ಗುಂಡ್ಲುಪೇಟೆ: ಕೇರಳದಿಂದ ಕೊರೊನಾ ನಕಲಿ ನೆಗೆಟಿವ್ ವರದಿ ತರುವವರ ಮೇಲೆ ಪ್ರಕರಣ ದಾಖಲು ಮಾಡಿ ಜೈಲುಗಟ್ಟಿ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕಿನ ಕೇರಳ ಗಡಿ ಭಾಗ ಮೂಲೆ ಹೊಳೆ ಚೆಕ್ ಪೋಸ್ಟ್ ಗೆ ಶನಿವಾರ ಭೇಟಿ ನೀಡಿ ಮಾಹಿತಿ ಪಡೆದು ಮಾತನಾಡಿದರು.
ಕೇರಳ ಮತ್ತು ತಮಿಳುನಾಡಿನಿಂದ ರಾಜ್ಯಕ್ಕೆ ಬರುವವರು ನಕಲಿ ರಿಪೋರ್ಟ್ ತಂದರೇ ಅಂತವರ ವಾಹನ ಜಪ್ತಿ ಮಾಡಿ ಕೇಸ್ ದಾಖಲಿಸಬೇಕು. ಈ ಬಗ್ಗೆ ಅಲ್ಲಿನ ಜಿಲ್ಲಾಧಿಕಾರಿ ಅವರಿಗೆ ಮಾಹಿತಿ ತಿಳಿಸಿ ಎಂದು ಸೂಚಿಸಿದ ಸಚಿವರು, ನಕಲಿ ಆರ್ ಟಿಪಿಸಿಆರ್ ರಿಪೋರ್ಟ್ ತರುತ್ತಿರುವ ಬಗ್ಗೆ, ಕೇರಳದ ವೈನಾಡ್ ಜಿಲ್ಲಾಧಿಕಾರಿಗೆ ಪತ್ರ ಬರೆಯಬೇಕು ಎಂದು ಜಿಲ್ಲಾಧಿಕಾರಿ ರವಿ ಅವರಿಗೆ ತಿಳಿಸಿದರು.
ಇದನ್ನೂ ಓದಿ:ಅಫ್ಘಾನ್ ನಲ್ಲಿ ತಾಲಿಬಾನ್ ಅಟ್ಟಹಾಸ: ಮತ್ತೆ ಸಾವಿನ ಭೀತಿಯಲ್ಲಿ ಹಜಾರಸ್!
ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಅವಕಾಶ ನೀಡಬೇಕು. ಉಳಿದಂತೆ ಯಾವುದೇ ಕಾರಣಕ್ಕೂ ಪ್ರವೇಶ ನೀಡಬಾರದು ಎಂದು ಸಿಬ್ಬಂದಿಗಳಿಗೆ ಸೂಚಿಸಿದರು.
ಪ್ರತಿ ದಿನ ಎಷ್ಟು ವಾಹನಗಳು ಬರುತ್ತದೆ, ಎಷ್ಟು ವಾಹನಗಳು ವಾಪಸ್ ಹೋದವು ಎಂಬ ಮಾಹಿತಿ ನಮೂದಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಸಿ.ಎಸ್.ನಿರಂಜನ ಕುಮಾರ್ ಜಿಲ್ಲಾಧಿಕಾರಿ ಎಂ.ಆರ್.ರವಿ, ಜಿಲ್ಲಾ ಆರೋಗ್ಯಾಧಿಕಾರಿ ರವಿ, ತಹಸೀಲ್ದಾರ್ ರವಿಶಂಕರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.