Advertisement
ಬೆಂಗಳೂರು: ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್ ಎರಡನೇ ಅಲೆಯ ಅಬ್ಬರದ ಹಿನ್ನಲೆ ರಾಜ್ಯದಲ್ಲಿಯೂ ಸೋಂಕು ಹೆಚ್ಚಳವಾಗುವ ಆತಂಕದ ಮೂಡಿದೆ. ಇದಕ್ಕೆ ಪೂರಕವೆಂಬಂತೆ ರಾಜ್ಯದಲ್ಲಿ ಕಳೆದ ತಿಂಗಳಿಗೆ (ಫೆಬ್ರವರಿ) ಹೋಲಿಸಿದರೆ ಸದ್ಯ ಸೋಂಕು ಪ್ರಕರಣಗಳು ಶೇ.50 ರಷ್ಟು ಹೆಚ್ಚಾಗಿದ್ದು, ಸೋಂಕಿತರ ಸಾವು ದುಪ್ಪಟ್ಟಾಗಿವೆ.
Related Articles
Advertisement
ರಾಜ್ಯದಲ್ಲಿ ಜನವರಿಗಿಂತ ಫೆಬ್ರವರಿಯಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಮತ್ತು ಸೋಂಕಿತರ ಸಾವು ಇಳಿಕೆ ಕಂಡರೂ, ಮಾರ್ಚ್ನಿಂದ ಮತ್ತೆ ಏರುಗತಿಯಲ್ಲಿ ಸಾಗಿವೆ. ಜನವರಿ, ಫೆಬ್ರವರಿ ಹಾಗೂ ಮಾರ್ಚ್ನ ಮೊದಲ ಹತ್ತು ದಿನಗಳ ಅಂಕಿ ಅಂಶಗಳನ್ನು ನೋಡಿದರೆ ಜನವರಿಗಿಂತ ಫೆಬ್ರವರಿಯಲ್ಲಿ ಪ್ರಕರಣಗಳು ಮತ್ತು ಸೋಂಕಿತರ ಸಾವು ಶೇ.50 ರಷ್ಟು ಕಡಿಮೆಯಾದವು. ಆದರೆ, ಫೆಬ್ರವರಿಗಿಂತ ಮಾರ್ಚ್ನಲ್ಲಿ ಸೋಂಕು ಪ್ರಕರಣಗಳು ಶೇ.25 ರಷ್ಟು ಸೋಂಕಿತರ ಸಾವು ಶೇ.50 ರಷ್ಟು ಹೆಚ್ಚಳವಾಗಿವೆ.
ಹಿಂದಿನ ತಪ್ಪಿನಿಂದ ಪಾಠ ಕಲಿಯಬೇಕು! :
ಕಳೆದ ವರ್ಷ ಲಾಕ್‌ಡೌನ್ ಇದ್ದರೂ ಗಡಿಪ್ರದೇಶಗಳ ಭದ್ರತಾ ವೈಫಲ್ಯದಿಂದ ನಿಜಾಮುದ್ಧೀನ್, ಅಹಮದಾಬಾದ್‌ನ ತಬ್ಲಿಘೀ ಜಮಾತ್ ಸದಸ್ಯರು, ಅಜ್ಮೀರ್ ಧಾರ್ಮಿಕ ಯಾತ್ರಿಗಳು, ಮಹಾರಾಷ್ಟ್ರ ವಲಸೆ ಕಾರ್ಮಿಕರು, ದೆಹಲಿ ಪ್ರಯಾಣಿಕರು ರಾಜ್ಯಕ್ಕೆ ಆಗಮಿಸಿ ಸೋಂಕಿನ ಹೆಚ್ಚಳಕ್ಕೆ ಕಾರಣವಾಗಿದ್ದರು. ಸದ್ಯ ಅನ್‌ಲಾಕ್ ಆಗಿದ್ದು, ಮಹಾರಾಷ್ಟ್ರ ಮತ್ತು ಕೇರಳದಿಂದ ಬರುವರಿಗೆ ಸೋಂಕು ಪರೀಕ್ಷಾ ವರದಿ ಕಡ್ಡಾಯ ಮಾಡಲಾಗಿದೆ. ಆದರೆ, ಬಂದ ನಂತರವೂ ಹಲವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದೇ ಬೆಂಗಳೂರಿನ ಕ್ಲಸ್ಟರ್ ಸೋಂಕಿಗೆ ಕಾರಣವಾಗಿದೆ. ಹೀಗಾಗಿ, ಗಡಿಯಲ್ಲಿ ತಪಾಸಣೆ ಉನ್ನತೀಕರಿಸಬೇಕು ಅಥವಾ ಕೆಲ ದಿನಗಳ ಮಟ್ಟಿಗೆ ಗಡಿಯನ್ನು ಬಂದ್ ಮಾಬೇಕು. ಜತೆಗೆ ಹೊರರಾಜ್ಯ ಪ್ರಯಾಣಿಕರಿಗೆ ಕ್ವಾರಂಟೈನ್ ನಿಯಮ ಕಡ್ಡಾಯಗೊಳಿಸಬೇಕು ಎಂಬ ಅಭಿಪ್ರಾಯ ಕೇಳಿಬಂದಿದೆ.
ಆರೋಗ್ಯ ಸಚಿವರು ಆತಂಕ : ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚಳವಾಗಿರುವ ಕುರಿತು ಟ್ವಿಟ್ ಮಾಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, `ನೆರೆಯ ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 13,000ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದು ನನ್ನನ್ನು ಚಿಂತೆಗೀಡುಮಾಡಿದೆ. ಇದನ್ನು ಎಚ್ಚರಿಕೆಯ ಗಂಟೆ ಎಂದು ಪರಿಗಣಿಸಿ, ಹಬ್ಬ-ಹರಿದಿನಗಳು, ಸಭೆ-ಸಮಾರಂಭಗಳು ಏನೇ ಇದ್ದರೂ ಮಾಸ್ಕ್ ಧರಿಸಿವುದು, ಭೌತಿಕ ಅಂತರವನ್ನು ತಪ್ಪದೇ ಪಾಲಿಸಬೇಕು. ಜನಸಂದಣಿಯಿಂದ ದೂರವಿರಬೇಕು’ ಎಂದಿದ್ದಾರೆ. ಅಲ್ಲದೆ, ಈಗಾಗಲೇ ಜಾರಿಯಲ್ಲಿರುವ ತಡರಾತ್ರಿವರೆಗೂ ಸಭೆ ಸಮಾರಂಭಗಳಿಗೆ ನಿಷೇಧ, ಗಡಿಯಲ್ಲಿ ತಪಾಸಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಜತೆಗೆ ಗಡಿ ಜಿಲ್ಲೆಗಳಲ್ಲಿ ಮತ್ತು ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಪರೀಕ್ಷೆ ಹೆಚ್ಚಿಸಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
—-
ಅಂಕಿ-ಅಂಶ : ರಾಜ್ಯದಲ್ಲಿ ಸೋಂಕು ಹೆಚ್ಚಿರುವ ಜಿಲ್ಲೆಗಳಿವು : (ಮಾರ್ಚನಲ್ಲಿ ನಿತ್ಯ ಸರಾಸರಿ ಕೋವಿಡ್ ಕೇಸ್)
ಬೆಂಗಳೂರು (350), ಕಲಬುರಗಿ (24), ಮೈಸೂರು(19), ತುಮಕೂರು (19), ಉಡುಪಿ (17), ದಕ್ಷಿಣ ಕನ್ನಡ (18) ಉಳಿದ ಜಿಲ್ಲೆಗಳಲ್ಲಿ ನಿತ್ಯ ಬೆರಳೆಣಿಕೆಯಷ್ಟು ಪ್ರಕರಣಗಳು ವರದಿಯಾಗುತ್ತಿವೆ.
—
ತಿಂಗಳು (ಮೊದಲ ಹತ್ತು ದಿನ) ಪ್ರಕರಣಗಳು ಸೋಂಕಿತರು -ಸಾವು- ಸಕ್ರಿಯ ಪ್ರಕರಣಗಳು
ಜನವರಿ 8063 -50 -9649
ಫೆಬ್ರವರಿ 4240 -27 -5875
ಮಾರ್ಚ್ 5550 -48 -7456 –ಜಯಪ್ರಕಾಶ್ ಬಿರಾದಾರ್