ಹೊಸಪೇಟೆ: ಹಿಂದೂ-ಮುಸ್ಲಿಂ ಭಾವೈಕ್ಯತೆ ಪ್ರತೀಕ ಮೊಹರಂ ಹಬ್ಬ ಅದ್ಧೂರಿ ಆಚರಣೆಗೆ ಕೋವಿಡ್ ಅಡ್ಡಿಯಾಗಿದ್ದು ಪ್ರತಿವರ್ಷ ದೇವರನ್ನು ಸ್ಪರ್ಶಿಸಿ ದರ್ಶನ ಮಾಡುತ್ತಿದ್ದು ಭಕ್ತರು, ಈ ಬಾರಿ ದೂರದಿಂದಲೇ ದರ್ಶನ ಮಾಡುವಂತ ಪರಿಸ್ಥಿತಿ ಎದುರಾಗಿದೆ.
ನಗರದ ರಾಮಾಲಿ ಸ್ವಾಮಿ ಮಸೀದಿಯಲ್ಲಿ ಪೀರಲು ದೇವರನ್ನು ಆ.27 ರಂದು ಪ್ರತಿಷ್ಠಾಪನೆ ಮಾಡಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಸರಳ ಆಚರಣೆಗೆ ಅವಕಾಶ ನೀಡಿದೆ. ಮಸೀದಿ ಒಳಗೆ ಭಕ್ತರ ಪ್ರವೇಶವನ್ನು ನಿಷೇಧಿಸಿದ್ದು ದೂರದಿಂದಲೇ ಭಕ್ತರು ದರ್ಶನ ಪಡೆಯುತ್ತಿದ್ದಾರೆ. ಸಕ್ಕರೆ, ಬೆಲ್ಲದಾಲ್, ಚವಾಂಗಿ ಹಾಗೂ ಮೊಸರನ್ನ ನೈವೇದ್ಯ ಅರ್ಪಣೆ ಮಾಡಿ, ಹರಿಕೆ ತೀರಿಸುವ ಭಾಗ್ಯ ಈ ಬಾರಿ ಭಕ್ತರಿಗೆ ಇಲ್ಲದಾಗಿದೆ. ಅಲ್ಲದೆ, ತೆರೆದ ಗುಂಡಿಯಲ್ಲಿ ಹಾಕಿದ ಟನ್‌ಗಟ್ಟಲೇ ಮರದ ಕಟ್ಟಿಗೆಯ ಸುಡುವ ಬೆಂಕಿಯಲ್ಲಿ ಭಕ್ತರು ನಡೆದಾಡಿ ತೀರಿಸುವ ಹರಿಕೆಗೂ ಈ ಬಾರಿ ಕೋವಿಡ್ ಸಂಚಕಾರ ತಂದಿದೆ. ಹಳದಿ ಬಣ್ಣದ ವೇಷಧಾರಿ, ಅಚ್ಚೊಳ್ಳಿ ವೇಷಧರಿಸಿ ಹರಿಕೆ ತೀರಿಸುವ ಭಕ್ತರಿಗೂ ಆಸೆಗೂ ತಣ್ಣೀರೆಚಿದಂತಾಗಿದೆ.
ಹಲಗೆವಾದ್ಯ ಜಯಘೋಷದೊಂದಿಗೆ ಮಕ್ಕಳು, ಯುವಕರು, ವೃದ್ಧರು ಎಂಬ ಬೇಧವಿಲ್ಲದೇ ಕುಣಿದು ಕುಪ್ಪಳಿಸುತ್ತಿದ್ದ ಭಕ್ತರು, ಸದ್ದಿಲ್ಲದೇ ಮಸೀದಿಗೆ ಬಂದು ದೂರದಿಂದಲೇ ದರ್ಶನ ಪಡೆಯುತ್ತಿದ್ದಾರೆ. ಇಲ್ಲಿನ ದೇವರು, ಚಿತ್ತವಾಡ್ಗಿಯ ದೊಡ್ಡ ರಾಮಾಲಿ ಮಸೀದಿವರೆಗೆ ನಡೆಸುವ ಮೆರವಣಿಗೆಯನ್ನು ಕೂಡ ಸ್ಥಗಿತಗೊಳಿಸಿರುವುದು ಹಬ್ಬದ ಸಂಭ್ರಮಕ್ಕೆ ಧಕ್ಕೆಯಾಗಿದೆ.
ಮಸೀದಿಯಲ್ಲಿ ಭರಮಪ್ಪ: ರಾಮಾಲಿ ಮಸೀದಿಯಲ್ಲಿ ಪೀರಾಲ ದೇವರೊಂದಿಗೆ ಭರಮಪ್ಪ ದೇವರನ್ನು ನಿತ್ಯ ಪೂಜೆ ಸಲ್ಲಿಸಲಾಗುತ್ತದೆ. ಹಿಂದೂ-ಮುಸ್ಲಿಂ ಬಾಂಧವರು ಒಟ್ಟಾಗಿ ಬಂದು ಇಬ್ಬರು ದೇವರಿಗೆ ದೂರದಿಂದಲೇ ದರ್ಶನ ಪಡೆದು, ಹೂ-ಹಣ್ಣು, ಕಾಯಿ, ಕಾಣಿಕೆ ಅರ್ಪಿಸಿ ಭಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಆ. 28ರಂದು ಪೀರಾಲ ದೇವರ ಏಳು ಸವಾರಿ ನಡೆದಿದ್ದು, ಆ. 30 ಭಾನುವಾರ ಕತ್ತಲು ರಾತ್ರಿ, ಸೆ. 1ಮೊಹರಂ ಕೊನೆ ದಿನವಾದ ಸೋಮವಾರ ಪೀರಾಲ ದೇವರ ವಿಸರ್ಜನೆ (ಶಹದತ್ತ) ನಡೆಯಲಿದೆ. ನೂರಾರು ವರ್ಷಗಳ ಮೊಹರಂ ಅದ್ಧೂರಿ ಆಚರಣೆಗೆ ಮಹಾಮಾರಿ ಕೋವಿಡ್ ಅಡ್ಡಿಯಾಗಿರುವುದು ಭಕ್ತರ ಮನಸ್ಸಿಗೆ ನೋವುಂಟು ಮಾಡಿದೆ.
ಮಸೀದಿಯಲ್ಲಿ ಪೀರಾಲ ದೇವರನ್ನು ಆ.27 ರಂದು ಪ್ರತಿಷ್ಠಾಪನೆ ಮಾಡಿದ್ದು ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಸರಳ ಆಚರಣೆಗೆ ಅನುವು ನೀಡಿದೆ. ಮಸೀದಿ ಒಳಗೆ ಭಕ್ತರ ಪ್ರವೇಶವನ್ನು ನಿಷೇಧಿ ಸಲಾಗಿದೆ. ಹೀಗಾಗಿ ದೂರದಿಂದಲೇ ಭಕ್ತರು ದರ್ಶನ ಪಡೆಯುತ್ತಿದ್ದಾರೆ. ಆ. 28ರಂದು ಪೀರಾಲ ದೇವರ ಏಳು ಸವಾರಿ ನಡೆದಿದ್ದು, ಆ. 30 ಭಾನುವಾರ ಕತ್ತಲು ರಾತ್ರಿ ಇದೆ. ಸೆ. 1 ಮೊಹರಂ ಕೊನೆ ದಿನವಾದ ಸೋಮವಾರ ಪೀರಾಲ ದೇವರ ವಿಸರ್ಜನೆ (ಶಹದತ್ತ) ನಡೆಯಲಿದೆ.
-ರಾಭಾಷಾ, ಮಸೀದಿ ಅರ್ಚಕ
-ಪಿ.ಸತ್ಯನಾರಾಯಣ