Advertisement

ಕೋವಿಡ್ ಹಿಮ್ಮೆಟ್ಟಿಸಲು ಮಾರ್ಗದರ್ಶಿ ಸೂತ್ರಗಳ ಪಾಲನೆ ಅಗತ್ಯವಲ್ಲವೇ?

01:19 AM Jan 19, 2021 | Team Udayavani |

ಜಗತ್ತಿನ ಎಲ್ಲೆಡೆಯಂತೆ 2020ರ ಮಾರ್ಚ್‌ 25ರ ಬಳಿಕ ಭಾರತದಲ್ಲಿಯೂ ಕೋವಿಡ್ ಮಹಾಮಾರಿ ವ್ಯಾಪಕ ವಾಗಿ ಹರಡಿ ಜನ ಜೀವನವನ್ನೇ ನಿಶ್ಚಲ ಸ್ಥಿತಿಗೆ ತಂದಿತು. ಇದರ ಪರಿ ಣಾಮ ದೇಶಾದ್ಯಂತ ಲಾಕ್‌ಡೌನ್‌  ಜಾರಿಗೊಳಿಸ ಲಾಯಿತು.ಒಟ್ಟಾರೆ ಪರಿಣಾಮವಾಗಿ ಆರ್ಥಿಕತೆ ಪ್ರಪಾತಕ್ಕೆ ತಳ್ಳಲ್ಪಟ್ಟಿತು.

Advertisement

ಆರ್ಥಿಕತೆಯನ್ನು ಮರಳಿ ಹಳಿಗೆ ತರ‌ಬೇಕಾದ ಅನಿವಾ ರ್ಯದ ಹಿನ್ನೆಲೆಯಲ್ಲಿ  ಕೋವಿಡ್ ತೊಲಗದಿದ್ದರೂ ಬಳಿಕದ ದಿನಗಳಲ್ಲಿ ಎಲ್ಲವೂ ಒಂದೊಂದಾಗಿ ಮುನ್ನೆಲೆಗೆ ಬರತೊಡ ಗಿದವು. ಕೊರೊನಾದೊಂದಿಗೆ ಜೀವಿಸಬೇಕಾದ ಅಗತ್ಯವನ್ನು ಮನಗಾಣಲಾಯಿತು. ಈಗಲೂ ಕೊರೊನಾ ಸಂಪೂರ್ಣವಾಗಿ ತೊಲಗದಿದ್ದರೂ ಹೆಚ್ಚಿನ ಕ್ಷೇತ್ರಗಳು ಕೋವಿಡ್ ಪೂರ್ವ ಸ್ಥಿತಿಗೆ ಬಂದಿವೆ. ಜತೆಗೆ ಕೋವಿಡ್ ನಿವಾರಣೆಯ ಲಸಿಕೆಯೂ ಜನರಿಗೆ ತಲಪುವ ಹಂತಕ್ಕೆ ಬಂದಿದೆ. ಆದರೆ ಹಂತಹಂತವಾಗಿ ಇದು ಎಲ್ಲರನ್ನು ತಲಪಲು ಇನ್ನೂ ಹಲವಾರು ತಿಂಗಳುಗಳೇ ಬೇಕಾದೀತು. ಕೊರೊನಾದ ಆರಂಭದಿಂದಲೂ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶನದಡಿ ಎಲ್ಲೆಡೆ ಮಾರ್ಗ ದರ್ಶಿ ಸೂತ್ರಗಳನ್ನು ಹೊರಡಿಸಲಾಗಿದೆ. ಅದರಂತೆ ಭಾರತ ದಲ್ಲಿಯೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಆಗಾಗ ಇಂತಹ ನಿರ್ದೆಶನಗಳನ್ನು ನೀಡುತ್ತಾ ಬಂದಿವೆ. ಪದೇ ಪದೆ ಕೈ ತೊಳೆಯುವುದು ಅಥವಾ ಸ್ಯಾನಿಟೈಸರ್‌ನ ಬಳಕೆ, ಕಡ್ಡಾಯ ಮಾಸ್ಕ್ ಧಾರಣೆ ಮತ್ತು ಸಾಮಾಜಿಕ ಅಂತರ ಕಾಪಾಡುವುದು ಇವುಗಳಲ್ಲಿ ಪ್ರಮುಖವಾದವು. ಜತೆಗೆ ತರಹೇವಾರು ಕಾರ್ಯ ಕ್ರಮಗಳಲ್ಲಿ ಇಂತಿಷ್ಟೇ ಸಂಖ್ಯೆಯಲ್ಲಿ ಜನರು ಸೇರಬೇಕು ಎಂಬ ಮಿತಿಯನ್ನೂ ಹೇರಲಾಗಿದೆ.

ಕೋವಿಡ್ ಉಪಟಳ ಕಡಿಮೆಯಾಯಿತೆನ್ನುವ ಹೊತ್ತಿಗೆ ಬ್ರಿಟನ್‌ ಒಳಗೊಂಡಂತೆ ಕೆಲವೊಂದು ದೇಶಗಳಲ್ಲಿ ಕೊರೊನಾ ವೈರಸ್‌ ಬೇರೆಯೇ ರೂಪ ತಾಳಿದ ಮತ್ತು ಅದರಿಂದ ಹಾನಿ ಉಂಟಾದ ಘಟನೆಗಳೂ ಜರಗಿವೆ. ಕೆಲವು ಕಡೆ ಕೊರೊನಾದ ಎರಡು, ಮೂರನೇ ಅಲೆ ಅಪ್ಪಳಿಸಿದೆ. ಇಲ್ಲೆಲ್ಲ ಮತ್ತೂಮ್ಮೆ ಲಾಕ್‌ಡೌನ್‌ ಅನ್ನು ಜಾರಿಗೊಳಿಸಲಾಗಿದೆ. ಭಾರತದಲ್ಲಿಯೂ ಜನವರಿ ಕೊನೆಯಲ್ಲಿ ಅಥವಾ ಫೆಬ್ರವರಿಯಿಂದ ಕೊರೊನಾದ ಎರಡನೇ ಅಲೆ ಅಪ್ಪಳಿಸುವ ಸಾಧ್ಯತೆಯ ಬಗ್ಗೆ ತಜ್ಞರು ಮತ್ತು ಕೋವಿಡ್ ಬಗೆಗೆ ಅಧ್ಯಯನ ನಡೆಸಿದವರು ಈಗಾಗಲೇ ಎಚ್ಚರಿಸಿದ್ದಾರೆ. ಹೀಗಾಗದಿರಲಿ ಎಂಬುದೇ ನಮ್ಮೆಲ್ಲರ ಪ್ರಾರ್ಥನೆ, ಹಾರೈಕೆ. ನಾವು ಅಗತ್ಯ ಮುಂಜಾಗ್ರತೆಯನ್ನು ವಹಿಸದೇ ಇದ್ದಲ್ಲಿ  ತಜ್ಞರ ಎಚ್ಚರಿಕೆಯಂತೆ ದೇಶದಲ್ಲಿ  ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡಲ್ಲಿ  ನಾವು ಇಲ್ಲಿಯವರೆಗೆ ಕೈಗೊಂಡ ಎಚ್ಚರಿಕೆ ಕ್ರಮಗಳೆಲ್ಲ ನೀರಿನಲ್ಲಿ ಹೋಮ ಇಟ್ಟಂತೆ ಆದೀತು.

ಈ ಹಿನ್ನೆಲೆಯಲ್ಲಿ ಇನ್ನಷ್ಟು ತಿಂಗಳುಗಳ ಕಾಲ ಜಾಗ್ರತೆ ವಹಿಸುವುದು ಜಾಣತನವಾದೀತು.  ಸರಕಾರ ಈ ಬಗ್ಗೆ ವಿಶೇಷ ಆಸ್ಥೆ ವಹಿಸಬೇಕು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಮಾಸ್ಕ್ ಧರಿಸದವರ ಮತ್ತು ಸಾಮಾಜಿಕ ಅಂತರ ಪಾಲಿಸದವರ ಬಗ್ಗೆ  ಕ್ರಮಕೈಗೊಳ್ಳುವ ಆದೇಶಗಳನ್ನೇನೋ ಹೊರಡಿಸಲಾಗಿದೆ. ಆದರೆ ಸದ್ಯ ಮಾಸ್ಕ್ ಧರಿಸದವರ ವಿರುದ್ಧ ಅಲ್ಲೊಂದು-ಇಲ್ಲೊಂದು, ಅಗೊಮ್ಮೆ-ಈಗೊಮ್ಮೆ ಕ್ರಮ ಜರಗಿಸಲಾಗುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಾಸ್ಕ್ ಅಥವಾ ಜನಸಂದಣಿಯ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡ ಹಾಗಿಲ್ಲ. ಹೆಚ್ಚಿನೆಡೆ

ಮಾರ್ಗದರ್ಶಿ ಸೂತ್ರಗಳು ಕೇವಲ ಕಾಗದದಲ್ಲಿಯೇ ಉಳಿದಿವೆಯೇ ಹೊರತು ಅವುಗಳು ಪಾಲನೆಯಾಗುತ್ತಿಲ್ಲ. ವಿವಾಹ ಸಮಾರಂಭಗಳಲ್ಲಿ ಭಾಗವಹಿಸುವವರ ಸಂಖ್ಯೆ 200ನ್ನು ಮೀರಬಾರದು ಎಂಬುದು ಕೇವಲ ಮಾರ್ಗದರ್ಶಿ ಸೂತ್ರಗಳಲ್ಲಿ ಸೇರಿಕೊಂಡಿದೆಯೇ ವಿನಾ ಎಲ್ಲೂ ಇದು ಪಾಲನೆಯಾಗುತ್ತಿಲ್ಲ. ಇನ್ನು  ರಾಜಕೀಯ ಸಭೆ, ಸಮಾವೇಶಗಳೆಲ್ಲವೂ ಈ ಮಾರ್ಗದರ್ಶಿ ಸೂತ್ರಗಳಿಂದ ಮೈಲುಗಳಷ್ಟು ದೂರದಲ್ಲಿವೆ. ಇನ್ನು ಕನಿಷ್ಠ ಆದೇಶ ಹೊರಡಿಸಿದ ಸರಕಾರದ ಇಲಾಖೆಗಳ  ಕಾರ್ಯಕ್ರಮಗಳ ಸ್ಥಿತಿಯೂ ಇದಕ್ಕಿಂತ ಭಿನ್ನವೇನಿಲ್ಲ. ಒಂದರ್ಥದಲ್ಲಿ  ಇದು “ಬೇಲಿಯೇ ಎದ್ದು ಹೊಲ ಮೇಯ್ದಂತೆ’. ಕೋವಿಡ್ ಹಾವಳಿಯ ಅವಧಿಯಲ್ಲಿ  ಜನರ ಮುಖದ ಮೇಲೆ ಮಾಸ್ಕ್ ಗಳು ಕಂಡುಬರುತ್ತಿದ್ದರೆ ಇದೀಗ ನಿಧಾನವಾಗಿ ಮುಖದ ಮೇಲಿನ ಮಾಸ್ಕ್ಗಳು ಜಾರತೊಡಗಿವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಎಂದರೇನು ಎಂದು ಪ್ರಶ್ನಿಸುವ ಸ್ಥಿತಿ ಮತ್ತೆ ಸೃಷ್ಟಿಯಾಗಿದೆ.

Advertisement

ಕೋವಿಡ್ ದಿಂದ ಸದ್ಯಕ್ಕೆ ಅಥವಾ ಮುಂದಕ್ಕೆ ಅಪಾಯ ಇಲ್ಲ ಎಂದು ಸರಕಾರಕ್ಕೆ ಈಗಾಗಲೇ ಮನವರಿಕೆಯಾಗಿದ್ದರೆ ಮತ್ತು ಕೋವಿಡ್ ಸಂಬಂಧಿತ ಮಾರ್ಗದರ್ಶಿ ಸೂತ್ರ/ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಸಾಧ್ಯವಾಗದಿದ್ದರೆ ಇಂತಹ ಕಟ್ಟುಪಾಡುಗಳು ಯಾವ ಪುರುಷಾರ್ಥಕ್ಕಾಗಿ ಜಾರಿಯಲ್ಲಿರಬೇಕು? ವೈಯಕ್ತಿಕ ಸುರಕ್ಷತೆ ಗಾಗಿ ಬೇಕಾದವರು ಸುರಕ್ಷ ಕ್ರಮಗಳನ್ನು ಪಾಲಿಸಬಹುದು ಎಂದಿದ್ದರೆ ಬಡಪಾಯಿಗಳ ಮೇಲೆ ದಂಡ ವಿಧಿಸುವುದು ಯಾತಕ್ಕಾಗಿ?, ರಾಜಕೀಯ ಮುಖಂಡರು, ಅಧಿಕಾರಿಗಳು ಈ ಮಾರ್ಗದರ್ಶಿ ಸೂತ್ರಗಳನ್ನು ಮೊದಲು ಪಾಲಿಸಿ ಮತ್ತೆ ಈ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಇದನ್ನು ಬಿಟ್ಟು  ಇವರು ಕೇವಲ ಆದೇಶ, ಅಧಿಸೂಚನೆಗಳನ್ನು ಹೊರಡಿಸಿ ಕೈತೊಳೆದುಕೊಳ್ಳುವುದಾದರೆ ಇವುಗಳ ಅಗತ್ಯವಾದರೂ ಏನು? ಪ್ರಜಾಪ್ರಭುತ್ವದಲ್ಲಿ ಕಾನೂನು – ನಿಯಮಗಳು ಎಲ್ಲರಿಗೂ ಒಂದೇ ಅಲ್ಲವೇ?

 

ಎಚ್‌. ಆರ್‌. ಆಳ್ವ  , ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next