Advertisement

“ಜಿಮ್‌”ಮೇಲೆ ಕೋವಿಡ್-19 ಕರಿನೆರಳು

03:49 PM Apr 08, 2020 | mahesh |

ಬೆಂಗಳೂರು: ಕೋವಿಡ್-19 ವೈರಸ್‌ ವಿಶ್ವವನ್ನೇ ತಲ್ಲಣಗೊಳಿಸಿದ್ದು, ರಾಜ್ಯ ಸರ್ಕಾರ ನವೆಂಬರ್‌ನಲ್ಲಿ ನಡೆಸಲು ಉದ್ದೇಶಿಸಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದ ಮೇಲೂ ಕರಿನೆರಳು ಬೀಳುವಂತೆ ಮಾಡಿದೆ. ರಾಜ್ಯ ಬಿಜೆಪಿ ಸರ್ಕಾರ ನವೆಂಬರ್‌ 3 ರಿಂದ 5 ರ ವರೆಗೆ ಮೂರು ದಿನ ವಿಶ್ವ ಬಂಡವಾಳ ಹೂಡಿಕೆ (ಜಿಮ್‌)ದಾರರ ಸಮಾವೇಶ ಮಾಡಲು ನಿರ್ಧರಿಸಿತ್ತು. ಆದರೆ, ವಿಶ್ವಾದ್ಯಂತ ಕೊರೊನಾ ವೈರಸ್‌ ಹಾವಳಿಯಿಂದ ಬಹುತೇಕ ರಾಷ್ಟ್ರಗಳು ಲಾಕ್‌ಡೌನ್‌ ಘೋಷಣೆ ಮಾಡಿದ್ದು, ಆರ್ಥಿಕ ಹಿಂಜರಿತದಿಂದ ಸಂಕಷ್ಟ ಎದುರಿಸುತ್ತಿವೆ.  ಹೀಗಾಗಿ ವಿಶ್ವ ಬಂಡವಾಳ ಹೂಡಿಕೆ ಸಮಾವೇಶ ನಡೆಸಬೇಕಾ ಅಥವಾ ಮುಂದೂಡಬೇಕಾ ಎಂಬ ಗೊಂದಲದಲ್ಲಿ ರಾಜ್ಯ ಸರ್ಕಾರ ಸಿಲುಕಿದೆ.

Advertisement

ಆರಂಭದ ಯೋಜನೆ: ರಾಜ್ಯ ಸರ್ಕಾರ ವಿಶ್ವ ಬಂಡವಾಳ ಹೂಡಿಕೆಗೆ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಬಂಡವಾಳದಾರರನ್ನು ಆಕರ್ಷಿಸಲು ವಿದೇಶಗಳಲ್ಲಿ ರೋಡ್‌ ಶೋ ನಡೆಸಲು ನಿರ್ಧರಿಸಿತ್ತು. ಈ ಬಾರಿ ಕನಿಷ್ಠ 5 ಲಕ್ಷ ಕೋಟಿ ರೂ. ಬಂಡವಾಳ ಆಕರ್ಷಿಸಲು ನಿರ್ಧರಿಸಿತ್ತು. ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ನೇತೃತ್ವದಲ್ಲಿ ಕೈಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಬಂಡವಾಳ ಹೂಡಿಕೆ ಮಾಡುವ ಪ್ರಮುಖ ರಾಷ್ಟ್ರಗಳಾದ ಅಮೆರಿಕ, ಇಂಗ್ಲೆಂಡ್‌, ಫ್ರಾನ್ಸ್‌, ಜರ್ಮನಿ, ಸ್ವಿಡ್ಜರ್‌ ಲ್ಯಾಂಡ್‌, ಚೀನಾ, ಆಸ್ಟ್ರೇಲಿಯಾ ದೇಶಗಳಲ್ಲಿ ರೋಡ್‌ ಶೋ ನಡೆಸಲು ಯೋಜನೆ ರೂಪಿಸಿಕೊಂಡಿದ್ದರು.

ಕೋವಿಡ್-19 ಎಫೆಕ್ಟ್: ವಿಶ್ವದ 180 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ವಿಶೇಷವಾಗಿ ಶ್ರೀಮಂತ ರಾಷ್ಟ್ರಗಳಾದ ಅಮೆರಿಕ, ಇಂಗ್ಲೆಂಡ್‌, ಚೀನಾ ಸಂಪೂರ್ಣ ಲಾಕ್‌ ಡೌನ್‌ ಘೋಷಣೆ ಮಾಡಿವೆ. ಇದರಿಂದ ಸಾಕಷ್ಟು ಆರ್ಥಿಕ ನಷ್ಟ ಅನುಭವಿಸುತ್ತಿವೆ. ವಿಶ್ವದ ದಿಗ್ಗಜ
ಕೈಗಾರಿಕೋದ್ಯಮಿಗಳಾದ ಬಿಲ್‌ಗೇಟ್ಸ್‌, ವಾರೆನ್‌ ಬಫೆಟ್‌ ಸೇರಿದಂತೆ ಅನೇಕ ಬಿಲಿಯನೀಯರ್‌ಗಳು ಎರಡೇ ತಿಂಗಳಲ್ಲಿ ಲಕ್ಷಾಂತರ ಕೋಟಿ ರೂ. ನಷ್ಟ ಅನುಭವಿಸುತ್ತಿದ್ದು, ಇರುವ ಉದ್ಯಮಗಳನ್ನೇ ಉಳಿಸಿಕೊಂಡು ಹೋಗುವುದು ಕಷ್ಟದಾಯಕ ಎನ್ನವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಈ ಸಂದರ್ಭದಲ್ಲಿ ವಿಶ್ವ ಬಂಡವಾಳ ಹೂಡಿಕೆದಾರರನ್ನು ಸೆಳೆಯುವುದು ಕಷ್ಟದಾಯಕ ಎಂಬ ಆತಂಕ ರಾಜ್ಯ ಸರ್ಕಾರಕ್ಕೆ ಶುರುವಾಗಿದೆ. ಹೀಗಾಗಿ ಜಿಮ್‌ಗಾಗಿ ವಿದೇಶಗಳಲ್ಲಿ ರೋಡ್‌ ಶೋ ಮಾಡುವುದನ್ನು ರಾಜ್ಯ ಸರ್ಕಾರ ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಅದೇ ರೀತಿ ಬೃಹತ್‌ ಉದ್ದಿಮೆದಾರರಾದ ಅಂಬಾನಿ, ಅದಾನಿ, ಮಹೀಂದ್ರಾದಂತಹ ದೈತ್ಯ ಕಂಪನಿಗಳು ಸಾವಿರಾರು ಕೋಟಿ ನಷ್ಟ ಅನುಭವಿಸುತ್ತಿದ್ದು, ದೇಶಿಯ ಉದ್ಯಮಿಗಳೂ
ತಕ್ಷಣವೇ ಹೊಸದಾಗಿ ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ತೋರುವುದು ಅನುಮಾನ. ಲಾಕ್‌ ಡೌನ್‌ ಅವಧಿ ಎಲ್ಲಿಯವರೆಗೆ
ಮುಂದುವರೆಯುತ್ತದೆ ಎಂಬ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ನಮ್ಮ ದೇಶದಲ್ಲಿ ಲಾಕ್‌ ಡೌನ್‌ ತೆರವುಗೊಳಿಸಿದರೂ, ವಿಶ್ವದ ಇತರ ರಾಷ್ಟ್ರಗಳಲ್ಲಿ ಇದರ ಪ್ರಭಾವ ಹೆಚ್ಚಿರುವುದರಿಂದ ತಕ್ಷಣಕ್ಕೆ
ಅಂತಾ ರಾಷ್ಟ್ರೀಯ ಚಲನವಲನ ಗಳು ಆರಂಭವಾಗುವುದು ಅನುಮಾನ.

ಹುಬ್ಬಳ್ಳಿ ಸಮಾವೇಶದ ಅನುಷ್ಠಾನಕ್ಕೂ ಆತಂಕ ?Z
ರಾಜ್ಯ ಸರ್ಕಾರ ವಿಶ್ವ ಬಂಡವಾಳ ಸಮಾವೇಶದ ಪೂರ್ವಭಾವಿಯಂತೆ ಹುಬ್ಬಳ್ಳಿ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಿತ್ತು. ಅದರಲ್ಲಿ ಸುಮಾರು 72 ಸಾವಿರ ಕೋಟಿ ರೂ. ಬಂಡವಾಳ ಹರಿದು ಬಂದಿತ್ತು. ಆದರೆ, ಆ ಸಮಾವೇಶದಲ್ಲಿ ಆಗಿರುವ ಒಪ್ಪಂದಗಳಿಗೆ ಆಡಳಿತಾತ್ಮಕ ಒಪ್ಪಿಗೆ ನೀಡುವ ಸಂದರ್ಭದಲ್ಲಿಯೇ ಕೋವಿಡ್-19 ವೈರಸ್‌ ಹಾವಳಿಯಿಂದ ಲಾಕ್‌ಡೌನ್‌ ಘೋಷಣೆಯಾಗಿದೆ. ಹುಬ್ಬಳ್ಳಿ ಸಮಾವೇಶದ ಒಪ್ಪಂದಗಳ ಅನುಷ್ಠಾನಕ್ಕೂ ಬ್ರೇಕ್‌ ಬಿದ್ದಂತಾಗಿದೆ. ಹುಬ್ಬಳ್ಳಿ ಸಮಾವೇಶದಲ್ಲಿ ಆಗಿರುವ 51 ಒಪ್ಪಂದಗಳಲ್ಲಿ ಕೇವಲ 15 ಕಂಪನಿಗಳ ಹೂಡಿಕೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಉಳಿದ ಯೋಜನೆಗಳ ಅನುಷ್ಠಾನಕ್ಕೆ ಬಂಡವಾಳದಾರರು ಯಾವ ರೀತಿ ಸ್ಪಂದಿಸುತ್ತಾರೆ ಎನ್ನುವುದು ಕೂಡ ರಾಜ್ಯ ಸರ್ಕಾರದ
ಆತಂಕಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಕೋವಿಡ್-19 ಪರಿಣಾಮದಿಂದ ಎಲ್ಲವೂ ಸ್ಥಗಿತಗೊಂಡಿದೆ. ನವೆಂಬರ್‌ನಲ್ಲಿ ಜಿಮ್‌ ನಡೆಸಲು ಏಪ್ರಿಲ್‌, ಮೇ ನಲ್ಲಿ ವಿದೇಶಗಳಲ್ಲಿ ರೋಡ್‌ ಶೋ ಇಟ್ಟುಕೊಂಡಿದ್ದೆವು. ಈಗ ಜಗತ್ತಿನಾದ್ಯಂತ ಕೋವಿಡ್-19 ಹಾವಳಿ ಇರುವುದರಿಂದ ಜಿಮ್‌ ವಿಷಯದಲ್ಲಿ ಸದ್ಯಕ್ಕೆ ಯಾವುದೇ ತೀರ್ಮಾನ ತೆಗೆದುಕೊಳ್ಳುವುದು ಕಷ್ಟ.
●ಜಗದೀಶ್‌ ಶೆಟ್ಟರ್‌, ಕೈಗಾರಿಕಾ ಸಚಿವ.

Advertisement

ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next