Advertisement

ಕರ್ಫ್ಯೂ ಮಧ್ಯೆ ಸರ್ಕಸ್‌ ಕಂಪನಿ ಸ್ಥಿತಿ ಅತಂತ್ರ!

05:55 PM May 08, 2021 | Team Udayavani |

ವರದಿ : ಮಹಾದೇವ ಪೂಜೇರಿ

Advertisement

ಚಿಕ್ಕೋಡಿ: ನಗರದಿಂದ ನಗರಕ್ಕೆ, ಪಟ್ಟಣದಿಂದ ಪಟ್ಟಣಕ್ಕೆ ಹೋಗಿ ಮೈನವಿರೇಳಿಸುವಂತಹ ಕಸರತ್ತಿನ ಕಲೆಯನ್ನು ಪ್ರದರ್ಶನ ಮಾಡುವ ಸೂಪರ ಸ್ಟಾರ್‌ ಸರ್ಕಸ್‌ ಕಲಾವಿದರ ಬದುಕನ್ನು ಕೊರೊನಾ ಎಂಬ ಹೆಮ್ಮಾರಿ ಕಟ್ಟಿ ಹಾಕಿದೆ. ಕಳೆದ ಹದಿನೈದು ದಿನಗಳಿಂದ ಕಲೆ ಪ್ರದರ್ಶನವಿಲ್ಲದೆ ಕಲಾವಿದರು ಜೀವನ ನಡೆಸಲು ಹರಸಾಹಸ ಪಡುವಂತಾಗಿದೆ.

ಸರ್ಕಸ್‌ ಕಲೆಯಿಂದಲೇ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಕಲಾವಿದರ ಬದುಕು ಇಂದು ಬೀದಿಗೆ ಬಿದ್ದಿದೆ. ಕೊರೊನಾ ಎಂಬ ಮಾರಣಾಂತಿಕ ಸೋಂಕಿಗೆ ರಾಜ್ಯವೇ ಜನತಾ ಕರ್ಫ್ಯೂನಲ್ಲಿದೆ. ಹೀಗಾಗಿ ಕಳೆದ 15 ದಿನಗಳಿಂದ 150 ಕಲಾವಿದರು ಯಾವುದೇ ಕೆಲಸವಿಲ್ಲದೇ ಅತಂತ್ರರಾಗಿದ್ದಾರೆ.

ನೆರೆಯ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಸೂಪರ ಸ್ಟಾರ್‌ ಸರ್ಕಸ್‌ ಕಂಪನಿ ಕಳೆದ ಒಂದು ತಿಂಗಳ ಹಿಂದೆಯಷ್ಟೇ ಚಿಕ್ಕೋಡಿ ನಗರದ ಹುಡ್ಕೋ ಕಾಲೋನಿ ಹತ್ತಿರದ ಶ್ರೀ ಅಲ್ಲಮಪ್ರಭು ಐಟಿಐ ಕಾಲೇಜು ಮೈದಾನದಲ್ಲಿ ಟೆಂಟ್‌ ಹಾಕಿತ್ತು. ಎರಡು ವಾರಗಳ ಕಾಲ ಸರ್ಕಸ್‌ ಪ್ರದರ್ಶನ ನೀಡುವಷ್ಟರಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿದ್ದರಿಂದ ಸರ್ಕಾರ ಕೊರೊನಾ ಕರ್ಫ್ಯೂ ಜಾರಿ ಮಾಡಿದ್ದರಿಂದ ಸರ್ಕಸ್‌ ಪ್ರದರ್ಶನ ನಿಂತು ಹೋಗಿದೆ. ಇದರಿಂದ ಕಲಾವಿದರ ಬದುಕು ಮೂರಾಬಟ್ಟೆಯಾಗಿದೆ.

ಚಿಕ್ಕೋಡಿ ನಗರದಲ್ಲಿ ಮೊದಲ ವಾರದ ಪ್ರದರ್ಶನಗಳು ಭರ್ತಿಯಾಗಿದ್ದವು. ನಂತರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮುಷ್ಕರದಿಂದ ಬಸ್‌ ಬಂದಾದವು. ಆವಾಗ ಹಳ್ಳಿ ಜನರು ಬಾರದೇ ನೋಡುಗರ ಸಂಖ್ಯೆ ಕಡಿಮೆಯಾಯಿತು. ಈಗ ಕರ್ಫ್ಯೂದಿಂದ ಸರ್ಕಸ್‌ ಕಂಪನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

Advertisement

ಕಳೆದ ವರ್ಷ ಕೋವಿಡ್‌ ಸಂದರ್ಭದಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ತೊಂದರೆ ಅನುಭವಿಸಿದ್ದೇವೆ. ಈ ವರ್ಷ ಕೂಡ ಆತಂಕದ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ಕಂಪನಿ ಕಲಾವಿದರು. ಮೊದಲೇ ಅಳಿವಿನ ಅಂಚಿನಲ್ಲಿರುವ ಸರ್ಕಸ್‌ ಕಂಪನಿಗಳು ವಿವಿಧ ಕಾರಣಗಳಿಂದ ಮುಚ್ಚುತ್ತಿವೆ. ಸರ್ಕಸ್‌ ನಡೆಸುವ ಮಾನೆ ಕುಟುಂಬದ ನಾಲ್ಕನೆಯ ತಲೆಮಾರಿನ ಪ್ರಕಾಶ ಮಾನೆ ಕಳೆದ 35 ವರ್ಷಗಳಿಂದ ಹಲವಾರು ಏಳುಬೀಳುಗಳ ನಡುವೆ ನೂರಾರು ಕಲಾವಿದರನ್ನು ಸೇರಿಸಿ ಕಂಪನಿ ನಡೆಸಿಕೊಂಡು ಬರುತ್ತಿದ್ದಾರೆ.

ಮಹಾರಾಷ್ಟ್ರ, ಗುಜರಾತ, ಛತ್ತೀಸಗಢ, ತಮಿಳುನಾಡು, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ಕೇರಳ, ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಪ್ರದರ್ಶನ ನೀಡಿದ್ದಾರೆ. ನಮ್ಮ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಸಾಹಸ, ಜನಪದ ಕ್ರೀಡೆ ಇವೆಲ್ಲ ದೇಶದ ಘನತೆ ಹೆಚ್ಚಿಸುತ್ತವೆ. ಆಯಾ ಕ್ಷೇತ್ರದಲ್ಲಿ ಸಾಧಕರಿಗೆ ಕಲೆಯ ಜೊತೆಗೆ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ. ಇಂತಹ ಕಲಾವಿದರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ತಿಂಗಳ ಮಾಸಾಶನದ ಜೊತೆಗೆ ಕಂಪನಿ ನಡೆಸಲು ಆರ್ಥಿಕ ಸಹಾಯ ನೀಡಿದರೆ, ಕೆಲವೊಂದಿಷ್ಟಾದರೂ ಸರ್ಕಸ್‌ ಕಂಪನಿಗಳನ್ನು ಉಳಿಸಿಕೊಳ್ಳಬಹುದು. ಜೊತೆಗೆ ಇಂತಹ ಬಡ ಕಂಪನಿಗಳಿಗೆ ಜನಪ್ರತಿನಿ ಧಿಗಳು, ಸಂಘ-ಸಂಸ್ಥೆ, ದಾನಿಗಳು ಆರ್ಥಿಕ ಸಹಾಯ, ಉಪಜೀವನಕ್ಕೆ ದವಸ ಧಾನ್ಯ ನೀಡುವುದು ಅತ್ಯವಶ್ಯಕವಾಗಿದೆ ಎನ್ನುತ್ತಾರೆ ಚಿಕ್ಕೋಡಿಯ ಕಲಾವಿದ ಭರತ ಕಲಾಚಂದ್ರ.

Advertisement

Udayavani is now on Telegram. Click here to join our channel and stay updated with the latest news.

Next