Advertisement
ಮೂಲ್ಕಿ: ಮುನ್ನೆಚ್ಚರಿಕೆಗಾಗಿ ಕಠಿನ ಕ್ರಮಮೂಲ್ಕಿ: ಮಾರಕ ಸಾಂಕ್ರಾಮಿಕ ಕೊರೊನಾ ತಡೆಗಾಗಿ ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದ ಮುನ್ನೆಚ್ಚರಿಕೆಯ ಕ್ರಮವನ್ನು ಮೂಲ್ಕಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಕೃಷ್ಣ ಅವರ ನೇತೃತ್ವದ ಸಮಿತಿಯಿಂದ ಕಾರ್ಯಾಚರಣೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ಆತಂಕ ನಿವಾರಿಸಲು ಮತ್ತು ಮುಂಜಾಗ್ರತೆಗಾಗಿ ಬುಧವಾರ ನಗರ ಪಂಚಾಯತ್ ಮುಖ್ಯಾಧಿಕಾರಿ ಚಂದ್ರ ಪೂಜಾರಿ ಅವರು ಹೆಚ್ಚಿನ ಕ್ರಮವನ್ನು ಜಾರಿಗೊಳಿಸಿ ಆದೇಶಿಸಿದ್ದಾರೆ.
Related Articles
Advertisement
ಮೂಲ್ಕಿ ಪರಿಸರದ ವ್ಯಾಪಾರ ಕೇಂದ್ರಗಳಲ್ಲಿ ವಹಿವಾಟು ಬಹಳಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ. ಇಲ್ಲಿ ಬಸ್ ನಿಲ್ದಾಣ ಮತ್ತು ಕಾರ್ನಾಡ್‌ನಲ್ಲಿ ಕೋಳಿ ಅಂಗಡಿಗಳು ವ್ಯಾಪಾರವಿಲ್ಲದೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಜನ ಸಂಚಾರದಲ್ಲಿ ಭಾರೀ ಪ್ರಮಾಣದ ಕುಸಿತ ಇದೆ.
ಕಳೆಗುಂದಿದ ಮೂಡುಬಿದಿರೆಮೂಡುಬಿದಿರೆ: ಕೊರೊನಾ ವೈರಸ್ ಭಯದಿಂದ ಮೂಡುಬಿದಿರೆ ಹಾಗೂ ಪರಿಸರದ ಗ್ರಾಮಗಳಲ್ಲಿ ಜನಜೀವನ ತೀರಾ ಕಳಾಹೀನವಾದಂತಿದೆ. ಬಸ್ಸುಗಳಲ್ಲಿ ಜನ ಸಂಚರಿಸುವುದು ವಿರಳವಾಗಿದೆ. ವ್ಯಾಪಾರ, ಮಾರುಕಟ್ಟೆ ನಿಸ್ತೇಜವಾಗಿದೆ. ಕಟ್ಟು ಕಟ್ಟಲೆ ಪ್ರಕಾರ ನಡೆಯುವ ಜಾತ್ರೆ, ನೇಮಗಳಲ್ಲೂ ಜನ ತೀರಾ ಕಡಿಮೆ ಸಂಖ್ಯೆಯಲ್ಲಿ ಕಾಣಿಸುತ್ತಿದ್ದಾರೆ. ಒಟ್ಟಾರೆ ದಿನದಿಂದ ದಿನಕ್ಕೆ ಆರ್ಥಿಕ ಚಟುವಟಿಕೆ ಕಳೆಗುಂದುತ್ತಿದೆ. ತಪಾಸಣ ಕ್ರಮಗಳಿಲ್ಲ
ಕೊರೊನಾ ವೈರಸ್ ಶಂಕಿತರ ಬಗ್ಗೆ, ನಿಗಾ ಕ್ರಮಗಳ ಬಗ್ಗೆ ಏನಾದರೂ ಹೊಸ ಬೆಳವಣಿಗೆ ಇದೆಯೇ ಎಂದು ಸಮುದಾಯ ಆರೋಗ್ಯಾಧಿಕಾರಿಯವರಲ್ಲಿ ವಿಚಾರಿಸಿದಾಗ “ನಾವು ಯಾವುದೇ ಹೇಳಿಕೆ ನೀಡುವಂತಿಲ್ಲ; ಎಲ್ಲ ವರದಿಗಳೂ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಯಿಂದಲೇ ಪ್ರಕಟವಾಗುವ ವ್ಯವಸ್ಥೆ ಇದೆ’ ಎಂದು ಚುಟುಕಾಗಿ ಪ್ರತಿಕ್ರಿಯೆ ನೀಡಿದರು. ಈ ನಡುವೆ, ಬಜಪೆ ವಿಮಾನ ನಿಲ್ದಾಣದಲ್ಲಿ ಯಾವುದೇ ತಪಾಸಣ ಕ್ರಮಗಳಿಲ್ಲದೆಯೇ ಬೆಳುವಾಯಿ, ಮಾರೂರು ಕಡೆಗಳ ಕೆಲವು ಮಂದಿ ವಿದೇಶಗಳಿಂದ ಆಗಮಿಸಿದ್ದಾರೆ ಎಂಬ ಸುದ್ದಿ ಹಬ್ಬಿದ್ದು ಇಂಥ ಸುದ್ದಿಗಳ ಬಗ್ಗೆಯೂ ಜನ ಆತಂಕಿತರಾಗಿರುವುದು ತಿಳಿದುಬಂದಿದೆ. ಉಳ್ಳಾಲ: ಜಾಗೃತಿ
ಉಳ್ಳಾಲ: ಕೊರೊನಾ ವೈರಸ್ ಮುಂಜಾಗ್ರತೆಗಾಗಿ ಉಳ್ಳಾಲ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ತಲಪಾಡಿಯಲ್ಲಿ ವಾರ್ಷಿಕ ಜಾತ್ರೆಯೂ ಜರಗಿದ್ದು ಭಕ್ತರ ಸಂಖ್ಯೆ ವಿರಳವಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿ ಸೋಮೇಶ್ವರ ಬ್ರಹ್ಮಕಲಶೋತ್ಸವ ನಡೆಸುವ ಕುರಿತಂತೆ ಇಂದು ದೇಗುಲದಲ್ಲಿ ಸಭೆ ಕರೆಯಲಾಗಿದೆ ಎಂದು ತಿಳಿದು ಬಂದಿದೆ. ಕೊರೊನಾ ಮುನ್ನೆಚ್ಚರಿಕೆ: ಹಳೆಯಂಗಡಿಯಲ್ಲಿ ಜಾಗೃತಿ
ಹಳೆಯಂಗಡಿ: ಕೊರೊನಾ ವೈರಸ್‌ನ ಮುನ್ನೆಚ್ಚರಿಕೆಯಾಗಿ ಜಿಲ್ಲಾದ್ಯಂತ ಜಿಲ್ಲಾಧಿಕಾರಿಗಳು ವಿವಿಧ ಸಭೆ ಸಮಾರಂಭಗಳನ್ನು ತಾತ್ಕಾಲಿಕವಾಗಿ ನಿಷೇಧಿಸಿ ಆದೇಶದ ಹಿನ್ನೆಲೆಯಲ್ಲಿ ಹಳೆಯಂಗಡಿ-ಪಡುಪಣಂಬೂರು ಪ್ರದೇಶದಲ್ಲಿ ಸಾಕಷ್ಟು ಜಾಗೃತಿ ಮೂಡಿಸುವ ಕೆಲಸವು ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತ್‌ಗಳು ನಿರ್ವಹಿಸಿದೆ. ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಶ್ರೀ ಗೋಪಾಲಕೃಷ್ಣ ದೇವರ ಪ್ರತಿಷ್ಠೆಗೆ ಭಕ್ತರು ಸ್ವಯಂ ಪ್ರೇರಣೆಯಿಂದ ಆಗಮಿಸಿ ದರ್ಶನ ಪಡೆದರು, ಕಾರ್ಯಕ್ರಮವನ್ನು ಸರಳ ರೀತಿಯಲ್ಲಿ ಆಯೋಜಿಸಲಾಗಿತ್ತು. ಇಲ್ಲಿ ಹಳೆಯಂಗಡಿಯ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ ಹಾಗೂ ಯುವತಿ ಮತ್ತು ಮಂಡಳಿಯ ಸದಸ್ಯರು ಕರಪತ್ರದ ಮೂಲಕ ಜಾಗೃತಿ ಮೂಡಿಸುವ ಕೆಲಸ ನಡೆಸಿದರು. ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನಕ್ಕೂ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು, ಇಲ್ಲಿನ ಯಕ್ಷಗಾನ ಮೇಳವು ತಿರುಗಾಟದಲ್ಲಿರುವುದರಿಂದ ಜಿಲ್ಲಾಡಳಿತದಿಂದ ಅಧಿಕೃತ ಆದೇಶವನ್ನು ನಿರೀಕ್ಷಿಸಲಾಗುತ್ತಿದೆ ಎಂದು ದೇಗುಲದ ಪ್ರಮುಖರು ತಿಳಿಸಿದ್ದಾರೆ. ಮುಜುರಾಯಿ ಇಲಾಖೆಯ “ಎ’ ಗ್ರೇಡ್‌ನ ದೇಗುಲದವಾದ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನದಲ್ಲಿ ಜಿಲ್ಲಾಧಿಕಾರಿಗಳ ಆದೇಶವನ್ನು ಪಾಲಿಸಲಾಗಿದ್ದು, ದೇಗುಲದಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಸೇಟ್ ಗಳ ಸಹಿತ ತೀರ್ಥ ಪ್ರಸಾದವನ್ನು ರದ್ದುಪಡಿಸಲಾಗಿದೆ. ಸ್ಥಳೀಯ ಆರೋಗ್ಯ ಇಲಾಖೆಯ ಮತ್ತು ಆಶಾ ಕಾರ್ಯಕರ್ತರು ಮನೆ ಮನೆ ಭೇಟಿ ನೀಡುತ್ತಿರುವುದು ಕಂಡು ಬಂದಿದೆ. ವಿಶೇಷವಾಗಿ ವಿದೇಶದಿಂದ ಆಗಮಿಸುವ ನಿವಾಸಿಗಳ ಬಗ್ಗೆ ಮಾಹಿತಿ ನೀಡಲು ವಿನಂತಿಸಿಕೊಳ್ಳುತ್ತಿದ್ದಾರೆ. ಅಂಗನವಾಡಿ ಕೇಂದ್ರದ ಕಾರ್ಯಕರ್ತರಿಗೂ ಸಹ ಅಕ್ಕಪಕ್ಕದ ನಿವಾಸಿಗಳ ಹಾಗೂ ಜ್ವರ, ಕೆಮ್ಮು ಕಾಣಿಸಿಕೊಂಡಲ್ಲಿ ಕೂಡಲೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ಸಸಿಹಿತ್ಲುವಿನ ಬೀಚ್‌ನಲ್ಲಿಯೂ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿತ್ತು. ಮುಖ್ಯ ಪೇಟೆಯಲ್ಲಿ ಜನಸಂಚಾರ ಯಥಾಸ್ಥಿತಿಯಲ್ಲಿತ್ತು. ಜನರಿಲ್ಲದೆ ಸ್ತಬ್ಧವಾಯಿತು ವ್ಯಾಪಾರ ವಹಿವಾಟು
ಬಜಪೆ: ಕೊರೊನಾ ವೈರಸ್ ಹರಡದಂತೆ ಜಾಗೃತಿಯಾಗಿ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಜನರು ಒಂದೆಡೆ ಕೂಡಬಾರದು ಎಂಬ ಜಿಲ್ಲಾಡಳಿತ ಆದೇಶದಂತೆ ಬಜಪೆ ಪೇಟೆಯಲ್ಲಿ ಜನಸಂದಣಿ, ವಾಹನ ಸಂಚಾರ ವಿರಳವಾಗಿತ್ತು. ಬಸ್ಸುಗಳು ಖಾಲಿ ಖಾಲಿಯಾಗಿ ಸಂಚರಿಸುವುದು ಕಂಡು ಬಂತು. ಇದರಿಂದ ವ್ಯಾಪಾರ ವಟಿವಾಟು ಸ್ತಬ್ಧವಾಗಿತ್ತು. ಮಾರುಕಟ್ಟೆಗೆ ಜನರೇ ಬಂದಿಲ್ಲ. ಸಭೆ, ಸಮಾರಂಭ ಜತೆ ಯಕ್ಷಗಾನ ಸೇವೆಗಳು ನಡೆಯದ ಕಾರಣ ಜನರಲ್ಲಿ ಚಿಂತೆಗೆ ಕಾರಣವಾಗಿದೆ. ಸಮಾರಂಭವಿಲ್ಲದೇ ಕ್ಯಾಟರಿಂಗ್ ನವರಿಗೆ ದೊಡ್ಡ ಹೊಡೆತ ಬಿದ್ದಿದೆ. ಕಟೀಲು ಯಕ್ಷಗಾನ ಮೇಳದ ತಿರುಗಾಟ ತಾತ್ಕಾಲಿಕ ರದ್ದು; ಜಿಲ್ಲಾಧಿಕಾರಿ ಆದೇಶ
ಕಟೀಲು: ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ನಡೆಸಲ್ಪಡುವ ಆರು ಮೇಳಗಳ ಯಕ್ಷಗಾನ ಪ್ರದರ್ಶನ ತಾತ್ಕಾಲಿಕವಾಗಿ ರದ್ದುಗೊಳಿಸಬೇಕು, ಮುಂದಿನ ಆದೇಶದವರೆಗೆ ಯಕ್ಷಗಾನವನ್ನು ಪ್ರದರ್ಶಿಸಬಾರದು ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಮೇಳ ಹೊರಟ ಮೇಲೆ ಯಕ್ಷಗಾನ ನಿಲ್ಲಬಾರದು ಇದು ದೇವರ ಪೂಜೆ ಎಂಬ ನಂಬಿಕೆಯಿದೆ. ಮೇಳದ ದೇವರಿಗೆ ಅರ್ಚಕರು ತ್ರಿಕಾಲಪೂಜೆ ಮಾಡುತ್ತಾರೆ. ರಂಗಸ್ಥಳದಲ್ಲಿ ಕಟ್ಟೇಶ (ಬಾಲಗೋಪಾಲ) ವೇಷದವರು ಕುಣಿದು ಆರತಿ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ದೇವರ ಪೂಜಾ ರೂಪವಾದ ಯಕ್ಷಗಾನವನ್ನು ಮಾತ್ರ ಕಟೀಲು ರಥಬೀದಿಯಲ್ಲಿ ಇಂದಿನಿಂದ ನಡೆಸಲಾಗುವುದು. ಸಂಜೆ ಏಳು ಗಂಟೆಗೆ ಆರೂ ಮೇಳಗಳ ದೇವರ ಪೂಜೆಯನ್ನು ಬಿಡಾರದಲ್ಲಿಯೇ ನೆರವೇರಿಸಿ ಅಲ್ಲಿಂದ ರಂಗಸ್ಥಳಕ್ಕೆ ಕುಕ್ಕೇಶ( ಕೋಡಂಗಿ) ಬರಲಿದೆ. ಸೀಮಿತ ಹಾಡುಗಳ ಅನಂತರ ಕುಕ್ಕೇಶ(ಬಾಲಗೋಪಾಲ) ಬಂದು ಕುಣಿದಾಗ ಆರೂ ಮೇಳದ ದೇವರು ರಂಗಸ್ಥಳಕ್ಕೆ ಬರಲಿದ್ದಾರೆ. ಅನಂತರ ಮೇಳದ ದೇವರ ಪೂಜಾವಿಧಿಗಳು ಶಾಸ್ತ್ರೋಕ್ತವಾಗಿ ಹಾಗೂ ಸಾಂಪ್ರದಾಯಿಕವಾಗಿ ಮುಗಿಯುತ್ತದೆ. ಅಲ್ಲಿಗೆ ಯಕ್ಷಗಾನ ಮುಗಿಸಿ ದೇವರಿಗೆ ಬಿಡಾರದಲ್ಲಿ ಪುನಃ ಅರ್ಚಕರು ಪೂಜೆ ಮಾಡಿದ ಅನಂತರ ಇಡೀ ಪ್ರಕ್ರಿಯೆ ಮುಗಿಯಲಿವೆೆ. ದೇಗುಲದ ಮುಂಭಾಗ ಸುಮಾರು ಅರ್ಧ ಗಂಟೆ ಮಾತ್ರ ಈ ಕಾರ್ಯಕ್ರಮ ನೆರವೇರಲಿದೆ. ದ.ಕ. ಜಿಲ್ಲಾಡಳಿತದ ಸೂಚನೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು ಭಕ್ತರು ಭಾಗವಹಿಸಲು ಅವಕಾಶ ಇರುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ಉಳಾಯಿಬೆಟ್ಟು ಗ್ರಾಮ ಸಭೆ ಮುಂದಕ್ಕೆ
ಕೈಕಂಬ: ಕೊರೊನಾ ವೈರಸ್ ಹರಡದಂತೆ ತಡೆಯಲು ಯಾವುದೇ ಸಭೆ, ಸಮಾರಂಭಗಳು ಜರಗಿಸಬಾರದು ಎಂಬ ರಾಜ್ಯ ಸರಕಾರದ ಸುತ್ತೋಲೆನ್ವಯ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಯವರ ಮೌಖೀಕ ಅದೇಶನ್ವಯ ಉಳಾಯಿಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಉಳಾಯಿಬೆಟ್ಟು ಗ್ರಾಮದ 2019-20ನೇ ಸಾಲಿನ ದ್ವಿತೀಯ ಹಂತದ “ಗ್ರಾಮ ಸಭೆ’ಯನ್ನು ಅಧ್ಯಕ್ಷರು ಹಾಗೂ ನೋಡಲ್ ಅಧಿಕಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (ಮಂಗಳೂರು ನಗರ )ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯವರ ಗಮನಕ್ಕೆ ತಂದು ಸಭೆಯನ್ನು ಮುಂದೂಡಲಾಗಿದೆ.