ಕೊಪ್ಪಳ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಸೋಂಕು ಮುಕ್ತ ಕೊಪ್ಪಳ ಅಭಿಯಾನ ಹಮ್ಮಿಕೊಂಡಿದ್ದು ಇಂದು ಬೆಳಗ್ಗೆ ಗವಿಸಿದ್ದೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಜಾಗೃತಿ ಜಾಥಾ ನಡೆಯಿತು.
ನಗರ ಸಮೀಪದ ಭಾಗ್ಯನಗರದ ವಿವಿಧ ವಾರ್ಡಗಳಲ್ಲಿ ಸುತ್ತಾಟ ನಡೆಸಿ ಗವಿಸಿದ್ದೇಶ್ವರ ಸ್ವಾಮೀಜಿ ಹಾಗೂ ಡಿಸಿ ವಿಕಾಸ ಕಿಶೋರ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು.
ಭಾಗ್ಯನಗರವು ಕೋವಿಡ್ ಹಾಟ್ ಸ್ಪಾಟ್ ಆಗಿದ್ದು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್-19 ಕೇಸ್ ಪತ್ತೆಯಾಗುತ್ತಿವೆ. ಮನೆಯಲ್ಲಿನ ಪ್ರತಿಯೊಬ್ಬರು ಕೋವಿಡ್ ಪರೀಕ್ಷೆ ಮಾಡಿ ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯಬೇಕು ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಇದನ್ನೂ ಓದಿ: ಟ್ರಕ್ ಗೆ ಢಿಕ್ಕಿ ಹೊಡೆದ ಬಸ್: ಏಳು ಮಂದಿ ಕಾರ್ಮಿಕರ ದುರ್ಮರಣ
ಜಾಗೃತಿಯಲ್ಲಿ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಮಾತನಾಡಿ, ಕೊಪ್ಪಳದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಬರಬೇಕಿದೆ. ಭಾಗ್ಯನಗರ ಶ್ರೀಮಂತರ ನಗರ ಎಂದೆನಿಸಿದೆ ಆ ಶ್ರೀಮಂತಿಕೆಯನ್ನು ಅನುಭವಿಸಲು ನಿಮ್ಮ ಆರೋಗ್ಯ ಮುಖ್ಯವಾಗಿದೆ. ಹಾಗಾಗಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಬಹು ಮುಖ್ಯವಾಗಿದೆ. ಪ್ರತಿಯೊಬ್ಬರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸಬೇಕು. ಇದರಿಂದ ನಾವು ಕೋವಿಡ್-19 ಮುಕ್ತ ಕೊಪ್ಪಳ ಮಾಡಲು ಸಾಧ್ಯವಿದೆ ಎಂದರು.