Advertisement

ಕ್ರಿಸ್ಮಸ್‌, ಹೊಸ ವರ್ಷಕ್ಕೆ ಹೊಸ ಮಾರ್ಗಸೂಚಿ : ಹಸ್ತಲಾಘವ, ಆಲಿಂಗನ ಬೇಡ

11:03 PM Dec 17, 2020 | mahesh |

ಬೆಂಗಳೂರು: ಯಾವುದೇ ಕಾರಣಕ್ಕೂ ಹಸ್ತಲಾಘವ ಮಾಡಬೇಡಿ, ಪರಸ್ಪರ ಆಲಿಂಗನವನ್ನೂ ಮಾಡಿಕೊಳ್ಳಬೇಡಿ -ಇದು ಈ ವರ್ಷಾಂತ್ಯಕ್ಕೆ ಬರಲಿರುವ ಕ್ರಿಸ್ಮಸ್‌ ಹಬ್ಬ ಮತ್ತು ಹೊಸ ವರ್ಷಾಚರಣೆ ಸಂಬಂಧ ರಾಜ್ಯ ಸರಕಾರ ಹೊರಡಿಸಿರುವ ಮಾರ್ಗಸೂಚಿಯಲ್ಲಿರುವ ಪ್ರಮುಖ ಅಂಶಗಳು.

Advertisement

ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರು ಹೊಸ ಮಾರ್ಗಸೂಚಿಗಳ ಸುತ್ತೋಲೆ ಹೊರಡಿಸಿದ್ದು, ಕ್ರಿಸ್ಮಸ್‌ ಸಂದರ್ಭದಲ್ಲಿ ಚರ್ಚ್‌ಗಳಲ್ಲಿ ಒಮ್ಮೆಲೆ ಹೆಚ್ಚು ಜನರು ಸೇರದಂತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮೇಲ್ವಿಚಾರಕರು, ಆಯೋಜಕರು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.

ನೋ ಪಾರ್ಟಿ
ಡಿ.30ರಿಂದ ಜ.2ರ ವರೆಗೆ ಕ್ಲಬ್‌, ಪಬ್‌, ರೆಸ್ಟೋರೆಂಟ್‌ ಹಾಗೂ ಅದೇ ತೆರನಾದ ಸ್ಥಳ, ಪ್ರದೇಶಗಳಲ್ಲಿ ಸಾಮಾಜಿಕ ಅಂತರವಿಲ್ಲದೆ ಹೆಚ್ಚು ಜನರು ಸೇರುವುದು, ಡಿಜೆ, ಡ್ಯಾನ್ಸ್‌ ಹಾಗೂ ವಿಶೇಷ ಯೋಜಿತ ಪಾರ್ಟಿಗಳನ್ನು ನಿಷೇಧಿಸಿದೆ. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ, ಮುಖ್ಯ ರಸ್ತೆಗಳಲ್ಲಿ, ಸಾಮಾಜಿಕ ಅಂತರವಿಲ್ಲದೆ ಹೆಚ್ಚಿನ ಜನರು ಸೇರುವುದು ಹಾಗೂ ಸಂಭ್ರಮಿಸುವುದನ್ನು ನಿಷೇಧಿಸಲಾಗಿದೆ. ಆದರೆ, ಈ ಸ್ಥಳಗಳಲ್ಲಿ ಪ್ರತಿನಿತ್ಯದಂತೆ ಸಾಮಾನ್ಯ ಚಟುವಟಿಕೆ ಕೈಗೊಳ್ಳಲು ನಿರ್ಬಂಧವಿಲ್ಲ. ಆಯ್ದ ರಸ್ತೆ, ಸ್ಥಳಗಳಿಗೆ ಸಂಬಂಧಿಸಿ ಸ್ಥಳೀಯ ಪೊಲೀಸ್‌ ಆಯುಕ್ತರು, ಜಿಲ್ಲಾಧಿಕಾರಿಗಳು ಹೆಚ್ಚಿನ ನಿರ್ಬಂಧ ವಿಧಿಸಬಹುದು.

ವೃದ್ಧರು, ಮಕ್ಕಳಿಗೆ ಹೆಚ್ಚು ನಿರ್ಬಂಧ
ಕೋವಿಡ್‌ ನಿಯಮದ ಪ್ರಕಾರ 65 ವರ್ಷ ಮೇಲ್ಪಟ್ಟ ಹಿರಿಯರು ಹಾಗೂ 10 ವರ್ಷದೊಳಗಿನ ಮಕ್ಕಳು ಮನೆಯಿಂದ ಹೊರಗೆ ಬರುವಂತಿಲ್ಲ. ಪಬ್‌, ಮಾಲ್‌, ರೆಸ್ಟೋರೆಂಟ್‌ಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಕಡ್ಡಾಯ. ಹೊಟೇಲ್‌, ಮಾಲ್‌ ಪಬ್‌ಗಳಲ್ಲಿ ಥರ್ಮಲ್‌ ಸ್ಕ್ಯಾನಿಂಗ್‌ ಮತ್ತು ಸ್ಯಾನಿಟೈಸರ್‌ ಕಡ್ಡಾಯವಾಗಿ ಇರಿಸಬೇಕು.

ಹೊಟೇಲ್‌, ಮಾಲ್‌, ಪಬ್‌, ರೆಸ್ಟೋರೆಂಟ್‌ಗಳಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆನ್‌ಲೈನ್‌ ಮೂಲಕ ಬುಕ್ಕಿಂಗ್‌ ವ್ಯವಸ್ಥೆ ಹಾಗೂ ಸರತಿ ಸಾಲಿನಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು. ಸರಕಾರದ ಮಾರ್ಗಸೂಚಿಯಂತೆ ಹಸುರು ಪಟಾಕಿ ಮಾತ್ರ ಬಳಕೆ ಮಾಡಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next