ಚಿಕ್ಕಮಗಳೂರು: ಹಣ್ಣಿನ ರಾಜ ಎಂದೇ ಖ್ಯಾತಿ ಪಡೆದಿರುವ ಮಾವು ಮಾರುಕಟ್ಟೆಗೆ ಎಂಟ್ರಿಕೊಟ್ಟರು ಕೋವಿಡ್ ನಡುವೆ ಬೇಡಿಕೆ ಕುಸಿದಿದೆ. ಕೋವಿಡ್-19 ಸೋಂಕು ತಡೆಗಟ್ಟಲು ಲಾಕ್‌ಡೌನ್ ವಿಧಿಸಿದ್ದು, ಕೆಲಸವಿಲ್ಲದೇ ಕೈಯಲ್ಲಿ ದುಡ್ಡಿಲ್ಲದೆ ಜನರು ಕೊಳ್ಳುವ ಮನಸ್ಸಿದ್ದರು ಕೊಂಡುಕೊಳ್ಳಲು ಮುಂದಾಗುತ್ತಿಲ್ಲ.
ಜಿಲ್ಲೆಯ 2586 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತೇ. ತರೀಕೆರೆ, ಅಜ್ಜಂಪುರ ಹಾಗೂ ಕಡೂರು ತಾಲೂಕು ಭಾಗದಲ್ಲಿ ಹೆಚ್ಚಾಗಿ ಬೇಯುತ್ತಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಅಂಬಳೆ, ಲಖ್ಯಾ, ಕಸಬಾ ಹೋಬಳಿಯ 118 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ತರೀಕೆರೆ 1092 ಹೆಕ್ಟೇರ್, ಕಡೂರು ತಾಲೂಕಿನಲ್ಲಿ 343, ಎನ್.ಆರ್.ಪುರ 11 ಹೆಕ್ಟೇರ್, ಶೃಂಗೇರಿ ತಾಲೂಕಿನಲ್ಲಿ 2 ಹೆಕ್ಟೇರ್‌ನಲ್ಲಿ ಮಾವನ್ನು ಬೆಳೆಯಲಾಗುತ್ತಿದೆ.
ಜಿಲ್ಲೆಯಲ್ಲಿ ಕಳೆದ ವರ್ಷ 45,209 ಟನ್ ಮಾವು ಬೆಳೆ ದೊರೆತಿತ್ತು. ಚಿಕ್ಕಮಗಳೂರು 824 ಟನ್, ಕಡೂರು 5145 ಟನ್, ಕೊಪ್ಪ 300, ಎನ್.ಆರ್.ಪುರ 68, ಶೃಂಗೇರಿ 15 ಟನ್, ತರೀಕೆರೆಯಲ್ಲಿ 30,584 ಮತ್ತು ಅಜ್ಜಂಪುರ 28,273 ಟನ್ ಮಾವಿನಹಣ್ಣು ದೊರೆತಿತ್ತು. ರಸಪೂರಿ, ರಾಜರಸಪೂರಿ, ಸೆಂಧೂರ, ಬೈಗನ್‌ಪಲ್ಲಿ, ಮಲ್ಲಿಕಾ, ಕಲಾಪಹಾಡ್, ಬಾದಾಮಿ ಹಣ್ಣುಗಳು ಬೆಂಗಳೂರಿನ ಮಾಗಡಿ, ತುಮಕೂರು, ಆಂಧ್ರ, ರಾಮನಗರ, ಅರಸೀಕೆರೆ, ಬಾಣಾವರ, ತರೀಕೆರೆಯಿಂದ ನಗರದ ಡಾ|ಬಿ. ಆರ್.ಅಂಬೇಡ್ಕರ್ ರಸ್ತೆಯ ಎ.ಎಸ್.ಫ್ರೂಟ್ಸ್‌ಗೆ ಈಗಾಗಲೇ ಬಂದಿಳಿದಿವೆ ಎಂದು ಸಗಟು ವ್ಯಾಪಾರಿ ಏಜಾಜ್ ಅಹ್ಮದ್ ಮಾಹಿತಿ ನೀಡಿದರು.
ರಸಪುರಿ ಪ್ರತಿ ಕೆಜಿಗೆ 30 ರಿಂದ 40 ರೂ., ರಾಜರಸಪೂರಿ 40 ರಿಂದ 50 ರೂ., ಸೆಂಧೂರ 20ರಿಂದ30ರೂ., ಬೈಗನ್ ಪಲ್ಲಿ 30ರಿಂದ40 ರೂ., ಮಲ್ಲಿಕಾ 50 ರಿಂದ70 ರೂ., ಕಲಾಪಹಾತ್ 30ರಿಂದ45ರೂ., ಬಾದಾಮಿ 30ರಿಂದ55 ರೂ.ಗಳಿಗೆ ಸಗಟಾಗಿ ಮಾರಾಟ ಮಾಡಲಾಗುತ್ತಿದೆ. ಈ ಹಣ್ಣುಗಳನ್ನು ನಗರ ಸೇರಿದಂತೆ ಸಕಲೇಶಪುರ, ಮೂಡಿಗೆರೆ, ಕಡೂರು ಮತ್ತು ಬೇಲೂರಿಗೆ ಕಳುಹಿಸಿಕೊಡಲಾಗುತ್ತಿದೆ ಎಂದು ಹೇಳಿದರು.
ಕೋವಿಡ್ 19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಿಂದ ಹೊರ ಜಿಲ್ಲೆಗಳಿಗೆ ಹಣ್ಣು ಹೋಗದೆ ಇಲ್ಲೇ ಲಾಕ್ ಆಗಿರುವುದರಿಂದ ಮೂಸುಂಬೆ ಪ್ರತಿ ಕೆಜಿಗೆ 20 ರಿಂದ 30 ರೂ., ಕರಬೂಜ 12ರಿಂದ 16 ರೂ., ಉತ್ತಮ ಅನಾನಸ್‌ಗೆ 10 ರಿಂದ 15 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.
-ಸಂದೀಪ್. ಜಿ.ಎನ್. ಶೇಡ್ಗಾರ್