Advertisement

ಸ್ವಾತಂತ್ರ್ಯಹಬ್ಬಕ್ಕೂ ಸೋಂಕಿನ ಸವಾಲು; ಕೋವಿಡ್ ಲಕ್ಷಣವಿರುವ ಗಣ್ಯರಿಗೆ ಪ್ರವೇಶ ನಿಷಿದ್ಧ

04:11 PM Aug 14, 2020 | mahesh |

ಹೊಸದಿಲ್ಲಿ: ಕೆಂಪುಕೋಟೆಯಲ್ಲಿ ಆಗಸ್ಟ್‌ 15 ರಂದು ನೆರವೇರುವ 74ನೇ ಸ್ವಾತಂತ್ರ್ಯ ದಿನಾಚರಣೆಗೆ ಕೋವಿಡ್ ಲಕ್ಷಣವಿರುವ ಗಣ್ಯಾತಿಥಿಗಳು ಯಾವುದೇ ಕಾರಣಕ್ಕೂ ಆಗಮಿಸಬಾರದು ಎಂದು ದಿಲ್ಲಿ ಪೊಲೀಸ್‌ ಸಲಹೆ ನೀಡಿದೆ. ಈ ಸಂಬಂಧ ಕೊರೊನಾ ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಿದೆ.

Advertisement

“ಸ್ವಾತಂತ್ರ್ಯೋತ್ಸವಕ್ಕೆ 15 ದಿನಗಳ ಪೂರ್ವದಲ್ಲಿ ಯಾವುದೇ ಆಹ್ವಾನಿತರು ಕೋವಿಡ್ ಲಕ್ಷಣದ ಇತಿಹಾಸ ಹೊಂದಿದ್ದರೆ ಅಥವಾ ಇನ್ನೂ ಪರೀಕ್ಷೆ ಗೊಳಗಾಗದೆ ಇದ್ದರೆ, ಕೋವಿಡ್ ಪಾಸಿಟಿವ್‌ ದೃಢ ಪಟ್ಟಿದ್ದರೆ, ಅಂಥವರಿಗೆ ಪ್ರವೇಶ ನಿರಾಕರಿಸಬಹುದು’ ಎಂದು ಹೇಳಿದೆ.

4 ಸಾವಿರ ಪೊಲೀಸ್‌: ಗುರುವಾರ- ಶುಕ್ರವಾರ ಎರಡೂ ದಿನ ಕೆಂಪುಕೋಟೆ ಸುತ್ತ 4 ಸಾವಿರ ಪೊಲೀಸರು ಬಿಗಿಭದ್ರತೆ ಕೈಗೊಳ್ಳಲಿದ್ದಾರೆ. ಅಲ್ಲದೆ ಎನ್‌ಎಸ್‌ಜಿ ಸ್ನಿಫ‌ರ್ಸ್‌, ಎಸ್‌ಎವಿಟಿ ಕಮಾಂಡೊ ಕೂಡ ಭದ್ರತೆಯ ಭಾಗವಾಗಲಿದ್ದಾರೆ. ಪ್ರವೇಶ ದ್ವಾರದಲ್ಲಿ ಸಾಮಾಜಿಕ ಅಂತರದ ಕ್ಯೂ ಪಾಲಿಸಲು ಅಲ್ಲಲ್ಲಿ ಗುರುತುಗಳನ್ನು ಹಾಕಲಾಗುತ್ತದೆ. ನಿಯಂತ್ರಣ ಅಧಿಕಾರಿಗಳು ಜನಸಂದಣಿ ತಪ್ಪಿಸಲು ನಿಗಾವಹಿಸಲಿದ್ದಾರೆ.

ಸ್ವಾತಂತ್ರ್ಯೋತ್ಸವದಂದು ಕೇಂದ್ರ ಸಚಿವರು, ಹಿರಿಯ ರಾಜಕೀಯ ಮುಖಂಡರು, ವಿವಿಧ ಸಚಿ ವಾಲಯಗಳ ಉನ್ನತಾಧಿಕಾರಿಗಳು, ರಾಜತಾಂತ್ರಿ ಕರ ಉಪಸ್ಥಿತಿಯಿರಲಿದೆ. ಸಾರ್ವಜನಿಕರಿಗೂ ಸಮಾರಂಭ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ಸಂಚಾರ ನಿರ್ಬಂಧ: ಅಂದು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಭಾಷಣ ಹಿನ್ನೆಲೆಯಲ್ಲಿ ಕೆಂಪುಕೋಟೆ ಸುತ್ತಮುತ್ತ ವಾಹನ ಸಂಚಾರವನ್ನು ಬೆ.4ರಿಂದ ಬೆ.10ರವರೆಗೆ ನಿರ್ಬಂಧಿಸಲಾಗಿದೆ. ಅನುಮತಿ ಪಡೆದ, ಲೇಬಲ್‌ ಅಂಟಿಸಿಕೊಂಡ ವಾಹನಗಳಿಗೆ ಮಾತ್ರವೇ ಪ್ರವೇಶ ಕಲ್ಪಿಸಲು ನಿರ್ಧರಿಸಲಾಗಿದೆ.

Advertisement

ಈಶಾನ್ಯ ಉಗ್ರ ಸಂಘಟನೆಗಳಿಂದ ಬಹಿಷ್ಕಾರ
ಸ್ವಾತಂತ್ರ್ಯೋತ್ಸವಕ್ಕೂ ಮುನ್ನವೇ ಈಶಾನ್ಯ ರಾಜ್ಯಗಳ ಉಗ್ರಗಾಮಿ ಸಂಘಟನೆಗಳು ಬಂಡಾಯದ ಬಾವುಟ ಹಾರಿಸಿವೆ. ಆ.15ರ ಸ್ವಾತಂತ್ರ್ಯೋತ್ಸವ ಬಹಿಷ್ಕರಿಸಿ, ಅಂದು ಸಾರ್ವತ್ರಿಕ ಮುಷ್ಕರಕ್ಕೆ ಕರೆಕೊಟ್ಟಿವೆ. ಈ ಎಲ್ಲ ಸಂಘಟನೆಗಳು ಪ್ರತ್ಯೇಕವಾಗಿ ಬಹಿಷ್ಕಾರ ಘೋಷಿಸಿವೆ. ಮೊದಲು ಅಸ್ಸಾಂ, ಅನಂತರ ಮಣಿಪುರ, ತ್ರಿಪುರ ಮತ್ತು ಮೇಘಾಲಯ ಮೂಲದ 6 ಉಗ್ರಗಾಮಿ ಸಂಘಟನೆಗಳು, ಬಳಿಕ ಯುನೈಟೆಡ್‌ ಲಿಬರೇಶನ್‌ ಫ್ರಂಟ್‌ ಆಫ್ ಅಸ್ಸಾಂ (ಸ್ವತಂತ್ರ) ಮತ್ತು ನ್ಯಾಶನಲ್‌ ಸೋಷಿಯಲಿಸ್ಟ್‌ ಕೌನ್ಸಿಲ್‌ ಆಫ್ ನಾಗಾಲಿಮ್‌ (ಎನ್‌ಎಸ್‌ಸಿಎನ್‌) ಬಂಡಾಯದ ಬಾವುಟ ಹಾರಿಸಿವೆ.

ನೋ ಎಂಟ್ರಿ
ಎಲ್ಲ ರೀತಿಯ ಕೆಮರಾ, ಬೈನಾಕ್ಯುಲರ್‌, ರಿಮೋಟ್‌ ಕಂಟ್ರೋಲ್ಡ್‌ ಕಾರ್‌ ಕೀ, ಛತ್ರಿ, ಕೈಚೀಲ, ಬ್ರಿಫ್ಕೇಸ್‌, ಟ್ರಾನ್ಸಿಸ್ಟರ್‌, ಸಿಗರೇಟ್‌ ಲೈಟರ್‌, ನೀರಿನ ಬಾಟಲ್‌, ಲಂಚ್‌ಬಾಕ್ಸ್‌- ಇತ್ಯಾದಿಗಳಿಗೆ ಅನುಮತಿ ನಿಷಿದ್ಧ.

Advertisement

Udayavani is now on Telegram. Click here to join our channel and stay updated with the latest news.

Next