Advertisement

ವಾರ ಕಳೆದರೂ ಕಾಲೇಜುಗಳತ್ತ ಮುಖಮಾಡದ ವಿದ್ಯಾರ್ಥಿಗಳು!

07:11 PM Nov 24, 2020 | Suhan S |

ಬಳ್ಳಾರಿ: ಕೋವಿಡ್‌ ಸೋಂಕಿನ ಭೀತಿಯಿಂದ ಕಳೆದ 8 ತಿಂಗಳಿಂದ ಮುಚ್ಚಲಾಗಿದ್ದ ಕಾಲೇಜುಗಳನ್ನು ತೆರೆದು ಒಂದು ವಾರ ಕಳೆದರೂ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳು ನಿರೀಕ್ಷಿತ ಪ್ರಮಾಣದಲ್ಲಿ ಕಾಲೇಜುಗಳತ್ತ ಮುಖ ಮಾಡುತ್ತಿಲ್ಲ. ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿರುವ ವರದಿಯನ್ನು ಸಹ ಕಾಲೇಜುಗಳಿಗೆ ಸಲ್ಲಿಸುವಲ್ಲಿ ವಿದ್ಯಾರ್ಥಿಗಳು ಹಿಂಜರಿಯುತ್ತಿದ್ದು ಉಪನ್ಯಾಸಕರನ್ನು ಚಿಂತೆಗೀಡು ಮಾಡಿದೆ.

Advertisement

ಕೋವಿಡ್ ಸೋಂಕಿನ ಪ್ರಮಾಣ ನಿಯಂತ್ರಣಕ್ಕೆ ಬರುತ್ತಿರುವುದರಿಂದ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ತರಗತಿ ನಡೆಸಲು ರಾಜ್ಯ ಸರ್ಕಾರ ನ. 17ರಂದು ಆದೇಶ ಹೊರಡಿಸಿತು. ಜತೆಗೆ ಕೋವಿಡ್‌ ನಿಯಮಗಳನ್ನು ಸಹ ಕಡ್ಡಾಯವಾಗಿ ಪಾಲಿಸುವಂತೆಯೂ ಸೂಚಿಸಿತು. ಅದರಂತೆ 8 ತಿಂಗಳಿಂದ ಮುಚ್ಚಲಾಗಿದ್ದ ಪದವಿ ಕಾಲೇಜುಗಳನ್ನು ತೆರೆದು ವಿದ್ಯಾರ್ಥಿಗಳಿಗೆ ಕೋವಿಡ್‌ ಟೆಸ್ಟ್‌ ಮಾಡಿಸಿದರೂ ವಿದ್ಯಾರ್ಥಿಗಳು ನಿರೀಕ್ಷಿತ ಪ್ರಮಾಣದಲ್ಲಿ ಕಾಲೇಜುಗಳಿಗೆ ಬರುತ್ತಿಲ್ಲ. ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡವರು ಸಹ ಕಾಲೇಜುಗಳಿಗೆ ವರದಿಗಳನ್ನೂ ನೀಡುತ್ತಿಲ್ಲ. ತರಗತಿಗಳಿಗೂ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಹಾಜರಾಗುತ್ತಿಲ್ಲ.

963 ವಿದ್ಯಾರ್ಥಿಗಳಿಂದ ವರದಿ: ಬಳ್ಳಾರಿ ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಬಳ್ಳಾರಿ ಜಿಲ್ಲೆಯಲ್ಲೊಂದೇ ಕಳೆದ ಒಂದು ವಾರದಿಂದ ನಡೆದ ಕೋವಿಡ್‌ ಟೆಸ್ಟ್‌ನಲ್ಲಿ ಸುಮಾರು 6ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನುಪರೀಕ್ಷಿಸಲಾಗಿದೆ. ಈ ಪೈಕಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪಾಸಿಟಿವ್‌ ಬಂದಿದೆ.

ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬಳ್ಳಾರಿ, ಕೊಪ್ಪಳ ಜಿಲ್ಲೆಗಳು ಬರಲಿದ್ದು, ಎರಡು ಜಿಲ್ಲೆಗಳಲ್ಲಿ 120 ಪದವಿ ಕಾಲೇಜುಗಳಿವೆ. ಈ 120 ಪದವಿ ಕಾಲೇಜುಗಳ ಪೈಕಿ ಕೋವಿಡ್‌ ಟೆಸ್ಟ್‌ ಮಾಡಿಸಿಕೊಂಡು ತಮ್ಮ ತಮ್ಮ ಕಾಲೇಜುಗಳಲ್ಲಿ ಕೇವಲ (ಎರಡು ಜಿಲ್ಲೆಗಳಲ್ಲಿ ಪುರುಷ 636, ಮಹಿಳೆ 327) 963 ವಿದ್ಯಾರ್ಥಿಗಳು ಮಾತ್ರ ವರದಿ ನೀಡಿದ್ದಾರೆ. ಸಿರುಗುಪ್ಪದಲ್ಲಿ ಒಬ್ಬ ವಿದ್ಯಾರ್ಥಿಗೆ ಪಾಸಿಟಿವ್‌ ಬಂದಿದೆ. ಈ ವಿಷಯವನ್ನು ದೂರವಾಣಿ ಮೂಲಕ ತಿಳಿಸಿದ್ದಾರೆ ಹೊರತು, ಕಾಲೇಜಿಗೆ ವರದಿ ಸಲ್ಲಿಸಿಲ್ಲ ಎಂದು ವಿಸ್‌ಕೆ ವಿವಿಯ ಪ್ರೊ| ಜಿಲಾನಿಬಾಷಾ ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿಗಳಿಗಾಗಿ ಸದ್ಯ ಕಾಲೇಜುಗಳಲ್ಲೇ ಕೋವಿಡ್‌ಟೆಸ್ಟ್‌ ಮಾಡಲಾಗುತ್ತಿದೆ. ಕೆಲವರು ಕಾಲೇಜುಗಳಲ್ಲಿ ಟೆಸ್ಟ್‌ ಮಾಡಿಸಿಕೊಂಡರೆಇನ್ನು ಕೆಲವರು ಬೇರೆಡೆಯೂ ಟೆಸ್ಟ್‌ ಮಾಡಿಸಿಕೊಂಡಿದ್ದಾರೆ. ಅದರಲ್ಲಿ ಕೆಲವರು ಅಧಿಕೃತ ವರದಿಗಳನ್ನು ಕಾಲೇಜುಗಳಿಗೆ ನೀಡುತ್ತಿಲ್ಲ. ಎಲ್ಲ ವಿದ್ಯಾರ್ಥಿಗಳಿಗೂ ಆರ್‌ಟಿ-ಪಿಸಿಆರ್‌ ಮೂಲಕ ಟೆಸ್ಟ್‌ಮಾಡುತ್ತಿರುವ ಹಿನ್ನೆಲೆಯಲ್ಲಿ ಕೆಲವರ ವರದಿ ಬರಲು ಒಂದಷ್ಟು ವಿಳಂಬವಾಗಬಹುದು. ಆದರೆ, ವರದಿಗಳನ್ನು ಪಡೆದಿರುವ ವಿದ್ಯಾರ್ಥಿಗಳು ಸಹ ಕಾಲೇಜುಗಳಿಗೆ ಅದನ್ನು ಸಲ್ಲಿಸಿ ಭೌತಿಕ ತರಗತಿಗಳಿಗೆ ಹಾಜರಾಗದಿರಲು ಕಾರಣ ತಿಳಿಯುತ್ತಿಲ್ಲ ಎಂದವರು ಬೇಸರ ವ್ಯಕ್ತಪಡಿಸುತ್ತಾರೆ.

Advertisement

ಶೇ. 56ರಿಂದ 60ರಷ್ಟು ಆನ್‌ ಲೈನ್‌ನಲ್ಲಿ ಭಾಗಿ: ವಿಎಸ್‌ಕೆ ವಿವಿ ವ್ಯಾಪ್ತಿಯಲ್ಲಿನ ಬಳ್ಳಾರಿ-ಕೊಪ್ಪಳ ಜಿಲ್ಲೆಗಳ 120 ಕಾಲೇಜುಗಳಲ್ಲಿ ಅ. 15ರಿಂದಲೇ ಆನ್‌ಲೈನ್‌ ತರಗತಿಗಳನ್ನು ಆರಂಭಿಸಲಾಗಿದೆ. ಶೇ. 50ರಿಂದ 60ರಷ್ಟು ವಿದ್ಯಾರ್ಥಿಗಳು ಆನ್‌ಲೈನ್‌ ತರಗತಿಗಳಲ್ಲಿ ಭಾಗವಹಿಸುತ್ತಾರೆ. ಇನ್ನುಳಿದ ಶೇ. 40ರಿಂದ 50ರಷ್ಟು ವಿದ್ಯಾರ್ಥಿಗಳಿಗೆ ನೆಟ್‌ ವರ್ಕ್‌ ಸಮಸ್ಯೆ ಇರಬಹುದು. ಮೊಬೈಲ್‌ ಇಲ್ಲದಿರಬಹುದು ಅಥವಾ ಇನ್ಯಾವುದೇ ಸಮಸ್ಯೆ ಇರಬಹುದು. ಆನ್‌ಲೈನ್‌ ತರಗತಿಗೆ ಸಂಬಂಧಿ ಸಿದಂತೆ ವಿವಿ ಕ್ಯಾಂಪಸ್‌ ಸೇರಿ ಎಲ್ಲ ಪದವಿ ಕಾಲೇಜುಗಳಲ್ಲೂ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಝೂಮ್‌, ಗೂಗಲ್‌ ಮೀಟ್‌, ಫೆಡ್‌ ಎಕ್ಸ್‌ ಆ್ಯಪ್‌ಗ್ಳ ಮೂಲಕ ಆನ್‌ಲೈನ್‌ ತರಗತಿಗಳನ್ನು ನಡೆಸಲಾಗುತ್ತಿದೆ. ಆನ್‌ಲೈನ್‌ನಲ್ಲಿ ಪಾಠ ಅರ್ಥವಾಗದ ವಿದ್ಯಾರ್ಥಿಗಳಿಗೆ ತಮ್ಮ ಕಾಲೇಜುಗಳಿಗೆ ತೆರಳಿ ಭೌತಿಕ ತರಗತಿಗಳನ್ನು ಪಡೆಯಲೂ ಅವಕಾಶ ನೀಡಲಾಗಿದೆ. ಆದರೂ,ವಿದ್ಯಾರ್ಥಿಗಳು ನಿರೀಕ್ಷಿತ ಪ್ರಮಾಣದಲ್ಲಿ ಕಾಲೇಜುಗಳತ್ತ ಮುಖ ಮಾಡದಿರುವುದು ಉಪನ್ಯಾಸಕರನ್ನು ಚಿಂತೆಗೀಡು ಮಾಡಿದೆ.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯ ಬಳ್ಳಾರಿ-ಕೊಪ್ಪಳ ಜಿಲ್ಲೆಗಳಲ್ಲಿ 120 ಪದವಿ ಕಾಲೇಜುಗಳಿದ್ದು, ನ. 17ರಿಂದ ಭೌತಿಕ ತರಗತಿಗಳು ಆರಂಭವಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಕಾಲೇಜುಗಳಿಗೆ ಆಗಮಿಸುತ್ತಿಲ್ಲ. ಆನ್‌ಲೈನ್‌ ತರಗತಿಯಲ್ಲಿ ಶೇ. 70ರಷ್ಟು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.- ಪ್ರೊ| ತುಳಸಿಮಾಲಾ, ಕುಲಸಚಿವರು, ಆಡಳಿತ ವಿಭಾಗ, ವಿಎಸ್‌ಕೆ ವಿವಿ

Advertisement

Udayavani is now on Telegram. Click here to join our channel and stay updated with the latest news.

Next