ಕೆನಡಾದಲ್ಲಿ ಹಿಂದೂ ಧರ್ಮೀಯರ ವಲಸೆಗೆ ಸುಮಾರು 110 ವರ್ಷಗಳಷ್ಟು ಇತಿಹಾಸವಿದೆ ಎನ್ನುತ್ತವೆ ದಾಖಲೆಗಳು. ಆರಂಭದಲ್ಲಿ ಭಾರತದ ಗುಜರಾತ್ ಮತ್ತು ಪಂಜಾಬ್ ಪ್ರಾಂತ್ಯಗಳಿಂದ ಹಿಂದೂಗಳು ಆಗಮಿಸಿದರು. ಆಮೇಲೆ ಬ್ರಿಟಿಷರ ಆಳ್ವಿಕೆಯಲ್ಲಿದ್ದ ದೇಶಗಳಿಂದಲೂ ಹಿಂದೂ ಧರ್ಮಾನುಯಾಯಿಗಳ ಆಗಮನವಾಗತೊಡಗಿತು. 1980 ರ ದಶಕದಿಂದೀಚೆಗೆ ಶ್ರೀಲಂಕಾದಲ್ಲಿ ಆದ ರಾಜಕೀಯ ಬೆಳವಣಿಗೆಗಳಿಂದಾಗಿ ಬಹಳಷ್ಟು ಹಿಂದೂಗಳು ಶ್ರೀಲಂಕಾವನ್ನು ತೊರೆದು ವಿದೇಶಗಳಿಗೆ ನಿರಾಶ್ರಿತರಾಗಿ ಬರತೊಡಗಿದಾಗ ಕೆನಡಾ ದೇಶವು ಅವರಿಗೆ ಆದರದ ಸ್ವಾಗತ ಮತ್ತು ಆಶ್ರಯವನ್ನು ಕೊಟ್ಟಿತು.
ಹೀಗಾಗಿ ಇಂದು ಕೆನಡಾದಲ್ಲಿ ಕಾಣುವ ಅತೀ ಹೆಚ್ಚು ಸಂಖ್ಯೆಯ ಹಿಂದೂಗಳೆಂದರೆ ಮೂಲತಃ ಶ್ರೀಲಂಕಾದಿಂದ ವಲಸೆ ಬಂದಿರುವವರೇ ಆಗಿದ್ದಾರೆ. ಬ್ರಿಟಿಷ್ ವಸಾಹತು ದೇಶಗಳಿಂದ ಬಂದ ಹಿಂದೂಗಳಲ್ಲಿ ಭಾರತೀಯರೂ ಸೇರಿರುವರು. ಹಾಗೆ ವಲಸೆ ಬಂದ ಹಿಂದೂಗಳು ಕೆನಡಾದ ಅನೇಕ ಪ್ರಾಂತ್ಯಗಳಲ್ಲಿ ಗುಡಿ ಗೋಪುರಗಳನ್ನು ಕಟ್ಟಿ ಹಿಂದೂ ಸಂಸ್ಕೃತಿಯನ್ನು ಬೆಳೆಸುತ್ತಿದ್ದಾರೆ. ಕೆನಡಾದಲ್ಲೂ ಹಿಂದೂಗಳ ಪಾಲಿಗೆ ಮಹಾ ಶಿವರಾತ್ರಿ ಎಂಬದು ಒಂದು ಪವಿತ್ರ ದಿನವಾಗಿ ಆಚರಿಸಲ್ಪಡುತ್ತಿದೆ.
ಟೊರೊಂಟೊದಲ್ಲಿ ಕನ್ನಡಿಗರಿಂದ ಶಿವರಾತ್ರಿ ಆಚರಣೆ :
ಟೊರೊಂಟೊ ಮತ್ತು ಸುತ್ತಮುತ್ತಲಿನ ಕನ್ನಡಿಗರು ಮುಖ್ಯವಾಗಿ ಸೇರುವ ಒಂದು ಹಿಂದೂ ದೇಗುಲವೆಂದರೆ ಅದು ಬ್ರೈಡನ್ ರಸ್ತೆಯಲ್ಲಿರುವ ಶೃಂಗೇರಿ ಶಾರದಾಂಬಾ ದೇವಸ್ಥಾನ. ಪ್ರತೀ ವರ್ಷವೂ ಇಲ್ಲಿ ಶಿವರಾತ್ರಿಯನ್ನು ಬಹಳ ಶಾಸ್ತ್ರೋಕ್ತವಾಗಿ ದೇಗುಲದ ಮುಖ್ಯ ಅರ್ಚಕರಾದ ರಾಮಕೃಷ್ಣ ಭಟ್ ಅವರ ನೇತೃತ್ವದಲ್ಲಿ ನಡೆಸಲಾಗುತ್ತದೆ.
ಈ ಬಾರಿ ಮಾರ್ಚ್ 11 ರಂದು ಸಂಜೆ ಸುಮಾರು 5 ಗಂಟೆಗೆ ಲಲಿತಾ ಸಹಸ್ರನಾಮದೊಂದಿಗೆ ಶಿವರಾತ್ರಿಯ ಆಚರಣೆ ಆರಂಭಗೊಳ್ಳುತ್ತದೆ. ಮೊದಲಿಗೆ ಮಹಾನ್ಯಾಸ ಪೂರ್ವಕ ಏಕದಶಾ ರುದ್ರಾಭಿಷೇಕ ಹಾಗೂ ನೂರೆಂಟು ಶಂಖಾಭಿಷೇಕ ನಡೆಯುವುದು. ರಾತ್ರಿ ಸುಮಾರು 10 ಗಂಟೆಗೆ ಆರಂಭವಾಗುವ ದ್ವಿತೀಯ ಯಾಮದಲ್ಲಿ ಏಕಾವರ ರುದ್ರಾಭಿಷೇಕ ಹಾಗೂ ಚಂದನಾಭಿಷೇಕ ನಡೆಯುವುದು. ಬೆಳಗ್ಗೆ ಸುಮಾರು 2 ಗಂಟೆಗೆ ತೃತೀಯ ಕಾಲದಲ್ಲಿ ರುದ್ರ ಕ್ರಮಾರ್ಚನೆ ಹಾಗೂ ಬಿಲ್ವಾರ್ಚನೆ ನಡೆಯುವುದು. ಬೆಳಗ್ಗೆ ಸುಮಾರು 5 ಗಂಟೆಗೆ ನಡೆಯಲಿರುವ ನಾಲ್ಕನೇ ಯಾಮದಲ್ಲಿ ರುದ್ರಾಭಿಷೇಕ ಮತ್ತು ಮಂಗಳ ದ್ರವ್ಯಾಭಿಷೇಕವು ನಡೆಯುವುದು.
ರಾತ್ರಿ ಮಕ್ಕಳನ್ನೂ ಒಳಗೂಡಿ ಶಿವಸೋತ್ರ ಪಾರಾಯಣ, ಭಜನೆ ಮತ್ತು ಭಕ್ತಿಗೀತೆಗಳ ಕಾರ್ಯಕ್ರಮಗಳೂ ಇರುತ್ತವೆ. ಶಿವರಾತ್ರಿಯ ಜಾಗರಣೆಯೂ ನಡೆಯುತ್ತಿದ್ದವು. ಆದರೆ ಈ ಬಾರಿ ಕೋವಿಡ್ ನಿರ್ಬಂಧಗಳಿಂದಾಗಿ ಮಾರ್ಚ್ 11 ರಂದು ಅನೇಕ ಜನ ಒಂದೇ ಹೊತ್ತಿಗೆ ದೇವಸ್ಥಾನ ಪ್ರವೇಶ ಮಾಡುವಂತಿಲ್ಲ. ಒಂದು ಬಾರಿಗೆ ಕೇವಲ 10 ಜನರು ಮಾತ್ರ ದೇವಸ್ಥಾನದ ಒಳಗೆ ಪ್ರವೇಶ ಮಾಡಬಹುದಾಗಿದೆ. ಶಾಸ್ತ್ರೋಕ್ತವಾದ ಆಚರಣೆಗಳು ಮಾತ್ರ ಎಂದಿನಂತೆ ನಡೆಯಲಿವೆ.
ಟೊರೊಂಟೊದಲ್ಲಿರುವ ಕನ್ನಡಿಗರ ಇನ್ನೊಂದು ಧಾರ್ಮಿಕ ಸ್ಥಳವೆಂದರೆ ಅದು ಇಸ್ಲಿಂಗ್ಟನ್ ರಸ್ತೆಯಲ್ಲಿರುವ ಶ್ರೀ ಕೃಷ್ಣ ಬೃಂದಾವನ. ಇಲ್ಲಿ ಈ ಬಾರಿ ಕೋವಿಡ್ ನಿರ್ಬಂಧಗಳಿಂದಾಗಿ ಜನರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಅರ್ಚಕರಾದ ಪ್ರದೀಪ್ ಕಲ್ಕೂರ ಅವರು ಶಿವಪೂಜೆಯನ್ನು ನಡೆಸಲಿರುವರು. ಒಟ್ಟಿನಲ್ಲಿ ಕೋವಿಡ್ ಜಾಗೃತಿಯ ಮಧ್ಯೆಯೂ ಕನ್ನಡಿಗರಿಂದ ಶಿವರಾತ್ರಿಯ ಆಚರಣೆಯು ವ್ಯವಸ್ಥಿತವಾಗಿ ನಡೆಸುವ ಸಿದ್ಧತೆ ಆರಂಭಗೊಂಡಿದೆ.
ವೀರಶೈವ ಸಮಾಜದಿಂದ ವಿಶೇಷ ಕಾರ್ಯಕ್ರಮ :
ಪ್ರತಿವರ್ಷವೂ ಟೊರೊಂಟೋದಲ್ಲಿರುವ ವೀರಶೈವ ಸಮಾಜದವರೆಲ್ಲರೂ ಒಂದುಗೂಡಿ ಶಿವರಾತ್ರಿಯನ್ನು ಬಹಳ ಭಕ್ತಿಯಿಂದ ನಡೆಸುತ್ತಾ ಬಂದಿರುತ್ತಾರೆ. ಸಾಮಾನ್ಯವಾಗಿ ಆಯ್ದ ಹಿಂದೂ ದೇವಸ್ಥಾನದಲ್ಲಿ ಆಚರಣೆ ಇರುತ್ತದೆ. ಈ ಬಾರಿ ಕೋವಿಡ್ ದಿಂದಾಗಿ ವೀರಶೈವ ಸಮಾಜದ ಅಧ್ಯಕ್ಷರಾದ ಕಿರಣ್ ಶಿವಪ್ಪ ಗೌಡ ಅವರ ನಿವಾಸದಲ್ಲಿ ಮಾ. 14ರಂದು ಮಧ್ಯಾಹ್ನ 2 ರಿಂದ ಸಂಜೆ 5 ರ ತನಕ ಶಿವಪೂಜೆ ನಡೆಯಲಿದೆ. ಶೃಂಗೇರಿ ದೇವಸ್ಥಾನದ ಅರ್ಚಕರಾದ ಶ್ರೀಕಾಂತ್ ಆಚಾರ್ಯ ಅವರು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಡಲಿದ್ದಾರೆ. ವೀರಶೈವ ಸಮಾಜದ ಆಚರಣೆಯ ಪ್ರಕಾರ, ಶಿವಲಿಂಗಾಭಿಷೇಕ, ಲಿಂಗ ಪೂಜೆ, ಲಿಂಗ ಧಾರಣೆ, ಮಕ್ಕಳಿಗೆ ಲಿಂಗ ಪೂಜೆ ನಡೆಸುವ ಕುರಿತು ತಿಳಿವಳಿಕೆ ನೀಡುವುದು ಈ ಸಂದರ್ಭದಲ್ಲಿ ನಡೆಯುತ್ತದೆ. ಮಕ್ಕಳಿಗಾಗಿ ಶಿವಕಥೆ, ವಚನ ಗಾಯನ ಮತ್ತು ಭಕ್ತಿ ಗೀತೆಗಳ ಕಾರ್ಯಕ್ರಮಗಳು ಸಹ ನಡೆಯಲಿವೆ. ಇದರೊಂದಿಗೆ ಪ್ರವೀಣ್ ಶಿವಶಂಕರ್ ಅವರಿಂದ ವಿಶೇಷ ಉಪನ್ಯಾಸವನ್ನೂ ಏರ್ಪಡಿಸಲಾಗಿದೆ. ಈ ಎಲ್ಲ ಕಾರ್ಯಕ್ರಮಗಳು Zoom Online ಮುಖಾಂತರ ನಡೆಯಲಿರುವುದು.
-ಸುಬ್ರಹ್ಮಣ್ಯ ಶಿಶಿಲ, ಟೊರೊಂಟೊ