ಬೀದರ: ಕಣ್ಣಿಗೆ ಮುದ ನೀಡುವ ವಿಶ್ವವಿಖ್ಯಾತ ಬಿದ್ರಿ ಕಲೆಗೆ ಇದೀಗ ಕೆಟ್ಟ ಕಾಲ ಆರಂಭವಾಗಿದ್ದು, ಕೋವಿಡ್‌ದಿಂದಾಗಿ ಅಪರೂಪದ ಕಲೆ ಅಳಿವಿನಂಚಿಗೆ ತಲುಪುತ್ತಿದೆ. ಬೆಳ್ಳಿ ಸೇರಿ ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ನೆಲಕಚ್ಚಿದ್ದ ಬಿದ್ರಿ ಕಲೆಗೆ ಕೋವಿಡ್-19 ಹೊಡೆತ ನೀಡಿದ್ದು, ಈ ಉದ್ಯಮವನ್ನೇ ನಂಬಿರುವ ನೂರಾರು ಕಸಬುಗಾರರ ಕುಟುಂಬ ಬೀದಿಗೆ ಬಂದಿವೆ.
ಅಲಂಕಾರಿಕೆ, ಉಡುಗರೆಯಾಗಿ ನೀಡಲು ಸೈ ಎನಿಸಿಕೊಂಡಿರುವ ಕಲಾಕೃತಿಗಳಿಗೆ ದೇಶ-ವಿದೇಶಗಳಲ್ಲಿ ಮನ ಸೋಲದವರೇ ಇಲ್ಲ. ಆದರೆ, ಕೆಲ ವರ್ಷಗಳಿಂದ ಬೆಳ್ಳಿ, ಸತುವು ಹಾಗೂ ತಾಮ್ರದ ಬೆಲೆ ಹೆಚ್ಚಳದ ಜತೆಗೆ ವ್ಯಾಪಾರ ಕುಸಿತದಿಂದ ಉದ್ಯಮ ನೆಲಕಚ್ಚಿತ್ತು. ಈಗ ಕೋವಿಡ್ ಉದ್ಯಮಕ್ಕೆ ಗಾಯದ ಮೇಲೆ ಬರೆ ಹಾಕಿದಂತಾಗಿದೆ. ಕಚ್ಚಾ ವಸ್ತುಗಳು ಸಿಗದಿರುವುದು, ಮತ್ತೂಂದೆಡೆ ಅಂತರ ದೇಶಗಳ ಪ್ರಯಾಣ ನಿರ್ಬಂಧ ಹಿನ್ನೆಲೆಯಲ್ಲಿ ಕಲಾಕೃತಿಗಳ ರಫ್ತು ಮತ್ತು ಖರೀದಿಗೆ ಯಾರೂ ಮುಂದಾಗುತ್ತಿಲ್ಲ.
ಬಿದ್ರಿ ಕಲೆಯನ್ನೇ ನೆಚ್ಚಿಕೊಂಡಿರುವ ಅಂದಾಜು 700ಕ್ಕೂ ಹೆಚ್ಚು ಕರಕುಶಲ ಕರ್ಮಿಗಳು, ಕಾರ್ಮಿಕರು ಮತ್ತು ವ್ಯಾಪಾರಿಗಳಿದ್ದು, ಅತ್ಯಂತ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಕಲಾಕೃತಿಗಳು ದರ ದುಬಾರಿ ಇರುವ ಕಾರಣ ಭಾರತೀಯರಿಗಿಂತ ವಿದೇಶಿಗರು ಹೆಚ್ಚಾಗಿ ಖರೀದಿಸುತ್ತಾರೆ. ದೇಶದಲ್ಲಿ ಲಾಕ್‌ಡೌನ್ ತೆರವು ಬಳಿಕ ಕಚ್ಚಾ ವಸ್ತುಗಳ ಕೊರತೆ ನೀಗಿದ್ದರೂ ವಿದೇಶಿಗರಿಗೆ ಸದ್ಯ ಭಾರತ ಪ್ರವಾಸಕ್ಕೆ ಅವಕಾಶ ಇಲ್ಲವಾದ್ದರಿಂದ ಕಲಾಕೃತಿಗಳನ್ನು ಕೇಳುವವರೇ ಇಲ್ಲದಂತಾಗಿದೆ.
ಹಾಗಾಗಿ ಬೀದರನ ಓಲ್ಡ್ ಸಿಟಿಯಲ್ಲಿರುವ ಏಳೆಂಟು ಮಾರಾಟ ಮಳಿಗೆಗಳಲ್ಲಿ ಬಿದ್ರಿ ಕಲಾಕೃತಿಗಳು ಧೂಳು ಹಿಡಿಯುತ್ತಿದ್ದು, ಅಂಗಡಿಗಳಿಗೆ ಬಾಗಿಲು ಹಾಕುವ ಸ್ಥಿತಿ ಬಂದಿದೆ. ಸಂಕಷ್ಟದಲ್ಲಿರುವ ಉದ್ಯಮದ ಸುಧಾರಣೆ ಮತ್ತು ಕಲಾವಿದರ ಆರ್ಥಿಕ ಸಂಕಷ್ಟಕ್ಕೆ ಸರ್ಕಾರ ಸಹ ನೆರವಾಗಿಲ್ಲ. ಕಾರ್ಮಿಕರಿಗೆ ಸರ್ಕಾರದ 5 ಸಾವಿರ ರೂ. ಪ್ರೋತ್ಸಾಹಧನಕ್ಕಾಗಿ ಹ್ಯಾಂಡಿ ಕ್ರಾಫ್ಟ್ ಡೆವಲಪ್‌ಮೆಂಟ್ ಕಾರ್ಪೊರೇಶನ್ ವತಿಯಿಂದ ನೋಂದಾಯಿತ ಬಿದ್ರಿ ಕಲಾವಿದರ ದಾಖಲೆಗಳನ್ನು ಪಡೆಯಲಾಗಿದ್ದು, ಬಹುತೇಕರಿಗೆ ಇದರ ಸಹಾಯ ತಲುಪಿಲ್ಲ ಎಂಬ ದೂರುಗಳಿವೆ.
ಬಿದ್ರಿ ಕಲೆ ಇಂದು ಸಾಗರದಾಚೆ ತನ್ನಂದವನ್ನು ಪ್ರದರ್ಶಿಸಿ ವಿಖ್ಯಾತಿಯನ್ನು ಪಡೆದಿದೆ. ಆದರೆ, ಅವುಗಳನ್ನು ತಯಾರಿಸುವ ಕುಶಲಕರ್ಮಿಗಳು, ಉದ್ಯಮಿಗಳ ಬದುಕು ಮಾತ್ರ ಹಸನಾಗಿಲ್ಲ. ವ್ಯಾಪಾರವೂ ಇಲ್ಲದೇ, ಇತ್ತ ಸರ್ಕಾರದ ನೆರವು ಇಲ್ಲದೇ ಸಂಕಷ್ಟದಲ್ಲಿರುವ ಹತ್ತಾರು ಕುಟುಂಬಗಳಿಗೆ ಈ ಕಲೆಗೆ ಭವಿಷ್ಯ ಇದೆಯೇ ಎಂಬ ಆತಂಕ ಆವರಿಸಿದೆ.
ಬೆಲೆ ಏರಿಕೆ ಬಿಸಿಯಿಂದ ನೆಲಕಚ್ಚಿರುವ ಬಿದ್ರಿ ಕಲಾಕೃತಿ ಉದ್ಯಮಕ್ಕೆ ಈಗ ಕೋವಿಡ್ ಸೋಂಕಿನ ದೊಡ್ಡ ಹೊಡೆತ ನೀಡಿದೆ. ವಿದೇಶಿಗರು ಭಾರತಕ್ಕೆ ಬಂದರೆ ಮಾತ್ರ ಬಿದ್ರಿ ಕಲೆಗೆ ಮಾರುಕಟ್ಟೆ ಸಾಧ್ಯ. ಆದರೆ, ಕೋವಿಡ್ ದಿಂದಾಗಿ ವಿದೇಶಗಳ ಪ್ರಯಾಣ ನಿರ್ಬಂಧದಿಂದ ಖರೀದಿಸುವವರೇ ಇಲ್ಲ. ಜೀವನದ ಅತ್ಯಂತ ಕೆಟ್ಟ ದಿನಗಳನ್ನು ಎದುರಿಸುತ್ತಿರುವ ಕಲಾವಿದರು ಪಾರಂಪರಿಕ ವೃತ್ತಿ ಬಿಟ್ಟು ಬೇರೆ ಕೆಲಸದತ್ತ ಮುಖ ಮಾಡುತ್ತಿದ್ದಾರೆ. ಸರ್ಕಾರದ ನೆರವಿನ ನಿರೀಕ್ಷೆ ಒಂದೇ ಪರಿಹಾರ.
-ಶಾ ರಶೀದ್ ಅಹ್ಮದ್ ಖಾದ್ರಿ, ಹಿರಿಯ ಬಿದ್ರಿ ಕಲಾವಿದ.
-ಶಶಿಕಾಂತ ಬಂಬುಳಗೆ