ಬೆಂಗಳೂರು : ಕೋವಿಡ್ ನಾಲ್ಕನೇ ಅಲೆ ಸಾಧ್ಯತೆ ಹಿನ್ನೆಲೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸೋಮವಾರ ಕೋವಿಡ್ ಟಾಸ್ಕ್ ಫೋರ್ಸ್ ಪರಿಶೀಲನಾ ಸಭೆ ನಡೆಸಲಾಗಿದ್ದು, ಮಾಸ್ಕ್ ಧರಿಸುವುದು ಕಡ್ಡಾಯ ಮಾರ್ಗಸೂಚಿ ಹೊರಡಿಸಲು ಸರಕಾರ ನಿರ್ಧರಿಸಿದೆ.
ಸಭೆ ಬಳಿಕ ಸಚಿವ ಡಾ.ಸುಧಾಕರ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿ, ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದೆವು.
ಪ್ರಮುಖವಾಗಿ ಕೆಲವು ಕ್ರಮಗಳ ಬಗ್ಗೆ ನಿರ್ಧಾರ ಕೈಗೊಂಡಿದ್ದು, ಕಡ್ಡಾಯ ಮಾಸ್ಕ್ ಗೆ ನಿರ್ಧಾರ ಮಾಡಲಾಗಿದೆ.
ಈ ಕುರಿತು ಮಾರ್ಗಸೂಚಿ ಹೊರಡಿಸುತ್ತೇವೆ ಎಂದರು.
1.9% ಪಾಸಿಟಿವಿಟಿ ದರ ಬೆಂಗಳೂರಿನಲ್ಲಿ ದಾಖಲಾಗಿದ್ದು, ಸಾಮಾಜಿಕ ಅಂತರ ಕಾಪಾಡಲು ಮನವಿ ಮಾಡುತ್ತೇವೆ. ಬಿಬಿಎಂಪಿ ಗೆ ನಿಗಾ ಇಡಲು ಸೂಚನೆ ನೀಡಿದ್ದೇವೆ. ಲಸಿಕೆ, ಬೂಸ್ಟರ್ ಲಸಿಕೆ ಹಾಕಿಸಿಕೊಳ್ಳಲು ಜನತೆಗೆ ಮನವಿ ಮಾಡುತ್ತೇವೆ. ನಾಲ್ಕನೇ ಅಲೆವರೆಗೆ ಕಾಯೋದು ಬೇಡ, ಲಸಿಕೆ ಹಾಕಿಸಿಕೊಳ್ಳಿ ಎಂದರು.
ದಕ್ಷಿಣ ಕೊರಿಯಾ, ಥೈಲ್ಯಾಂಡ್, ಜಪಾನ್ ಗಳಿಂದ ಬೆಂಗಳೂರಿಗೆ ಬರುವವರ ಮೇಲೆ ನಿಗಾ ಇಡಲಾಗುತ್ತದೆ. ಒಮಿಕ್ರಾನ್ ನ ತಳಿಯೇ ಆದರೆ ರೋಗ ಲಕ್ಷಣಗಳು ಒಂದೇ ತಾರ ಇರುತ್ತವೆ. ಲ್ಯಾಬ್ ನವರು ವರದಿ ಕೊಡುವವರೆಗೂ ರಾಜ್ಯದಲ್ಲಿ ಯಾವ ತಳಿ ಇದೆ ಅಂತ ಹೇಳುವುದಕ್ಕೆ ಆಗುವುದಿಲ್ಲ ಎಂದರು.
ಲ್ಯಾಬ್ ನವರು ಜಿನೋಮಿಕ್ ಸೀಕ್ವೆನ್ಸ್ ವರದಿ ಪಡೆದಿದ್ದಾರೆ. ವರದಿ ಬರಲಿದೆ. ಎಲ್ಲ ಪಕ್ಷಗಳೂ ಸಭೆ, ಸಮಾರಂಭಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ದೆಹಲಿ, ಮಹಾರಾಷ್ಟ್ರ, ಕೇರಳ, ತಮಿಳುನಾಡುಗಳ ವಿಚಾರದ ಬಗ್ಗೆ ಏಪ್ರಿಲ್ 27 ರ ಬಳಿಕ ಸಭೆ ನಡೆಸಲಾಗುತ್ತದೆ. ಪ್ರಧಾನಿ ಸಭೆ ಬಳಿಕ ಮತ್ತೊಂದು ಸಭೆ ಸೇರುತ್ತೇವೆ. ಪ್ರಧಾನಿ ಯವರು ನೀಡುವ ನಿರ್ದೇಶನಗಳನ್ನು ನೋಡಿಕೊಂಡು ಮುಂದುವರೆಯುತ್ತೇವೆ. ಈ ರಾಜ್ಯಗಳಿಂದ ಬರುವವರ ಮೇಲೆ ಯಾವ ರೀತಿ ನಿಗಾ ಇಡಬೇಕೆಂದು ಆ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದರು.