Advertisement
ಹೊನ್ನಾವರ: ಕೋವಿಡ್ ನಿವಾರಣೆಗೆ ಜಿಲ್ಲೆಗೆ ಸರ್ಕಾರದ ಹಣ ಧಾರಾಳವಾಗಿ ಹರಿದು ಬಂದಿದೆ. ಜೊತೆಯಲ್ಲಿ ಕಳಕಳಿವುಳ್ಳ ದಾನಿಗಳು ಕೈತುಂಬ ದಾನ ಮಾಡಿದ್ದಾರೆ. ದಾನ ಸಣ್ಣದಿರಲಿ, ದೊಡ್ಡದಿರಲಿ ಕೊಟ್ಟವರಿಗೆ ಕೃತಜ್ಞತೆ ಸಲ್ಲಬೇಕು, ಲೆಕ್ಕಪತ್ರ ಸಾರ್ವಜನಿಕವಾಗಬೇಕು ಎಂಬುದು ಕೆಲವು ದಾನಿಗಳ ಮತ್ತು ಸಾರ್ವಜನಿಕರ ಅಭಿಪ್ರಾಯವಾಗಿದೆ.
Related Articles
Advertisement
ಸರ್ಕಾರ ಹಾಗೂ ದಾನಿಗಳಿಂದ ಬಂದದ್ದು ಬಹುಕೋಟಿ ರೂಪಾಯಿಗಳಾಗುತ್ತವೆ. ಸರ್ಕಾರದ ಹಣದಿಂದ ಖರೀದಿಸಲಾದ ಸಾಮಗ್ರಿಗಳಿಗೆ ಕೊಟೇಶನ್ ಕರೆಯಬೇಕಾಗುತ್ತದೆ. ಕರೆದಿದ್ದಾರೋ, ಇಲ್ಲವೋ ಗೊತ್ತಿಲ್ಲ. ಸರ್ಕಾರಮಟ್ಟದಿಂದ ಪೂರೈಯಾಗಿದ್ದರ ಹೊರತಾಗಿ ಸ್ಥಳೀಯವಾಗಿ ಖರೀದಿ ಮಾಡಿದ ಸಾಮಗ್ರಿಗಳ ದರಪಟ್ಟಿ ಬಹಿರಂಗವಾಗಬೇಕಿದೆ. ಇನ್ನು ದಾನಿಗಳಿಂದ ಪಡೆದ ವಸ್ತುಗಳಿಗಾಗಿ ಅವರಿಗೊಂದು ಕೃತಜ್ಞತಾ ಪತ್ರ ತಾಲೂಕು ಮತ್ತು ಜಿಲ್ಲೆ ಕೋವಿಡ್ ನಿರ್ವಹಣಾ ಸಮಿತಿಯಿಂದ ಹೋಗಬೇಕು. ದಾನಿಗಳಿಂದ ಪಡೆದ ಸಾಮಗ್ರಿಗಳು ಅರ್ಹರಿಗೆ ಸಲ್ಲಿಕೆಯಾಗಿದೆ ಎಂಬುದು ಸಾರ್ವಜನಿಕರಿಗೆ ತಿಳಿಯಬೇಕು. ಅದೇಅದೇ ವಸ್ತುಗಳು ಪುನಃ ಪುನಃ ಸಲ್ಲಿಕೆಯಾಗಿದೆ. ಆದ್ದರಿಂದ ಜಿಲ್ಲೆಯ ಉಸ್ತುವಾರಿಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸುತ್ತಿರುವ ಸಚಿವ ಶಿವರಾಮ ಹೆಬ್ಟಾರ ಅವರು ಕೋವಿಡ್ ಎರಡನೇ ಅಲೆ ಬಂದಾಗ ಸರ್ಕಾರ ಮತ್ತು ಸಾರ್ವಜನಿಕರ ಕೊಡುಗೆಯನ್ನು ಜಿಲ್ಲೆಯ ಜನರ ಮುಂದಿಡುವುದು ಅವಶ್ಯವಾಗಿದೆ.
ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕ, ಜಿಲ್ಲೆಯ ಹಿರಿಯ ರಾಜಕಾರಣಿ, ಹಳಿಯಾಳದ ಶಾಸಕ ಆರ್.ವಿ. ದೇಶಪಾಂಡೆ ಸರ್ಕಾರದ ಕೋವಿಡ್ ನಿರ್ವಹಣೆಯನ್ನು ಪ್ರಶ್ನಿಸಿದ್ದಾರೆ. ಆರೋಗ್ಯ ಕ್ಷೇತ್ರಕ್ಕೆ 2 ವರ್ಷದಿಂದ ನಯಾಪೈಸೆ ಕೊಟ್ಟಿಲ್ಲ, ಕೋವಿಡ್ ನಿರ್ವಹಣೆ ಸರಿಯಾಗಿಲ್ಲ ಎಂಬ ಆಪಾದನೆ ಮಾಡಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 43,912 ಆಗಿದ್ದು 37,632 ಜನ ಗುಣಮುಖರಾಗಿದ್ದಾರೆ. 580 ಜನ ಮೃತಪಟ್ಟಿದ್ದಾರೆ. ಸೋಂಕಿನ ಪ್ರಮಾಣ ಶೇ. 1.87ಕ್ಕೆ ಇಳಿಕೆಯಾಗಿದೆ. ಇನ್ನೆರಡು ವಾರದಲ್ಲಿ ಕೋವಿಡ್ ಎರಡನೇ ಅಲೆ ಬಹುಪಾಲು ಮುಕ್ತಾಯವಾಗಲಿದೆ. ಅದಕ್ಕೂ ಮುನ್ನ ಕೋವಿಡ್ ಕುರಿತು ಪ್ರತಿಷ್ಠಿತ ರಾಜಕಾರಣಿಗಳ ಪ್ರಶ್ನೆಗೆ ಆಡಳಿತ ಉತ್ತರಿಸಬೇಕಿದೆ. ಕೋವಿಡ್ ನಿವಾರಣೆಗೆ ವಿವಿಧ ರೀತಿಯಲ್ಲಿ ದುಡಿದವರಿಗೆ, ಕೊಡುಗೆ ನೀಡಿದವರಿಗೆ ಕೃತಜ್ಞತಾ ಪತ್ರ ಸಲ್ಲಬೇಕಾಗಿದೆ.