Advertisement

ವಿಘ್ನ ನಿವಾರಕನಿಗೂ ಕೋವಿಡ್‌ ಬಿಸಿ

04:38 PM Aug 22, 2020 | Suhan S |

ಕಲಬುರಗಿ: ಜಗತ್ತನೇ ವ್ಯಾಪಿಸಿರುವ ಕೋವಿಡ್ ಮಹಾಮಾರಿ ಸೋಂಕು ಈ ಪ್ರಸಕ್ತ ವರ್ಷದ ಎಲ್ಲ ಹಬ್ಬಗಳ ಸಂಭ್ರಮವನ್ನೇ ಕಸಿದುಕೊಂಡಿದೆ. ಇದರ ಸಾಲಿಗೆ ಈಗ ವಿಘ್ನ ನಿವಾರಕ ಗಣಪತಿ ಹಬ್ಬವೂ ಸಹ ಸೇರುತ್ತಿದ್ದು,  ಕಳೆದ ವರ್ಷದಂತಹ ಸಡಗರ ಎಲ್ಲೂ ಕಾಣುತ್ತಿಲ್ಲ.

Advertisement

ಪ್ರತಿ ವರ್ಷ ಗಣೇಶ ಚತುರ್ಥಿ ಇನ್ನೂ ತಿಂಗಳು, ಹದಿನೈದು ದಿನಗಳು ಇರುತ್ತಿರುವಾಗಲೇ ಭರದ ಸಿದ್ಧತೆಗಳು ಆರಂಭವಾಗುತ್ತಿದ್ದವು. ಪ್ರಮುಖ ರಸ್ತೆಗಳು, ಸಣ್ಣ ಗಲ್ಲಿಗಳಲ್ಲಿಗಣಪನ ಮೂರ್ತಿಗಳ ವಹಿವಾಟು ಜೋರಾಗಿ ನಡೆಯುತ್ತಿತ್ತು. ಯುವಕ ಮಂಡಳಿಯವರು ತಿಂಗಳ ಹಿಂದೆಯೇ ಮುಂಬೈ, ಪುಣೆ, ಹೈದ್ರಾಬಾದ್‌ಗೆ ಹೋಗಿ ತಮ್ಮ ಇಷ್ಟದಂತೆ ದೊಡ್ಡ-ದೊಡ್ಡ ಮೂರ್ತಿಗಳನ್ನು ತರೇಹವಾರಿ ಆಕಾರ, ಭಂಗಿ, ಬಣ್ಣಗಳಲ್ಲಿ ಹೇಳಿ ಮಾಡಿಸಿಕೊಂಡು ತರುತ್ತಿದ್ದರು. ಕೋವಿಡ್ ರಗಳೆಯಿಂದಾಗಿ ಸರ್ಕಾರ ಅಲೆದು-ತೂಗಿ ಕೊನೆ ಗಳಿಗೆಯಲ್ಲಿ ಗಣೇಶೋತ್ಸವಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದ್ದರಿಂದ ಇಡೀ ಹಬ್ಬದ ವಾತಾವರಣ ಮಸುಕು-ಮಸುಕಾಗಿದೆ. ಗಣೇಶ ಚತುರ್ಥಿಯ ಮುನ್ನವಾದ ಶುಕ್ರವಾರ ಸಹ ವಿನಾಯಕನ ಹಬ್ಬದ ಕಳೆ ಕಂಡು ಬರಲಿಲ್ಲ.

ಸಣ್ಣ ಗಜಮುಖನಿಗೆ ಬೇಡಿಕೆ: ಪ್ರತಿ ವರ್ಷ 8ರಿಂದ 20 ಅಡಿ ಎತ್ತರದ ವರ್ಣರಂಜಿತ ಆಕರ್ಷಣೀಯ ಗಣೇಶ ಮೂರ್ತಿಗಳು ತಯಾರಾಗುತ್ತಿದ್ದವು. ಈ ಬಾರಿ ದೊಡ್ಡ-ದೊಡ್ಡ ಗಾತ್ರ, ಎತ್ತರದ ಗಣಪತಿ ಮೂರ್ತಿಗಳ ತಯಾರಿಕೆಗೆ ಕಲಾವಿದರು ಮುಂದಾಗಿಲ್ಲ. ನಗರದ ಕೇಂದ್ರ ಬಸ್‌ ನಿಲ್ದಾಣ ರಸ್ತೆಯಲ್ಲಿರುವ ಐಟಿಐ ಕಾಲೇಜು ಮುಂಭಾಗ ಸೇರಿ ಹಲವು ಪ್ರಮುಖ ಸ್ಥಳದಲ್ಲಿ ಕಲಾವಿದರು ಮೂರ್ತಿಗಳನ್ನು ತಯಾರಿಸುತ್ತಿದ್ದರು. ಇಂತಹ ಪ್ರದೇಶದಲ್ಲೂ ಮೂರ್ತಿ ತಯಾರಿಕೆ ನಿಲ್ಲಿಸಲಾಗಿದೆ.

ನಗರದ ಹೀರಾಪುರ ಕ್ರಾಸ್‌ ಹತ್ತಿರದಲ್ಲಿ ರಾಜಸ್ಥಾನ ಮೂಲಕ ಕಲಾವಿದರು ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿದ್ದಾರೆ. ಸರ್ಕಾರ ಸಾರ್ವಜನಿಕ ಗಣೇಶಗಳ ಎತ್ತರ 4 ಅಡಿ ಹಾಗೂ ಮನೆಯಲ್ಲಿ ಕೂಡಿಸುವ ಮೂರ್ತಿಗಳ ಎತ್ತರ 2 ಅಡಿಗೆ ಮಿತಿ ವಿಧಿಸಿದೆ. ಹೀಗಾಗಿ ಕಲಾವಿದರು ಸಹ ಸಣ್ಣ ವಿಗ್ರಹಗಳನ್ನೇ ತಯಾರು ಮಾಡಿದ್ದಾರೆ. ಬಹುತೇಕ ಮೂರ್ತಿಗಳು 1 ರಿಂದ 4 ಅಡಿ ತಯಾರಿಸಲಾಗಿದೆ. ಜನರಿಂದಲೂ ಪುಟ್ಟ ಗಜಮುಖನಿಗೂ ಬೇಡಿಕೆ ಹೆಚ್ಚಿಸಿದೆ ಎಂದು ಕಲಾವಿದ ಮೋಹನ್‌ಲಾಲ್‌ ಹೇಳಿದರು.

ನಗರದ ಸೂಪರ್‌ ಮಾರ್ಕೆಟ್‌, ಕಿರಾಣ್‌ ಬಜಾರ್‌, ಹುಮನಾಬಾದ್‌ ಬೆಸ್‌, ಶರಣಬಸವೇಶ್ವರ ದೇವಸ್ಥಾನ ಮುಂಭಾಗ ಸೇರಿದಂತೆ ಹಲವೆಡೆ ಸಹ ಸಣ್ಣ ಮೂರ್ತಿಗಳೇ ಮಾರಾಟವಾಗಿವೆ. ಸಾರ್ವಜನಿಕ ಗಣೇಶ ಮಂಡಳಿಯವರು ಕೂಡ 2 ಅಡಿ, 3 ಅಡಿ ಎತ್ತರದ ಗಣೇಶ ಮೂರ್ತಿಗಳು ಖರೀದಿಸಿದ್ದು, ಭಕ್ತರು ಪುಟ್ಟ-ಪುಟ್ಟ ಗಣಪತಿ ಮೂರ್ತಿಗಳನ್ನು ಮನೆ ಸೇರಿಸಿಕೊಂಡಿದ್ದಾರೆ. ಸೂಪರ್‌ ಮಾರ್ಕೆಟ್‌ನಲ್ಲಿ ಗುರುವಾರ ಗಣೇಶ ಮೂರ್ತಿ ಜತೆಗೆ ಅಗತ್ಯ ಹಣ್ಣು- ಹಂಪಲು, ಹೂವು, ಪೂಜಾ ಸಾಮಗ್ರಿ ಖರೀದಿ ಜೋರಾಗಿ ನಡೆದಿತ್ತು.

Advertisement

ಗಣೇಶೋತ್ಸವ: ಮದ್ಯ ಮಾರಾಟ ನಿಷೇಧ :  ಗಣೇಶ ಚತುರ್ಥಿ ಆಚರಣೆ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ ನಿಟ್ಟನಲ್ಲಿ ಮೂತಿಗಳ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ದಿನಗಳಂದು ಜಿಲ್ಲಾದ್ಯಂತ ಮದ್ಯ ಹಾಗೂ ಮಾದಕ ವಸ್ತುಗಳ ಮಾರಾಟ ನಿಷೇಧಿ ಸಲಾಗಿದ್ದು, ಮದ್ಯದ ಅಂಗಡಿಗಳನ್ನು ಮುಚ್ಚಬೇಕೆಂದು ಜಿಲ್ಲಾಧಿಕಾರಿ

ಶರತ್‌ ಬಿ. ಆದೇಶ ಹೊರಡಿಸಿದ್ದಾರೆ. ಆ.22ರಂದು ಗಣೇಶ ಮೂರ್ತಿಗಳು ಪ್ರತಿಷ್ಠಾಪನೆ ನಡೆಯಲಿದೆ. ಆ.26ರಂದು 5 ದಿನದ ಗಣೇಶ ವಿಗ್ರಹ ವಿಸರ್ಜನೆ, ಆ.30ರಂದು 9 ದಿನ, ಸೆ.1ರಂದು 11 ದಿವಸಗಳ ಗಣೇಶ ಮೂತಿಗಳ ವಿಸರ್ಜನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಆ.22ರ ಬೆಳಗ್ಗೆ 6ರಿಂದ ಆ.23ರ ಬೆಳಗ್ಗೆ 6 ಗಂಟೆ, ಆ.26ರ ಬೆಳಿಗ್ಗೆ 6ರಿಂದ ಆ.27ರ ಬೆಳಿಗ್ಗೆ 6 ಗಂಟೆ, ಆ.30ರಂದು ಬೆಳಿಗ್ಗೆ 6ರಿಂದ ಆ.31ರ ಬೆಳಿಗ್ಗೆ 6 ಗಂಟೆ ಹಾಗೂ ಸೆ.1ರ ಬೆಳಿಗ್ಗೆ 6ರಿಂದ ಸೆ.2ರ ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಾಂಸ ಮಾರಾಟ ಇಲ್ಲ : ಗಣೇಶ ಚತುರ್ಥಿ ಹಬ್ಬ ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಆ.22ರಂದು ನಗರದಾದ್ಯಂತ ಯಾವುದೇ ರೀತಿಯ ಪ್ರಾಣಿ ವಧೆ ಅಥವಾ ಮಾಂಸ ಮಾರಾಟ ಮಾಡುವುದನ್ನು ನಿಷೇಧಿ ಸಿ ಮಹಾನಗರ ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ ಆದೇಶ ಹೊರಡಿಸಿದ್ದಾರೆ. ನಗರದಲ್ಲಿ ಮಾಂಸ ಮಾರಾಟ ಮಾಡುವ ಅಂಗಡಿಗಳ ಹಾಗೂ ಕಸಾಯಿಖಾನೆ ಮಾಲೀಕರು ಈ ಆದೇಶವನ್ನು ಕಟ್ಟುನಿಟ್ಟಾಗಿ ಪರಿಪಾಲಿಸುವಂತೆ ಸೂಚಿಸಿದ್ದಾರೆ. ತಪ್ಪಿದಲ್ಲಿ ಕೆಎಂಸಿ ಕಾಯ್ದೆ 1976ರ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next