Advertisement

ಚಿಕನ್‌ ಪ್ರಿಯರ ಮೇಲೆ ಕೋವಿಡ್ ಕರಿನೆರಳು

06:21 PM Oct 12, 2020 | Suhan S |

ಶಿವಮೊಗ್ಗ: ಚಿಕನ್‌ ತಿಂದರೆ ಕೋವಿಡ್ ಬರಲಿದೆ ಎಂದು ಸುಳ್ಳು ವದಂತಿ ಹಬ್ಬಿದ ಪರಿಣಾಮ ಲಾಕ್‌ಡೌನ್‌ ಸಂದರ್ಭ ಕುಕ್ಕುಟೋದ್ಯಮಿಗಳು ಸಂಕಷ್ಟ ಎದುರಿಸಿದರು. ಆ ಸಮಯದಲ್ಲಿ ಕೋಳಿ ಸಾಕಣೆದಾರರು ಹೊಡೆತ ತಿಂದರೆ ಈಗ ಗ್ರಾಹಕರು ಅದರ ಪರಿಣಾಮ ಎದುರಿಸುವಂತಾಗಿದೆ.

Advertisement

ಕಳೆದಎರಡು ತಿಂಗಳಿನಿಂದ ಚಿಕನ್‌ ದರ 200 ರೂ. ಆಸುಪಾಸು ಇದ್ದು, ಆಫ್‌ಸೀಝನ್‌ ಎಂದೇ ಪರಿಗಣಿಸುವ ಶ್ರಾವಣ ಮಾಸದಲ್ಲೂ ಚಿಕನ್‌ ದರ 140 ರೂ.ಗಿಂತ ಕಡಿಮೆಯಾಗಿರಲಿಲ್ಲ. ಸದ್ಯದ ಸ್ಥಿತಿ ಗಮನಿಸಿದರೆ ಡಿಸೆಂಬರ್‌ವರೆಗೂ ಇದಕ್ಕಿಂತ ಕಡಿಮೆ ದರಕ್ಕೆ ಕೋಳಿ ಖರೀದಿ ಸಾಧ್ಯವಿಲ್ಲ. ಮೊಟ್ಟೆ ದರವೂ ಇಳಿಯಲ್ಲ ಎನ್ನಲಾಗುತ್ತಿದೆ.

ಕೋವಿಡ್ ಲಾಕ್‌ಡೌನ್‌ ಸಂದರ್ಭ ಹಬ್ಬಿದ ವದಂತಿ ಹಾಗೂ ಹಕ್ಕಿಜ್ವರದ ಭೀತಿ ಹಿನ್ನೆಲೆಯಲ್ಲಿ ಕೋಳಿ ಕೇಳುವವರೇ ಇರಲಿಲ್ಲ. 80ರಿಂದ 100 ರೂ. ಆಸುಪಾಸಿನಲ್ಲಿದ್ದ ಹೋಲ್‌ಸೇಲ್‌ ದರ 10 ರೂ.ಗೆ ಕುಸಿದಿತ್ತು. ಆದರೂ ಖರೀದಿಸುವವರೇ ಇರಲಿಲ್ಲ. ಕೆಲವರು ಉಚಿತವಾಗಿ ಹಂಚಿದರೆ, ಕೋಳಿಗಳಿಗೆ ಹಾಕಿದ ಬಂಡವಾಳವೂ ಕೈಸೇರದ ಕಾರಣ ದೊಡ್ಡ ಉದ್ದಿಮೆದಾರರು ಫಾರಂನಲ್ಲಿದ್ದ ಕೋಳಿಗಳನ್ನು ಗುಂಡಿತೋಡಿ ಹೂತರು. ಉದ್ಯಮಿಗಳು ಕೋಟ್ಯಂತರ ರೂ. ನಷ್ಟ ಅನುಭವಿಸಿದರು. ಸ್ವಂತ ಸಾಕಣೆದಾರರು ತೀವ್ರ ಸಂಕಷ್ಟ ಎದುರಿಸಬೇಕಾಯಿತು.

ಆದರೆ ಅನ್‌ಲಾಕ್‌ ನಂತರ ಗ್ರಾಹಕರ ಬೇಡಿಕೆಯಷ್ಟು ಕೋಳಿಗಳು ಲಭ್ಯವಿರದ ಕಾರಣ ಕೋಳಿ ಬೆಲೆ ಒಮ್ಮೆಲೆ ಗಗನಕ್ಕೇರಿತು. ಜೂನ್‌ನಲ್ಲಿ 240 ರೂ. ತಲುಪಿದ್ದ ಬೆಲೆ, ಶ್ರಾವಣ ಮಾಸದಲ್ಲೂ 140 ರೂ. ಇತ್ತು. ಈಗ ಮತ್ತೆ ಕೋಳಿ ಸಾಕಾಣಿಕೆದಾರರಿಂದ ಪೂರೈಕೆಯಾಗುವ ಚಿಕನ್‌  ದರ 180 ರೂ. ಆಸುಪಾಸು ಇದ್ದರೆ ಕಂಪನಿಗಳ ದರ 200 ರೂ. ಮೇಲಿದೆ. ಎರಡು ತಿಂಗಳಿನಿಂದ ಬೆಲೆ ಸ್ಥಿರತೆ ಇದ್ದು ಕೋಳಿ ಸಾಕಣೆದಾರರು ಸ್ವಲ್ಪ ಲಾಭ ನೋಡುತ್ತಿದ್ದಾರೆ.

ಬೆಲೆ ಇಳಿಯಲ್ಲ ಯಾಕೆ?: ಲಾಕ್‌ಡೌನ್‌ ತೆರವುಗೊಳಿಸಿ ಹಲವು ತಿಂಗಳುಗಳೇ ಆದರೂ ಕೋಳಿ ಉತ್ಪಾದನೆ ಸಾಮಾನ್ಯ ಸ್ಥಿತಿಗೆ ಬಂದಿಲ್ಲ. ಲಾಕ್‌ಡೌನ್‌ ವೇಳೆ ಮರಿ ಮಾಡುವ ಪೆರೇಂಟ್‌ ಕೋಳಿಗಳಿಗೆ ಆಹಾರ ಹಾಕಲು ಸಾಧ್ಯವಾಗದೇ ಗುಂಡಿ ತೆಗೆದು ಹೂತ ಪರಿಣಾಮ ಮೊಟ್ಟೆ ಮತ್ತು ಮರಿ ಉತ್ಪಾದನೆ ಕುಂಠಿತಗೊಂಡಿದೆ. ಪೇರೆಂಟ್‌ ಕೋಳಿಗಳು ಸಾಮಾನ್ಯ ಫಾರ್ಮ್ ಕೋಳಿಗಳಿಗಿಂತಭಿನ್ನವಾಗಿದ್ದು 28 ವಾರಕ್ಕೆ ಮರಿ ಇಡಲು ಶುರು ಮಾಡುತ್ತವೆ. ಫಲಭರಿತ (ಮರಿಯಾಗುವ ಶಕ್ತಿವುಳ್ಳ) ಮೊಟ್ಟೆ ಇಡಲು 35ರಿಂದ 40 ವಾರ ಬೇಕು. ಅಂದರೆ ಕನಿಷ್ಠ ಎಂಟು ತಿಂಗಳಾದರೂ ಬೇಕು.

Advertisement

ಮಾರುಕಟ್ಟೆಯಲ್ಲಿ ಮರಿ ಉತ್ಪಾದನೆಗೆ ಬೇಕಾದಷ್ಟು ಮೊಟ್ಟೆಗಳು ಸಿಗುತ್ತಿಲ್ಲ. ಪೇರೆಂಟ್‌ ಕೋಳಿಗಳು ಈಗ ಬೆಳವಣಿಗೆ ಹಂತದಲ್ಲಿರುವುದರಿಂದ ಡಿಸೆಂಬರ್‌ ವೇಳೆಗೆ ಮೊಟ್ಟೆ ಮತ್ತು ಮರಿ ಉತ್ಪಾದನೆ ಸಾಮಾನ್ಯ ಸ್ಥಿತಿಗೆ ಮರಳಿ ದರ ಇಳಿಯಲಿದೆ. ಅಲ್ಲದೇ ನಷ್ಟದ ಕಾರಣ ಉದ್ಯಮದಿಂದ ದೂರ ಉಳಿದ ಸಾವಿರಾರು ರೈತರು ಮತ್ತೆ ಉದ್ಯಮದತ್ತ ಮುಖ ಮಾಡಿದರೆ ಪೂರೈಕೆ ಸಹಜ ಸ್ಥಿತಿಗೆ ಬರಲಿದೆ ಎನ್ನುತ್ತಾರೆ ಉದ್ಯಮಿಗಳು.

ಮೊಟ್ಟೆ ದುಬಾರಿ : ಮಾರುಕಟ್ಟೆಯಲ್ಲಿ ಕೋಳಿ ಅಲ್ಲದೆ ಮೊಟ್ಟೆ ಧಾರಣೆ ಸಹ ಭಾರಿ ಏರಿಕೆ ಕಂಡಿದೆ. ಹೋಲ್‌ ಸೇಲ್‌ ದರ ಒಂದು ಮೊಟ್ಟೆಗೆ 5.50 ರೂ. ಇದ್ದರೆ ಅಂಗಡಿಗಳಲ್ಲಿ 6ರಿಂದ 7 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮೊಟ್ಟೆಉತ್ಪಾದನೆ ಶೇ.50ರಷ್ಟು ಕುಸಿದಿದೆ. ವ್ಯಾಪಾರಿಗಳು ಕೇಳುವಷ್ಟು ಮೊಟ್ಟೆ ಸಿಗುತ್ತಿಲ್ಲ. ಮೊಟ್ಟೆ ಉತ್ಪಾದನೆಯು ಕೋಳಿಗಳನ್ನೇ ಅವಲಂಬಿಸಿರುವುದರಿಂದ ಡಿಸೆಂಬರ್‌ ವರೆಗೆ ಅಸಾಮಾನ್ಯ ಏರಿಳಿತ ಇರುತ್ತದೆ ಎನ್ನುತ್ತಾರೆ ಕುಕ್ಕುಟೋದ್ಯಮಿಗಳು.

ಲಾಕ್‌ಡೌನ್‌ ಅವಧಿಯಲ್ಲಿ ಪೇರೆಂಟ್‌ ಕೋಳಿಗಳನ್ನು ಸಾಯಿಸಿದ ಪರಿಣಾಮ ಬೇಡಿಕೆ ತಕ್ಕಷ್ಟು ಉತ್ಪಾದನೆ ಇಲ್ಲ. ಲಾಕ್‌ಡೌನ್‌ ತೆರವು ನಂತರವೂ ಕಚ್ಚಾವಸ್ತುಗಳ ಪೂರೈಕೆ ಕೂಡ ಕಷ್ಟವಾಗಿತ್ತು. ಈಗ ಸಹಜ ಸ್ಥಿತಿಗೆ ಬರುತ್ತಿದೆ. ಈ ವರ್ಷ ಮೀನು ಪೂರೈಕೆ ಉತ್ತಮವಾಗಿಲ್ಲ. ಬಹಳಷ್ಟು ಗ್ರಾಹಕರು ಚಿಕನ್‌ ಕಡೆ ವಾಲಿದ್ದಾರೆ. ಮಾರುಕಟ್ಟೆ ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದು ಡಿಸೆಂಬರ್‌ ನಂತರ ಗ್ರಾಹಕರಿಗೆ ಇದರ ಲಾಭಸಿಗಲಿದೆ.- ದಿನೇಶ್‌ ಪಟೇಲ್‌, ನಂದೀಶ್‌ ಪೌಲ್ಟ್ರಿ ಫಾರಂ, ಶಿವಮೊಗ್ಗ.

 

-ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next