Advertisement

Covid Fear: ಶಬರಿಮಲೆ ಯಾತ್ರಿಗಳಿಗೆ ಕೊರೊನಾ ಆತಂಕ

03:27 PM Dec 21, 2023 | Team Udayavani |

ರಾಮನಗರ: ಒಂದೆಡೆ ಕೇರಳದಲ್ಲಿ ರೂಪಾಂತರಿ ತಳಿ ಜೆಎನ್‌1 ಪತ್ತೆಯಾಗಿರುವುದು, ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ವರದಿಯಾಗು ತ್ತಿರುವುದು, ಶಬರಿಮಲೆ ಯಾತ್ರೆಗೆ ತೆರಳುವ ಭಕ್ತರ ಮೇಲೆ ಪರಿಣಾಮ ಬೀರಿದೆ.

Advertisement

ಡಿಸೆಂಬರ್‌ ಮೊದಲ ವಾರದಿಂದ ಸಂಕ್ರಾಂತಿವರೆಗೆ ಅಯ್ಯಪ್ಪ ಮಾಲೆ ದರಿಸುವ ಭಕ್ತರು ಶಬರಿಮಲೆ ಯಾತ್ರೆಗೆ ತೆರಳುವುದು ಹಿಂದಿನಿಂದ ನಡೆದು ಕೊಂಡು ಬಂದಿರುವ ವಾಡಿಕೆ. ಜಿಲ್ಲೆಯಲ್ಲಿ

ಈ ಸಮಯದಲ್ಲಿ 10- 15 ಸಾವಿರ ಮಂದಿ ಭಕ್ತರು ಪ್ರತಿವರ್ಷ ಶಬರಿಮಲೆ ಯಾತ್ರೆ ಮಾಡುತ್ತಿದ್ದು, ಇದೀಗ ಕೇರಳದಲ್ಲೇ ಸೋಂಕು ಕಾಣಿಸಿಕೊಂಡಿರುವುದು ಶಬರಿಮಲೆ ಯಾತ್ರಿಕರಲ್ಲಿ ಆತಂಕ ಸೃಷ್ಟಿಸಿದೆ.

ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶಬರಿಮಲೆ ಯಾತ್ರೆ ಕೈಗೊಳ್ಳುವುದೋ ಬೇಡವೊ ಎಂಬ ಜಿಜ್ಞಾಸೆಗೆ ಬಿದಿದ್ದಾರೆ. ಇನ್ನು ಕೇರಳ ಗಡಿಯ ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ತಪಾಸಣೆ ಮಾಡುತ್ತಿರುವುದು ಯಾತ್ರಿಕರಿಗೆ ಇರುಸುಮುರುಸು ಮೂಡಿಸಿದೆ. ಕೆಲದಿನಗಳ ಹಿಂದೆ ಶಬರಿಮಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಿದ್ದ ಕಾರಣ ತಡವಾಗಿ ಪ್ರವಾಸ ಮಾಡೋಣ ಎಂದು ಕೊಂಡಿದ್ದ ಭಕ್ತರು ಇದೀಗ ಮುಂದೇನು ಎಂಬ ಜಿಜ್ಞಾಸೆಗೆ ಸಿಲುಕಿದ್ದಾರೆ.

ಜಿಲ್ಲಾಡಳಿತ ಸಕಲ ಸಿದ್ಧತೆ: ಜಿಲ್ಲೆಯಲ್ಲಿ 3 ವ್ಯಕ್ತಿಗಳಿಗೆ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಜನರು ಆತಂಕಕ್ಕೆ ಒಳಗಾಗಬೇಡಿ ಎಂದು ಧೈರ್ಯ ನೀಡಿರುವ ಜಿಲ್ಲಾ ಆರೋಗ್ಯ ಇಲಾಖೆ, ರೂಪಾಂತರಿ ವೈರಸ್‌ನಿಂದ ಹರಡುವ ಸೋಂಕನ್ನು ನಿಯಂತ್ರಿಸಲು ಎಲ್ಲಾ ರೀತಿಯ ಸಿದ್ಧತೆಗೆ ಮುಂದಾಗಿದೆ.

Advertisement

650 ಆಕ್ಸಿಜನ್‌ ಬೆಡ್‌ಗಳು ಸಿದ್ದ: ಕೊರೊನಾ ಸೋಂಕಿ ತರ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆ ಹಾಗೂ ಮೂರು ತಾಲೂಕುಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಜಿಲ್ಲಾಸ್ಪತ್ರೆಯಲ್ಲಿ 250 ಹಾಸಿಗೆಗಳನ್ನು ಮೀಸಲಿರಿಸಿದ್ದು, ಉಳಿದ  ಮೂರು ತಾಲೂಕು ಆಸ್ಪತ್ರೆಗಳಲ್ಲಿ ತಲಾ 100 ಹಾಸಿಗೆಗಳನ್ನು ಮೀಸಲಿರಿಸಲಾಗಿದೆ. ಹಿಂದೆ ಹಾಸಿಗೆಗಳ ಸಮಸ್ಯೆ ಯಿಂದಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ಹೆಚ್ಚಿನ ರೋಗಿಗಳನ್ನು ಕಳುಹಿಸಲಾಗಿತ್ತು. ಆದರೆ, ಈ ಬಾರಿ ಅಂತಹ ಸಮಸ್ಯೆ ಎದುರಾಗದಂತೆ ಕ್ರಮ ವಹಿಸ ಲಾಗಿದೆ. ರೋಗಿಗಳಿಗೆ ಚಿಕಿತ್ಸೆ ನೀಡಲು  ಬೆಡ್‌ಗಳ ವ್ಯವಸ್ಥೆ, ಆಕ್ಸಿಜನ್‌ ಹಾಸಿಗೆಗಳು, ವೆಂಟಿ ಲೇಟರ್‌, ಆಕ್ಸಿಜನ್‌ ಸಾಂದ್ರಕಗಳನ್ನು ಸಿದ್ಧಪಡಿಸಿಕೊಂಡಿದ್ದು, ಅಗತ್ಯ ಬಿದ್ದರೆ ಈ ಹಿಂದೆ ಕಂದಾಯ ಭವನದಲ್ಲಿ ತೆರೆಯಲಾಗಿದ್ದ ಕೋವಿಡ್‌ ಕೇರ್‌ ಸೆಂಟರನ್ನು ಮತ್ತೆ ಬಳಕೆ ಮಾಡಿಕೊಳ್ಳಲು ಚಿಂತನೆ ನಡೆಸಲಾಗಿದೆ.

ಶೇ. 98ರಷ್ಟು ಗುಣಮುಖ: ಜಿಲ್ಲೆಯಲ್ಲಿ ಈ ಹಿಂದೆ ಕಾಣಿಸಿಕೊಂಡಿದ್ದ ಕೊರೊನಾ ಒಂದು ಮತ್ತು ಎರಡನೇ ಅಲೆಯಲ್ಲಿ ಸೋಂಕಿತರ ಪೈಕಿ ಶೇ.98 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆ ಹೊಂದಿದ್ದಾರೆ. ಎರಡೂ ಅಲೆಗಳಲ್ಲಿ ಒಟ್ಟು 8.91 ಲಕ್ಷ ಮಂದಿಗೆ ಕೋವಿಡ್‌ ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ 24,474 ಮಂದಿಗೆ ಸೋಂಕು ಕಾಣಿಸಿ ಕೊಂಡಿತ್ತು. ಇವರಲ್ಲಿ 24,347ಮಂದಿ  ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಹಿಂದಿರು ಗಿದರೆ,399 ಮಂದಿ  ಸಾವಿಗೀಡಾಗಿದ್ದರು.

2020 ಎ.1 ರಿಂದ 2021 ಮಾ.31ರ ವರೆಗಿನ ಮೊದಲನೇ ಅಲೆಯಲ್ಲಿ 7,846 ಮಂದಿಗೆ ಸೋಂಕು ಕಾಣಿಸಿಕೊಂಡು, ಇವರಲ್ಲಿ 7,713 ಮಂದಿ ಗುಣ ಮುಖರಾಗಿದ್ದರು. 136 ಮಂದಿ ಸಾವಿಗೀಡಾಗಿದ್ದರು. 2021 ಎ.1 ರಿಂದ 2021 ಡಿ.31ರ ವರೆಗಿನ 2ನೇ ಅಲೆಯಲ್ಲಿ 16,870 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 16,634 ಮಂದಿ ಗುಣಮುಖರಾದರೆ 236 ಮಂದಿ ಸಾವಿಗೀಡಾಗಿದ್ದರು.

ಆತಂಕ ಬೇಡ, ಮುನ್ನೆಚ್ಚರಿಕೆ ಇರಲಿ:

ವಿದ್ಯಾರ್ಥಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರೂ ವಿದ್ಯಾರ್ಥಿ ಆರೋಗ್ಯದಿಂದ ಕೂಡಿದ್ದು, ಸಾರ್ವಜನಿಕರು ಯಾವುದೇ ಆತಂಕ ಪಡಬೇಕಿಲ್ಲ ಎಂದು ತಿಳಿಸಿರುವ ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲೆಯಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. 60 ವರ್ಷ ದಾಟಿದವರು ಕಡ್ಡಾಯವಾಗಿ ಮಾಸ್ಕ್ ದರಿಸುವುದು, ಸಾರ್ವಜನಿಕರು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಮತ್ತು ಸ್ಯಾನಿಟೈಜೇಷನ್‌ ಮಾಡಿಕೊಳ್ಳುವ ಮೂಲಕ ಸೋಂಕಿನ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ತಿಳಿಸಿದೆ.

ಜಿಲ್ಲೆಯಲ್ಲಿ 3 ಮಂದಿಗೆ ಸೋಂಕು ಕಾಣಿಸಿ ಕೊಂಡಿದ್ದು ಅವರೆಲ್ಲರೂ ಆರೋಗ್ಯದಿಂದಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಐಸೋಲೇಷನ್‌ನಲ್ಲಿ ಇರಿಸ ಲಾಗಿದೆ. ಈಗಾಗಲೇ ಮಂಗಳವಾರ ಸೋಂಕು ಕಾಣಿಸಿಕೊಂಡಿದ್ದ ವಿದ್ಯಾರ್ಥಿಯನ್ನು ಬಿಡುಗಡೆ ಮಾಡಿದ್ದು, ಸಾಮಾಜಿಕ ಅಂತರ, ಮಾಸ್ಕ್ ಮತ್ತು ಸ್ಯಾನಿಟೈಜೇಷನ್‌ ಮಾಡಿಕೊಳ್ಳಲು ಸೂಚಿಸಲಾಗಿದೆ.-ಡಾ.ನಿರಂಜನ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ಕೋವಿಡ್‌ ಲಕ್ಷಣ ಮತ್ತು ತೀವ್ರ ಆರೋಗ್ಯ ಸಮಸ್ಯೆ ಇದ್ದವರಿಗಷ್ಟೇ ಕೊರೊನಾ  ಪರೀಕ್ಷೆ ಮಾಡಲಾಗುತ್ತಿದೆ. ಜನತೆ ಹೆದರದೆ, ಕೋವಿಡ್‌ ನಿಮಾವಳಿಗಳನ್ನು ಪಾಲನೆ ಮಾಡಬೇಕು.-ಡಾ.ನಿರಂಜನ್‌, ಜಿಲ್ಲಾ ಆರೋಗ್ಯಾಕಾರಿ, ರಾಮನಗರ

-ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next