ಕಲಘಟಗಿ: ಕೋವಿಡ್ ಮಹಾಮಾರಿ ಪಟ್ಟಣವೂ ಸೇರಿದಂತೆ ಹದಿನಾರು ಗ್ರಾಮಗಳಲ್ಲಿ ವಕ್ಕರಿಸಿದ್ದು, ಶುಕ್ರವಾರ ನಾಲ್ವರಿಗೆ ಸೋಂಕು ದೃಢಪಟ್ಟಿರುವುದರಿಂದ ಸೋಂಕಿತರ ಸಂಖ್ಯೆ ತಾಲೂಕಿನಲ್ಲಿ 62ಕ್ಕೆ ಏರಿದಂತಾಗಿದೆ.
ಮಿಶ್ರಿಕೋಟಿ ಗ್ರಾಮದಲ್ಲಿ ಓರ್ವ ಪೊಲೀಸ್ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅಲ್ಲಿನ ಹೊರಠಾಣೆ ಸೀಲ್‌ಡೌನ್ ಮಾಡಲಾಗಿದೆ. ಅಲ್ಲದೇ ಜಾಡಗೇರಿ ಓಣಿಯಲ್ಲಿ ಮೂವರಿಗೆ ಹಾಗೂ ಹೂಲಿಯವರ ಓಣಿಯಲ್ಲಿ ಈರ್ವರಿಗೆ ಕೋವಿಡ್ ಪಾಸಿಟಿವ್ ಕಂಡು ಬಂದಿರುವುದರಿಂದ ಎರಡೂ ಓಣಿಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ಗಳಗಿಹುಲಕೊಪ್ಪ ಗ್ರಾಮದಲ್ಲಿ ಕಲ್ಲೂರವ ಓಣಿ, ಜೋಡಳ್ಳಿಯವರ ಓಣಿ ಹಾಗೂ ವಡ್ಡರ ಓಣಿಯಲ್ಲಿಯೂ ಒಬ್ಬೊಬ್ಬರಿಗೆ ಸೋಂಕು ಕಂಡು ಬಂದಿರುವುದರಿಂದ ಆ ಎಲ್ಲಾ ಓಣಿಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದ ಹಿನ್ನೆಲೆಯಲ್ಲಿ ಅಲ್ಲಿನ ಗ್ರಾಪಂ ಕಾರ್ಯಾಲಯ ಹಾಗೂ ಆವರಣದಾದ್ಯಂತ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿದ್ದು, ಗ್ರಾಮದಾದ್ಯಂತ ಕ್ರಿಮಿನಾಶಕ ಸಿಂಪಡಣೆ ಮಾಡಲಾಗಿದೆ. ಪಟ್ಟಣದಲ್ಲಿ ಶುಕ್ರವಾರ ಓರ್ವನಿಗೆ ಸೋಂಕು ದೃಢಪಟ್ಟಿರುವುದು ಸೇರಿದಂತೆ ಒಟ್ಟೂ 8 ಜನ ಸೋಂಕಿತರಲ್ಲಿ ಪೊಲೀಸ್ ಸಿಬ್ಬಂದಿ, ಹೊಸೂರ ಓಣಿ, ಹುಲಿಕಟ್ಟಿ ಮತ್ತು ಗಾಂಧಿನಗರದ ಓರ್ವ ವ್ಯಕ್ತಿ ಸೇರಿದಂತೆ ನಾಲ್ವರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಬಿ.ಗುಡಿಹಾಳ, ದೇವಿಕೊಪ್ಪ, ಮುತ್ತಗಿ, ಹಿರೇಹೊನ್ನಿಹಳ್ಳಿ, ಗಂಜೀಗಟ್ಟಿ, ದಾಸ್ತಿಕೊಪ್ಪ, ಲಿಂಗನಕೊಪ್ಪ, ಜುಂಜುನಬೈಲ್, ಕುರುವಿನಕೊಪ್ಪ, ಕಾಡನ ಕೊಪ್ಪ, ಬೇಗೂರ, ಗಳಗಿಹುಲಕೊಪ್ಪ, ಮಿಶ್ರಿಕೋಟಿ ಹಾಗೂ ಕಲಘಟಗಿ ಪಟ್ಟಣದಲ್ಲಿಯೂ ಕೋವಿಡ್-19 ಆಕ್ರಮಣ ಮಾಡಿದಂತಾಗಿದೆ. ಮುಂಜಾಗ್ರತಾ ಕ್ರಮ ಪಾಲಿಸುವುದರಿಂದ ಸಮುದಾಯದತ್ತ ಹರಡುವುದನ್ನು ನಿಲ್ಲಿಸಬೇಕಾಗಿದೆ.
ಕಲಘಟಗಿ ಸೋಂಕಿತರ ಲೆಕ್ಕಾಚಾರ : 62 ಸೋಂಕಿತರಲ್ಲಿ ಗಳಗಿಹುಲಕೊಪ್ಪದ 60 ವರ್ಷದ ಪುರುಷ ಹಾಗೂ ಬಿ.ಹುಲಿಕಟ್ಟಿ ಗ್ರಾಮದ 49 ವರ್ಷದ ಮಹಿಳೆ ಈವರೆಗೆ ಮೃತಪಟ್ಟಿದ್ದಾರೆ. ಅಲ್ಲದೇ ಸೋಂಕಿತರಲ್ಲಿ ಈರ್ವರು ಹೊರ ಜಿಲ್ಲೆಯವರು ಹಾಗೂ ನಾಲ್ವರು ಹೊರ ತಾಲೂಕಿನವರಾಗಿದ್ದಾರೆ. ಈವರೆಗೆ 33 ಸೋಂಕಿತರು ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ. 21 ಜನ ಸಕ್ರಿಯ ಸೋಂಕಿತರಿದ್ದು, ಅವರಲ್ಲಿ 15 ಜನರನ್ನು ಕೇರ್ ಸೆಂಟರ್‌ನಲ್ಲಿ ಇರಿಸಲಾಗಿದೆ. ನಾಲ್ವರು ಸೋಂಕಿತರಿಗೆ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಹಾಗೂ ಈರ್ವರಿಗೆ ಕ್ಯಾನ್ಸರ್ ಆಸ್ಪತ್ರೆಯಲ್ಲಿನ ಕೋವಿಡ್ -19 ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ತಾಲೂಕಾಸ್ಪತ್ರೆಯಲ್ಲಿ ಇದುವರೆಗೂ ಕೋವಿಡ್-19ರ ಸ್ವಾ ಬ್ ಕಲೆಕ್ಷನ್ ಮಾಡಲಾಗುತ್ತಿತ್ತು. ಶುಕ್ರವಾರದಂದು ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಕೂಡಾ ಆರಂಭಿಸಲಾಗಿದ್ದು, ಪ್ರಥಮ ದಿನದಂದು ಐವರ ಟೆಸ್ಟ್ ಮಾಡಲಾಗಿದೆ. ಅದರಲ್ಲಿ ನಾಲ್ವರ ರಿಪೋರ್ಟ್ ನೆಗೆಟಿವ್ ಬಂದಿದೆ. ಆದರೆ ಓರ್ವ ವ್ಯಕ್ತಿಯ ರಿಪೋರ್ಟ್ ಪಾಸಿಟಿವ್ ಬಂದಿದ್ದು, ಸೋಂಕಿತ ವ್ಯಕ್ತಿಯನ್ನು ತಕ್ಷಣ ಅಂಚಟಗೇರಿಯಲ್ಲಿರುವ ಕೋವಿಡ್ ಕೇರ್ ಸೆಂಟರ್‌ಗೆ ಕಳುಹಿಸಲಾಗಿದೆ.
– ಡಾ| ಬಸವರಾಜ ಬಾಸೂರ, ವೈದ್ಯಾಧಿಕಾರಿ