ಬೈಂದೂರು: ಬೈಂದೂರು ಭಾಗದ ಗ್ರಾಮೀಣ ಭಾಗವಾದ ಗಂಗನಾಡು, ಮಧ್ದೋಡಿ, ಹೊಸೂರು ಮುಂತಾದೆಡೆ ಜ್ವರ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಇದರ ಚಿಕಿತ್ಸೆಗೆ ಆರೋಗ್ಯ ಕೇಂದ್ರಕ್ಕೆ ಬರದೆ ಮನೆಯಲ್ಲಿಯೇ ಔಷಧ ಪಡೆದು ಸೋಂಕು ಉಲ್ಬಣಿಸಿದ ಹಲವು ಉದಾಹರಣೆಗಳು ಹಳ್ಳಿ ಭಾಗದಲ್ಲಿ ಕಂಡುಬರುತ್ತಿವೆ.
ಭಯ ಆತಂಕ ದೂರಾಗಬೇಕಿದೆ :
ಕೋವಿಡ್ ಆರಂಭವಾದಾಗ ಬೆಂಗಳೂರು, ಮುಂಬಯಿ ಮುಂತಾದ ಪಟ್ಟಣ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದವರು ಗ್ರಾಮೀಣ ಭಾಗದ ಮನೆಗಳಿಗೆ ವಾಪಸಾದರು. ಕಳೆದೊಂದು ತಿಂಗಳಿಂದ ಹೊಸೂರು ಸೇರಿದಂತೆ ಹಲವು ಊರಿನ ಜನ ಜ್ವರದಿಂದ ಬಳಲುತ್ತಿದ್ದಾರೆ. ಆಸ್ಪತ್ರೆಗೆ ತೆರಳಲು ಹೆದರಿ ಸ್ಥಳೀಯ ಔಷಧಾಲಯದಿಂದ ಔಷಧ ಪಡೆದು ಮನೆಯಲ್ಲೇ ಇದ್ದಾರೆ. ಇದರಲ್ಲಿ ಕೆಲವರು ಗುಣಮುಖರಾದರೆ ಇನ್ನು ಕೆಲವರು ಸೋಂಕು ವಾಸಿಯಾಗದೆ ನರಳುತ್ತಿದ್ದಾರೆ. 2-3 ಮಂದಿ ಸಾವನ್ನಪ್ಪಿದ ನಿದರ್ಶನಗಳೂ ಇವೆ. ಆರೋಗ್ಯ ಇಲಾಖೆ, ಜಿಲ್ಲಾಡಳಿತ ಗಮನ ಹರಿಸದಿದ್ದಲ್ಲಿ ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ.
ಕೃಷಿ ಚಟುವಟಿಕೆಯಲ್ಲಿ ಹಿನ್ನೆಡೆಯಾಗುವ ಆತಂಕ :
ಸಾಮಾನ್ಯವಾಗಿ ಜೂನ್ ತಿಂಗಳು ಆರಂಭವಾದರೆ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆ ಆರಂಭವಾಗುತ್ತದೆ. ಬಿತ್ತನೆ ಸೇರಿದಂತೆ ಸಾಮೂಹಿಕ ಕೃಷಿ ಕಾರ್ಯ ಮಾಡ ಬೇಕಾಗಿರುವುದು ಅನಿವಾರ್ಯ. ಹೀಗಾಗಿ ಸೋಂಕು ಹೆಚ್ಚುವ ಕಾರಣ ಒಂದೆಡೆಯಾದರೆ ಪರೀಕ್ಷೆ ಮಾಡಿಕೊಂಡು ಕೊರೊನಾ ದೃಢಪಟ್ಟರೆ ಕ್ವಾರಂಟೈನ್ ಅಥವಾ ಆಸ್ಪತ್ರೆ ಸೇರಿದರೆ ಕೃಷಿ ಕಾರ್ಯಕ್ಕೆ ತೊಂದರೆಯಾಗುತ್ತದೆ ಎನ್ನುವ ಯೋಚನೆ ಕೂಡ ಈ ಸಮಸ್ಯೆಗೆ ಕಾರಣವಾಗಿದೆ. ಕೆಲವು ಗ್ರಾಮೀಣ ಭಾಗದಲ್ಲಿ ಜ್ವರ ಬಾಧಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ದೂರ ದೂರದಲ್ಲಿ ಮನೆಗಳಿರುವ ಕಾರಣ ಗಂಭೀರವಾಗುವವರೆಗೆ ಇತರರಿಗೆ ಮಾಹಿತಿ ಸಿಗದಿರುವುದು ಸಮಸ್ಯೆಯಾಗಿ ಕಾಡುತ್ತಿದೆ. ಒಟ್ಟಾರೆಯಾಗಿ ಜಿಲ್ಲಾಡಳಿತ ಗ್ರಾಮೀಣ ಭಾಗದ ವಾಸ್ತವಿಕ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ಹಳ್ಳಿಗಳಲ್ಲಿ ಈ ರೀತಿ ಸಮಸ್ಯೆ ಆಗಿರುವ ಬಗ್ಗೆ ಮಾಹಿತಿಗಳಿವೆ. ಈಗಾಗಲೇ ಈ ಬಗ್ಗೆ ನಿಗಾ ವಹಿಸಿದ್ದು ಗ್ರಾಮೀಣ ಭಾಗದಲ್ಲಿ ಪ್ರತೀ ಮನೆ ತಪಾಸಣೆ ಮಾಡುವ ಕುರಿತು ವೈದ್ಯರ ತಂಡಕ್ಕೆ ಜವಾಬ್ದಾರಿ ವಹಿಸುತ್ತೇನೆ.
– ಡಾ| ನಾಗಭೂಷಣ, ಜಿಲ್ಲಾ ಆರೋಗ್ಯಾಧಿಕಾರಿ
ಬೈಂದೂರು ಕ್ಷೇತ್ರದಲ್ಲಿ ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪಂ.ಗಳು ಉತ್ತಮ ಕೆಲಸ ಮಾಡುತ್ತಿದೆ. ಸೋಂಕಿತರ ಸಂಖ್ಯೆಯೂ ನಿಯಂತ್ರಣದಲ್ಲಿದೆ. ಗ್ರಾಮೀಣ ಭಾಗದಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುವುದು.
-ಬಿ.ಎಂ. ಸುಕುಮಾರ್ ಶೆಟ್ಟಿ , ಶಾಸಕರು
– ಅರುಣ್ ಕುಮಾರ್ ಶಿರೂರು