಗೆ ಆಕ್ರಮಿಸಿಕೊಳ್ಳಲಾಗುತ್ತಿದೆ. ಅವರು ಸಮಯವನ್ನು ಕಳೆಯಲು ಅವರಿಗೆ ಪುಸ್ತಕಗಳನ್ನೂ ನೀಡಲಾಗಿದೆ. ಉತ್ತಮ ಚೇತರಿಕೆಗಾಗಿ ರೋಗಿಗಳಿಗೆ ಆಸ್ಪತ್ರೆಯಲ್ಲಿ ಪ್ರೊಟೀನ್ ಭರಿತ ಆಹಾರವನ್ನು ನೀಡಲಾಗುತ್ತದೆ. ಚಿಕಿತ್ಸೆ ಉಚಿತವಾಗಿದ್ದರೂ ದೇಣಿಗೆಗಳಿಗೆ ಅವಕಾಶ ಇದೆ ಎಂದು ಪಂಡಿತ್ ಹೇಳಿದ್ದಾರೆ.
ರಾಜ್ಯ ಕ್ಯಾಬಿನೆಟ್ ಸಚಿವ ಏಕನಾಥ್ ಶಿಂಧೆ ಅವರು ಉಸ್ಗಾಂವ್‌ನ ಅದೇ ಸ್ಥಳದಲ್ಲಿ ಮತ್ತೂಂದು ಆಸ್ಪತ್ರೆಗೆ ಭೂಮಿ ಪೂಜೆ ನಡೆಸಿದ್ದಾರೆ. ಯೋಜಿತ ಆಸ್ಪತ್ರೆ 50 ಕಿ. ಮೀ. ವ್ಯಾಪ್ತಿಯಲ್ಲಿ ಜನರಿಗೆ ಸೇವೆ ಸಲ್ಲಿಸಲಿದೆ. ಸಾಂಕ್ರಾಮಿಕ ರೋಗವು ಮುಗಿದ ಬಳಿಕ ಯೋಗ್ಯ ಶುಲ್ಕದಲ್ಲಿ ಚಿಕಿತ್ಸೆಯೊಂದಿಗೆ ಪೂರ್ಣ ಪ್ರಮಾಣದ ಆಸ್ಪತ್ರೆಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಪಂಡಿತ್ ಹೇಳಿದರು.