Advertisement

ಆಸ್ಕರ್‌ ಪ್ರಶಸ್ತಿ ವಿತರಣೆಗೂ ಕೋವಿಡ್‌ ಗ್ರಹಣ

03:02 PM Jun 17, 2020 | mahesh |

ಲಾಸ್‌ಏಂಜಲೀಸ್‌: ಕೋವಿಡ್‌ ಸೋಂಕಿನಿಂದಾಗಿ ವಿಶ್ವದ ಪ್ರಮುಖ ಕಾರ್ಯಕ್ರಮಗಳೆಲ್ಲ ಮುಂದೂಡಲಾಗಿದ್ದರೆ, ಅದಕ್ಕೀಗ ಆಸ್ಕರ್‌ ಪ್ರಶಸ್ತಿ ವಿತರಣೆಯೂ ಸೇರಿದೆ. ಇತ್ತೀಚೆಗೆ ರಾಮನ್‌ ಮ್ಯಾಗ್ಸೆಸೆ ಪ್ರಶಸ್ತಿ ಘೋಷಣೆ, ವಿತರಣೆ ಮುಂದೂಡಿದ ಬೆನ್ನಲ್ಲೇ ಆಸ್ಕರ್‌ ಪ್ರಶಸ್ತಿ ವಿತರಣೆಯೂ ಮುಂದೂಡಿಕೆಯಾದ ಸುದ್ದಿ ಬಂದಿದೆ. 2021ನೇ ಸಾಲಿನ ಆಸ್ಕರ್‌ ಪ್ರಶಸ್ತಿ ವಿತರಣೆ ಫೆಬ್ರವರಿಯಲ್ಲಿ ನಡೆಯಬೇಕಿದ್ದು, ಅದನ್ನು ಎಪ್ರಿಲ್‌ ತಿಂಗಳಿಗೆ ಮುಂದೂಡಲಾಗಿದೆ. ಫೆ.28ರಂದು ನಡೆಯಬೇಕಿದ್ದ ಕಾರ್ಯಕ್ರಮ ಎ.25ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಆಸ್ಕರ್‌ ಅಕಾಡೆಮಿ ಹೇಳಿದೆ.

Advertisement

ವಿಶ್ವಾದ್ಯಂತ ಕೋವಿಡ್‌ನಿಂದಾಗಿ ಸಿನೆಮಾ ಪ್ರದರ್ಶನ, ಶೂಟಿಂಗ್‌ಗಳೂ ನಡೆಯುತ್ತಿಲ್ಲ. ಇದನ್ನು ಮನಗಂಡು ಆಸ್ಕರ್‌ಗೆ ಚಿತ್ರಗಳ ನಾಮ ನಿರ್ದೇಶನದಿನಾಂಕವನ್ನೂ ಮುಂದೂಡಲಾಗಿದೆ. ಈ ಮೊದಲು 2020 ಡಿ.31ರಂದು ನಾಮನಿರ್ದೇಶನಕ್ಕೆ ಕೊನೆಯ ದಿನವೆಂದು ಹೇಳಲಾಗಿತ್ತು. ಈಗ 2021 ಫೆ.28ರಂದು ಕೊನೆಯ ದಿನವೆಂದು ಪರಿಷ್ಕರಿಸಲಾಗಿದೆ. ಹಲವಾರು ಸಿನೆಮಾಗಳು 2021ರಂದು ಬಿಡುಗಡೆಗೆ ದಿನಾಂಕ ನಿಗದಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ಆಸ್ಕರ್‌ ಕೂಡ ದಿನಾಂಕವನ್ನು ಪರಿಷ್ಕರಿಸಿದೆ ಎಂದು ಹೇಳಲಾಗಿದೆ.

ಇನ್ನು ಆಸ್ಕರ್‌ ಪ್ರಶಸ್ತಿ ವಿತರಣೆಯ ದಿನಾಂಕವನ್ನು ಮುಂದೂಡಿದ್ದು ಇತಿಹಾಸದಲ್ಲೇ ಇದು ನಾಲ್ಕನೇ ಬಾರಿಯಾಗಿದೆ. 1938ರಲ್ಲಿ ಲಾಸ್‌ ಏಂಜಲೀಸ್‌ನಲ್ಲಿ ಪ್ರವಾಹ, 1968ರಲ್ಲಿ ಮಾರ್ಟಿನ್‌ ಲೂಥರ್‌ ಕಿಂಗ್‌ ಅವರ ಹತ್ಯೆ, 1981ರಲ್ಲಿ ಅಧ್ಯಕ್ಷ ರೊನಾಲ್ಡ್‌ ರೇಗನ್‌ ಹತ್ಯೆ ಯತ್ನದಿಂದಾಗಿ ಆಸ್ಕರ್‌ ಪ್ರಶಸ್ತಿ ವಿತರಣೆ ಮುಂದೂಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next