Advertisement

ಕಾರಹುಣ್ಣಿಮೆಗೆ ಕೋವಿಡ್ ಕಾರ್ಮೋಡ

12:34 PM Jun 03, 2020 | Suhan S |

ಬೀಳಗಿ: ಪ್ರತಿ ವರ್ಷ ಸಂಭ್ರಮ- ಸಡಗರದಿಂದ ಆಚರಿಸಲಾಗುತ್ತಿದ್ದ ಕಾರ ಹುಣ್ಣಿಮೆಗೆ ಈ ಬಾರಿ ಕೋವಿಡ್ ಕರಿನೆರಳು ಆವರಿಸಿದೆ. ಕೋವಿಡ್ ಹೊಡೆತಕ್ಕೆ ರೈತನ ಬದುಕು ಸಂಕಷ್ಟಕ್ಕೆ ಸಿಲುಕಿದ ಪರಿಣಾಮ, ರೈತನ ಮುಖದಲ್ಲಿ ಕಾರ ಹುಣ್ಣಿಮೆ ಸಡಗರ ಎದ್ದು ಕಾಣುತ್ತಿಲ್ಲ.

Advertisement

ಉತ್ತರ ಕರ್ನಾಟಕದ ಹರ್ಷದಾಯಕ ಹಬ್ಬ ಕಾರಹುಣ್ಣಿಮೆ. ಮುಂಗಾರು ಹೊತ್ತಿಗೆ ರೋಹಿಣಿ ಸಿಂಚನಗೈಯುವ ಖುಷಿ. ಮುಂಗಾರು ಕೃಷಿ ಚಟುವಟಿಕೆಗಳಿಗೆ ಅಣಿಯಾಗುವ ಹೊತ್ತು. ಇಂತಹ ಸಂದರ್ಭದ ಹೊಸ್ತಿಲಲ್ಲಿ ಅಗಮಿಸುವ ಕಾರ ಹುಣ್ಣಿಮೆ ರೈತನ ಪಾಲಿಗೆ ಸಡಗರ ತಂದುಕೊಡುವ ಹಬ್ಬ. ಕಾರಹುಣ್ಣಿಮೆ ಹಬ್ಬಕ್ಕೆ ರೈತನ ಜೀವನಾಡಿಯಾಗಿರುವ ಎತ್ತುಗಳ ಶೃಂಗಾರಕ್ಕಾಗಿ ಮಾರುಕಟ್ಟೆಯಲ್ಲಿ ತರಹೇವಾರಿ ಸಾಮಗ್ರಿಗಳ ಖರೀದಿ ಜೋರಾಗಿರುತ್ತದೆ. ಆದರೆ, ಈ ಬಾರಿ ಎತ್ತುಗಳ ಶೃಂಗಾರ ಸಾಮಗ್ರಿಗಳ ವ್ಯಾಪಾರ ಕಳೆಗುಂದಿದೆ. ಹೀಗಾಗಿ ಅನ್ನದಾತ ತನ್ನ ಕೈಯಿಂದ ಸಾಧ್ಯವಾದಷ್ಟು ಹಣೆಗೊಂಡೆ, ಗೆಜ್ಜೆಸರ, ಲಡ್ಡು, ಹಣೆಕಟ್ಟು, ಹಗ್ಗ, ಮಗಡ, ಮೂಗುದಾರ ಹೀಗೆ ಹಲವು ಶೃಂಗಾರ ಸಾಮಗ್ರಿಗಳನ್ನು ಖರೀದಿಸುತ್ತಿರುವುದು ಕಂಡುಬಂದಿತು. ಏನು ಮಾಡೋದ್ರಿ.. ಕೋವಿಡ್ ಬಂದು ಚಂದಿಲ್ರೀ ಬಾಳೆ… ಬೆಳಿ ಬೆಳೆದೇವು ಬೆಲೆಯಿಲ್ಲ. ಕಷ್ಟದಾಗ ಕೈ ತೊಳಿಯೋದಾಗೈತಿ. ಹಂಗಂತ್‌ ನಾವು ನಂಬಿದ ಬಸವಣ್ಣನ (ಎತ್ತುಗಳು) ಮರ್ಯಾಕೂ ಆಗುದಿಲ್ಲ ಎನ್ನುತ್ತಾರೆ ರೈತರು.

ಎತ್ತಿನ ಮೈ ತೊಳೆದು, ಅದರ ಮೈಮೇಲೆ ಬಣ್ಣದ ಚಿತ್ತಾರವಿಟ್ಟು, ಕೊಂಬಿಗೆ ಕೊಮ್ಮನಸು, ರಿಬ್ಬನ್‌, ಗೆಜ್ಜೆ ಸರ ಕಟ್ಟಿ, ಹೊಸಗೊಂಡೆ, ಲಡ್ಡು, ಹಗ್ಗಗಳಿಂದ ಶೃಂಗರಿಸುವ ಮೂಲಕ ಎತ್ತುಗಳ ಓಟದ ಸ್ಪರ್ಧೆ ಖುಷಿ ಕಾಣುವ ಮತ್ತು ಕರಿ ಹರಿಯುವ ಸಂಭ್ರಮದೊಂದಿಗೆ ಮುಂಗಾರು-ಹಿಂಗಾರು ಫಸಲಿನ ಕುರಿತು ಕನಸು ಪೋಣಿಸುವ ರೈತನ ಸೊಬಗು ಈ ಬಾರಿ ಕೋವಿಡ್ ಕರಿ ಛಾಯೆಗೆ ಕಮರಿ ಹೋಗಿದೆ.

ಕಾರ ಹುಣ್ಣಿಮೆ ನಮ್ಮ ಪಾಲಿಗೆ ದೊಡ್ಡ ಹಬ್ಬ. ಕೈಲಾದಷ್ಟು ಮಾಡೋದ್ರಿ. ಹೊಲದಾಗಿನ ಬೆಳೆ ತಿನಬಾರದಂತ ಎತ್ತಿಗೆ ಬಾಯಿಚಿಕ್ಕ ಹಾಕುತ್ತಿದ್ದೇವ್ರಿ.. ಈಗ ಮನಷ್ಯಾರೆಲ್ಲ ಬಾಯಿಚಿಕ್ಕ (ಮಾಸ್ಕ್) ಕಟಗೊಂಡು ತಿರುಗುವಂಗ್‌ ಆಗೈತಿ. ಹಬ್ಬ ಅಷ್ಟೇನು ಹುರುಪ ಇಲ್ರೀ -ಸಂಗಪ್ಪ ಮಳಗಾಂವಿ, ರೈತ

 

Advertisement

ರವೀಂದ್ರ ಕಣವಿ

Advertisement

Udayavani is now on Telegram. Click here to join our channel and stay updated with the latest news.

Next