Advertisement

ಹೆಬ್ರಿ ತಾ|ಗೆ ಕೋವಿಡ್‌ ತುರ್ತು ಚಿಕಿತ್ಸಾ ಕೇಂದ್ರ ಅವಶ್ಯ

02:14 AM Apr 27, 2021 | Team Udayavani |

ಹೆಬ್ರಿ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಹಿನ್ನೆಲೆಯಲ್ಲಿ ತಾಲೂಕು ಕೇಂದ್ರವಾದ ಹೆಬ್ರಿಗೆ ಇದೀಗ ಕೋವಿಡ್‌ ಚಿಕಿತ್ಸಾ ಕೇಂದ್ರ ತೀರಾ ಅಗತ್ಯವಿದೆ.

Advertisement

ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈಗಾಗಲೇ ಆಕ್ಸಿಜನ್‌ ನೊಂದಿಗೆ 18 ಬೆಡ್‌ಗಳ ವ್ಯವಸ್ಥೆಯಿದ್ದು ಕೋವಿಡ್‌ ಚಿಕಿತ್ಸೆಗೆ ಬಳಸಿದಲ್ಲಿ ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಸರಕಾರ ಹಾಗೂ ಇಲಾಖೆ ಈ ಬಗ್ಗೆ ಗಮನಹರಿಸಿ ಅಗತ್ಯ ಸೌಲಭ್ಯಗಳನ್ನು ಪೂರೈಸಿದಲ್ಲಿ ಹೆಬ್ರಿ ತಾಲೂಕಿನ ಗ್ರಾಮೀಣ ಪರಿಸರದವರಿಗೆ ಅನುಕೂಲವಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ. ಈ ಬಗ್ಗೆ ಎರಡು ದಿನ ಹಿಂದೆ ನಡೆದ ತಾಲೂಕು ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಕೂಡ ಚರ್ಚೆ ನಡೆದಿತ್ತು.

ಚಿಕಿತ್ಸೆಗಾಗಿ ಪರದಾಟ
ಹೆಬ್ರಿ ತಾಲೂಕಿನ ತೀರಾ ಗ್ರಾಮೀಣ ಪ್ರದೇಶಗಳಲ್ಲೂ ಕೊರೊನಾ ಭೀತಿ ಎದುರಾಗಿದ್ದು ತುರ್ತು ಚಿಕಿತ್ಸೆಗಾಗಿ ದೂರದ ಉಡುಪಿ ಅಥವಾ ಕಾರ್ಕಳ ವನ್ನು ಅವಲಂಭಿಸಬೇಕಾಗಿದೆ. ನಾಡಾ³ಲು, ಕಬ್ಬಿನಾಲೆ ಮೇಗದ್ದೆ ತೀರಾ ಗ್ರಾಮೀಣ ಪ್ರದೇಶವಾಗಿದ್ದು ಸರಿಯಾದ ರಸ್ತೆ ಹಾಗೂ ಬಸ್ಸಿನ ವ್ಯವಸ್ಥೆ ಇಲ್ಲ ಹಾಗೂ ತುರ್ತು ಸಂಪರ್ಕಕ್ಕಾಗಿ ದೂರವಾಣಿ ಕೂಡ ಸಿಗುತ್ತಿಲ್ಲ. ಈಗಾಗಲೇ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಪರದಾಡಿದ ಪರಿಸ್ಥಿತಿ ಇದೆ. ಅದರಲ್ಲೂ ಈಗ ಕೊರೊನಾ ಮಹಾಮಾರಿ ಗ್ರಾಮೀಣ ಪ್ರದೇಶದಲ್ಲೂ ಹರಡಿದ್ದು ಈ ಭಾಗದ ಜನರು ಕೊರೊನಾದ ಚಿಕಿತ್ಸೆಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಬಹುದು.

ಲಸಿಕೆ ನೀಡಿಕೆ ಪ್ರಮಾಣ ಹೆಚ್ಚಲಿ
ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈಗಾಗಲೇ ಕೊರೊನಾ ಲಸಿಕೆ ನೀಡಲಾಗುತ್ತಿದ್ದು ಇದರ ನೀಡಿಕೆ ಪ್ರಮಾಣ ಹೆಚ್ಚಲಿ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಒಂದು ಡೋಸ್‌ ಪಡೆದವರು ಎರಡನೇ ಡೋಸ್‌ಗೆ ಬರುವಾಗ ಕೆಲವೊಮ್ಮೆ ಇಲ್ಲ ಎನ್ನಲಾಗುತ್ತಿದ್ದು ಸರಕಾರ ಈ ಬಗ್ಗೆ ಗಮನಹರಿಸಿ ಬಂದ ಜನರು ವಾಪಸ್‌ ಹೋಗದಂತೆ ಕ್ರಮ ವಹಿಸಬೇಕಾಗಿದೆ.

ಸಿಬಂದಿ ಅಗತ್ಯ
ಲಸಿಕೆ ನೀಡುವ ಸಂದರ್ಭದಲ್ಲಿ ಆಸ್ಪತ್ರೆ ಸಿಬಂದಿಯ ಹೆಚ್ಚಳ ತೀರ ಅಗತ್ಯವಾಗಿದೆ. ದಿನಂಪ್ರತಿ ಬರುವ ರೋಗಿಗಳ ಜತೆ ಲಸಿಕೆ ಪಡೆಯಲು ಹಾಗೂ ಕೊರೊನಾ ತಪಾಸಣೆಗೆ ಜನರು ಬರುತ್ತಿದ್ದು ಈಗಾಗಲೇ ಇಲ್ಲಿ ಇರುವ ಸಿಬಂದಿಗಳೇ ಈ ಕಾರ್ಯನಿರ್ವಹಿಸಬೇಕಾಗಿದ್ದು ರೋಗಿ ಗಳು ಗಂಟೆಕಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಕೋವಿಡ್‌ ಚಿಕಿತ್ಸೆ ಆರಂಭಿಸಿದರೆ ಮತ್ತೆ ಪುನಃ ಸಿಬಂದಿ ಸಮಸ್ಯೆ ಹೆಚ್ಚಾಗಲಿದ್ದು ಈ ಬಗ್ಗೆ ಇಲಾಖೆ ಗಮನಹರಿಸಬೇಕಿದೆ.

Advertisement

18 ಬೆಡ್‌ಗಳು ಲಭ್ಯ
ಈಗಾಗಲೇ ಕೋವಿಡ್‌ ಲಸಿಕೆ ಹಾಗೂ ಕೊರೊನಾ ತಪಾಸಣೆ ನಡೆಸಲಾಗುತ್ತಿದ್ದು ಕೊರೊನಾ ಸಮಸ್ಯೆ ಇರುವ ಸ್ಥಳಗಳಿಗೆ ತೆರಳಿ ತಪಾಸಣೆ ನಡೆಸಲಾಗುತ್ತಿದೆ. ಆಸ್ಪತ್ರೆಯಲ್ಲಿ ಈಗಾಗಲೇ 18 ಬೆಡ್‌ಗಳು ಆಕ್ಸಿಜನ್‌ ಸಂಪರ್ಕದೊಂದಿಗೆ ಲಭ್ಯವಿವೆ. ಅದಕ್ಕೆ ಬೇಕಾದ ಸಿಲಿಂಡರ್‌ ವ್ಯವಸ್ಥೆ ಹಾಗೂ ಸಿಬಂದಿ ಕಲ್ಪಿಸಿದಲ್ಲಿ ಕೋವಿಡ್‌ ಚಿಕಿತ್ಸೆಗೆ ಬಳಸಬಹುದಾಗಿದೆ.
– ಡಾ| ಸಂತೋಷ್‌ಕುಮಾರ್‌, ವೈದ್ಯಾಧಿಕಾರಿ, ಸಮುದಾಯ ಆರೋಗ್ಯ ಕೇಂದ್ರ, ಹೆಬ್ರಿ

ಶೀಘ್ರ ಕೋವಿಡ್‌ ಚಿಕಿತ್ಸಾ ಕೇಂದ್ರ ನಿರ್ಮಾಣಕ್ಕೆ ಪ್ರಯತ್ನ
ತೀರಾ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುವಂತೆ ಹೆಬ್ರಿಯಲ್ಲಿ ಕೋವಿಡ್‌ ಚಿಕಿತ್ಸಾ ಕೇಂದ್ರದ ಅವಶ್ಯಕತೆ ಬಗ್ಗೆ ಗಮನಕ್ಕೆ ಬಂದಿದೆ . ಈ ಬಗ್ಗೆ ಕಾರ್ಕಳ ಶಾಸಕರಲ್ಲಿ ಮಾತನಾಡಿ ಶೀಘ್ರ ಕೋವಿಡ್‌ ಚಿಕಿತ್ಸಾ ಕೇಂದ್ರ ನಿರ್ಮಾಣ ಮಾಡುವಲ್ಲಿ ಪ್ರಯತ್ನಿಸಲಾಗುವುದು.
-ಜ್ಯೋತಿ ಹರೀಶ್‌, ಜಿ.ಪಂ. ಸದಸ್ಯೆ, ಹೆಬ್ರಿ ಕ್ಷೇತ್ರ

– ಉದಯ ಕುಮಾರ್ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next