ಬೆಂಗಳೂರು: ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯವಿಲ್ಲ, ಆ್ಯಂಬುಲೆನ್ಸ್ ಬಂದಿಲ್ಲ, ಕೃತಕ ಆಕ್ಸಿಜನ್, ವೆಂಟಿಲೇಟರ್ ಇಲ್ಲ, ಚಿಕಿತ್ಸೆ ನೆಪದಲ್ಲಿ ಹಣ ಸುಲಿಗೆ ಎಂಬಿತ್ಯಾದಿ ಪರದಾಟಗಳ ನಡುವೆ “ಕೋವಿಡ್ ಸೋಂಕಿಗೆ ಮನೆಯೇ ಮಂತ್ರಾಲಯ’ ಎಂಬುದನ್ನು ರಾಜಧಾನಿ ಮಂದಿ ಮನವರಿಕೆ ಮಾಡಿಕೊಂಡಿದ್ದಾರೆ.
ಈವರೆಗೂ ಬರೋಬ್ಬರಿ 30 ಸಾವಿರಕ್ಕೂ ಅಧಿಕ ಸೋಂಕಿತರು ಮನೆಯಲ್ಲಿಯೇ ಆರೈಕೆಯಲ್ಲಿದ್ದು (ಹೋಂ ಕೇರ್/ಐಸೋಲೇಷನ್) ಗುಣಮುಖರಾಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳ ಪೈಕಿ 11,275 ಸೋಂಕಿತರು ಮನೆಯಲ್ಲಿ ಆರೈಕೆಯಲ್ಲಿದ್ದಾರೆ. ಅಲ್ಲದೆ, ಮನೆಯಲ್ಲಿದ್ದು ಆರೈಕೆ ಪಡೆಯುತ್ತಿರುವವರ ಪೈಕಿ ಶೇ.99.9 ರಷ್ಟು ಮಂದಿ ಗುಣಮುಖರಾಗುತ್ತಿದ್ದಾರೆ. ಈ ಮೂಲಕ ಸೋಂಕಿನಿಂದ ಮುಕ್ತಿ ಪಡೆಯಲು ಆಸ್ಪತ್ರೆಗಿಂತ ಮನೆಯೇ ಉತ್ತಮ ಎನ್ನಲಾಗಿದೆ.
ಆರಂಭದಲ್ಲಿ ದೇಶಕ್ಕೆ ಮಾದರಿಯಾಗಿದ್ದ ಬೆಂಗಳೂರಿನಲ್ಲಿ ಜೂನ್ ನಂತರ ಸೋಂಕು ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾದವು. ಈ ವೇಳೆ ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯವಿಲ್ಲ, ಆ್ಯಂಬುಲೆನ್ಸ್ ಬಂದಿಲ್ಲ, ಕೃತಕ ಆಕ್ಸಿಜನ್, ವೆಂಟಿಲೇಟರ್ ಇಲ್ಲ ಹೀಗೆ ವಿವಿಧ ಕಾರಣಗಳ ಮೂಲಕ ಸೋಂಕಿತರ ಪರದಾಟ ಸರ್ವೆ ಸಾಮಾನ್ಯ ಎಂಬ ಮಟ್ಟಕ್ಕೆ ತಲುಪಿತು. ಸೋಂಕು ತೀವ್ರತೆಯಿದ್ದ ಮಹಾರಾಷ್ಟ್ರ, ದೆಹಲಿ ರಾಜ್ಯಗಳು ಮೇ ತಿಂಗಳಲ್ಲಿಯೇ ಮನೆಯಲ್ಲಿಯೇ ಆರೈಕೆ ಯೋಜನೆ ಆರಂಭಿಸಿದ್ದವು. ರಾಜ್ಯದಲ್ಲಿ ಸೋಂಕು ದೃಢಪಟ್ಟವರ ಪೈಕಿ ಶೇ. 75ಕ್ಕೂ ಅಧಿಕ ಮಂದಿಯಲ್ಲಿ ರೋಗ ಲಕ್ಷಣಗಳೇ ಇರಲಿಲ್ಲ. ಹೀಗಾಗಿ, ಸರ್ಕಾರ ಜುಲೈ ಮೊದಲ ವಾರದಲ್ಲಿ ಸೋಂಕು ಲಕ್ಷಣ ಇಲ್ಲದವರಿಗೆ ಮನೆಯಲ್ಲಿಯೇ ಆರೈಕೆಯಲ್ಲಿರಲು ಅನುಮತಿ ನೀಡಿತು. ಆರಂಭದಿಂದ ಸೇವೆಯಲ್ಲಿ ನಿರತರಾಗಿ ಒತ್ತಡದಲ್ಲಿದ್ದ ವೈದ್ಯರಿಗೆ ಸ್ವಲ್ಪ ರಿಲೀಫ್ ಸಿಕ್ಕಿತು.
ಮನೆ ಆರೈಕೆ ಪ್ರಕ್ರಿಯೆ ಹೇಗೆ? : ಸೋಂಕು ದೃಢಪಟ್ಟ ವ್ಯಕ್ತಿಗಳಿಗೆ ಬಿಬಿಎಂಪಿ ವಾರ್ಡ್‌ನ ಆರೋಗ್ಯ ನಿರೀಕ್ಷಕರು ಕರೆ ಮಾಡಿ ಸರ್ಕಾರಿ/ ಖಾಸಗಿ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್, ಹೋಂ ಕೇರ್ (ಮನೆಯಲ್ಲಿ ಆರೈಕೆ) ಎಂಬ ಮೂರು ಆಯ್ಕೆಯನ್ನು ನೀಡುತ್ತಾರೆ. ಮನೆ ಎಂದು ಆಯ್ಕೆ ಮಾಡಿದರೆ ತಕ್ಷಣ ಆರೋಗ್ಯ ಸಹಾಯಕರು ಮತ್ತು ಕೊರೊನಾ ಕಾರ್ಯಕ್ಕೆ ನಿಗದಿಯಾಗಿರುವ ಶಿಕ್ಷಕರ ತಂಡ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತದೆ. ಸೋಂಕು ಲಕ್ಷಣ ಇಲ್ಲದಿದ್ದರೆ, ಮನೆಯಲ್ಲಿ ಪ್ರತ್ಯೇಕ ಕೊಠಡಿ, ಶೌಚಾಲಯ ಇದ್ದರೆ ಅನುಮತಿ ನೀಡುತ್ತಾರೆ. ಇಲ್ಲದಿದ್ದರೆ ಕೋವಿಡ್ ಕೇರ್ ಸೆಂಟರ್‌ಗೆ ಶಿಫಾರಸು ಮಾಡುತ್ತಾರೆ. ಅನುಕೂಲಕರ ವಾತಾವರಣ ಇದ್ದರೆಆರೋಗ್ಯ ಸಹಾಯಕರು ಮನೆ ಬಾಗಿಲಿಗೆ ಸೀಲ್ ಡೌನ್ ಗುರುತು ಹಾಕಿ, ಹತ್ತು ದಿನಗಳಿಗಾಗುವಷ್ಟು ವಿಟಮಿನ್ ಸಿ ಮತ್ತು ಜಿಂಕ್ ಮಾತ್ರೆ ನೀಡಿ, 14 ದಿನ ಐಸೋಲೇಷನ್‌ಗೆ ಏನೆಲ್ಲಾ ಚಟುವಟಿಕೆ ಮಾಡಬೇಕು ಎಂಬ ಮಾಹಿತಿ ನೀಡುತ್ತಾರೆ. ಬಳಿಕ ನಿತ್ಯ ಕರೆ ಮಾಡಿ ಆರೋಗ್ಯ ವಿಚಾರಿಸಲಾಗುತ್ತದೆ. ತುರ್ತು ಸಮಸ್ಯೆಗೆ ಸಹಾಯವಾಣಿ ನೆರವು, 14 ದಿನದ ಬಳಿಕ ಆಪ್ತ ಸಮಾಲೋಚನೆ ಬಳಿಕ ಗುಣಮುಖ ಪ್ರಮಾಣ ಪತ್ರ ನೀಡಲಾಗುತ್ತದೆ.
ಮಾನಸಿಕ ಆರೋಗ್ಯ ಸಾಧ್ಯ : ಸೋಂಕು ದೃಢಪಟ್ಟವರ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವು ಮುಖ್ಯ. ಆಸ್ಪತ್ರೆ ವಾತಾವರಣ ಸೋಂಕಿತರನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ. ಸೋಂಕು ಲಕ್ಷಣ ಇಲ್ಲದಿದ್ದರೆ ಮನೆಯಲ್ಲಿಯೇ ಇರುವುದು ಎನ್ನುತ್ತಾರೆ ಮನೋವೈದ್ಯರು
ಸೋಂಕು ದೃಢಪಟ್ಟ ವ್ಯಕ್ತಿಗೆ ಕರೆ ಮಾಡಿ ವಿಚಾರಿಸಿದರೆ ಶೇ.80 ಮನೆಯಲ್ಲಿಯೇ ಆರೈಕೆಯಲ್ಲಿರುತ್ತೇವೆ ಎನ್ನುತ್ತಿದ್ದಾರೆ. ತಪಾಸಣೆಬಳಿಕ ಅನುಮತಿ ನೀಡಿ ನಿತ್ಯ ಕರೆ ಮಾಡಿ ಆರೋಗ್ಯ ವಿಚಾರಿಸಲಾಗುತ್ತದೆ. ನಮ್ಮ ವಾರ್ಡ್ ನಲ್ಲಿ ಮನೆಯಲ್ಲಿದ್ದವರ ಪೈಕಿ ಎಲ್ಲರೂ ಗುಣಮುಖರಾಗಿದ್ದಾರೆ.
–ಅಶೋಕ್ ಜಿ, ಚಾಮರಾಜಪೇಟೆ ವಾರ್ಡ್ ಹಿರಿಯ ಆರೋಗ್ಯ ನಿರೀಕ್ಷಕರು
ಸೋಂಕಿನ ಲಕ್ಷಣ ಇರಲಿಲ್ಲ. ಮನೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಇತ್ತು. ತಪಾಸಣೆಗೆ ಬಂದಿದ್ದ ಬಿಬಿಎಂಪಿ ಅಧಿಕಾರಿಗಳು ಅನುಮತಿ ನೀಡಿದರು. ವೈದ್ಯರು ನೀಡಿದ್ದ ಎರಡು ಮಾತ್ರೆ ಸೇವಿಸಿ, ಮನೆಯ ಊಟ ಮಾಡಿಕೊಂಡು ಗುಣಮುಖನಾಗಿದ್ದೇನೆ. ಸೋಂಕು ದೃಢಪಟ್ಟ ನಂತರ ಆಸ್ಪತ್ರೆ ಅಲೆದಾಟ ಇಲ್ಲದ ಹಿನ್ನೆಲೆ ಸೋಂಕು ತಗುಲಿತ್ತು ಎಂಬ ಅನುಭವವೇ ಆಗಲಿಲ್ಲ.
–ಅನಿಲ್, ಗುಣಮುಖರಾದ ಆರ್.ಟಿ ನಗರ ನಿವಾಸಿ
– ಜಯಪ್ರಕಾಶ್ ಬಿರಾದಾರ್