ಚಿಕ್ಕಮಗಳೂರು: ಕೋವಿಡ್ ಸೋಂಕು ಎಲ್ಲಾ ಕ್ಷೇತ್ರಗಳ ಮೇಲೂ ತನ್ನ ಪ್ರಭಾವ ಬೀರಿದ್ದು, ಅನೇಕರ ಉದ್ಯೋಗವನ್ನು ಕಸಿದುಕೊಂಡಿದೆ. ಬದುಕು ಅತಂತ್ರಗೊಳಿಸಿದೆ. ಅದೇ ರೀತಿ ಗಣೇಶ ವಿಗ್ರಹ ರಚನಕಾರರ ಬದುಕನ್ನು ಕಿತ್ತುಕೊಂಡಿದ್ದು ಗಣೇಶ ವಿಗ್ರಹ ತಯಾರಿಸಬೇಕೇ? ಬೇಡವೇ? ಎಂಬ ಗೊಂದಲ ಅವರನ್ನು ಕಾಡುತ್ತಿದೆ.
ಮುಂದಿನ ಒಂದೂವರೆ ತಿಂಗಳಲ್ಲಿ ಗಣೇಶ ಚತುರ್ಥಿ ಹಬ್ಬ ಬರಲಿದೆ. ಕೋವಿಡ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಗಣೇಶ ಚತುರ್ಥಿಗೆ ಗಣೇಶ ವಿಗ್ರಹ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲು ಸರ್ಕಾರ ಆದೇಶ ನೀಡುತ್ತೋ? ಇಲ್ಲವೋ? ಎಂಬ ಪ್ರಶ್ನೆ ಮೂಡಿದೆ. ಗಣೇಶ ಹಬ್ಬಕ್ಕೂ ಎರಡು ತಿಂಗಳ ಮುಂಚಿತವಾಗಿ ಗಣೇಶ ವಿಗ್ರಹ ತಯಾರಿ ಕಾರ್ಯ ನಡೆಸಬೇಕು.
ಆದರೆ, ಸರ್ಕಾರ ಯಾವುದೇ ಮಾರ್ಗಸೂಚಿಯನ್ನು ಇದುವರೆಗೂ ಹೊರಡಿಸದ ಹಿನ್ನೆಲೆಯಲ್ಲಿ ಗಣೇಶ ವಿಗ್ರಹ ತಯಾರಿಕಾ ಕಾರ್ಯಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಗಣೇಶ ಮೂರ್ತಿಗೆ ಮುಂಚಿತವಾಗಿ ಬೇಡಿಕೆಯೂ ಬರದಿರುವುದರಿಂದ ತೊಳಲಾಟಕ್ಕೆ ಸಿಲುಕಿದ್ದಾರೆ. ನಗರದ ಕುಂಬಾರ ಬೀದಿಯಲ್ಲಿ ಸಾವಿರಾರು ಗಣೇಶ ವಿಗ್ರಹ ತಯಾರು ಮಾಡಲಾಗುತ್ತದೆ. ಇದನ್ನೇ ನಂಬಿಕೊಂಡು 15-20 ಕುಟುಂಬಗಳು ಜೀವನ ನಡೆಸುತ್ತವೆ. ಗಣೇಶ ವಿಗ್ರಹ ತಯಾರಿಕೆಗೆ ಬೇಕಾಗುವ ಕಚ್ಛಾ ಸಾಮಗ್ರಿಗಳನ್ನು ತಯಾರಿ ಮಾಡಿಕೊಂಡು ಸರ್ಕಾರದ ಮಾರ್ಗಸೂಚಿಗಾಗಿ ಎದುರು ನೋಡುತ್ತಿದ್ದಾರೆ. ಕಳೆದ ಒಂದು ವಾರದಿಂದ 3ರಿಂದ 6 ಅಡಿಯ ಮನೆಯಲ್ಲಿ ಪ್ರತಿಷ್ಠಾಪಿಸುವ ವಿಗ್ರಹಗಳನ್ನು ಮಾತ್ರ ತಯಾರು ಮಾಡುತ್ತಿದ್ದೇವೆ. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಸಾರ್ವಜನಿಕ ಗಣಪತಿ ವಿಗ್ರಹ ಪ್ರತಿಷ್ಠಾಪನೆಯ ಯಾವ ಮಾರ್ಗಸೂಚಿಯನ್ನೂ ಇನ್ನೂ ಹೊರಡಿಸದ ಹಿನ್ನೆಲೆಯಲ್ಲಿ ದೊಡ್ಡ ವಿಗ್ರಹಗಳ ತಯಾರಿಕೆಗೆ ಕೈ ಹಾಕಿಲ್ಲವೆಂದು ವಿಗ್ರಹ ತಯಾರಕರು ತಿಳಿಸಿದರು.
ಕಳೆದ 10-12 ವರ್ಷಗಳಿಂದ ಗಣಪತಿ ವಿಗ್ರಹ ತಯಾರಿಕೆ ಮಾಡುತ್ತಿದ್ದೇವೆ. ಪ್ರತಿ ವರ್ಷ ಮೇ, ಜೂನ್ ತಿಂಗಳಲ್ಲೇ ವಿಗ್ರಹ ತಯಾರಿಕೆ ಪ್ರಾರಂಭಿಸುತ್ತಿದ್ದೆವು. ಕೋವಿಡ್ ಸೋಂಕು ಸಮಸ್ಯೆ ಇರುವುದರಿಂದ ವಿಗ್ರಹ ತಯಾರಿಕೆಗೆ ಕಳೆದೆರೆಡು ದಿನಗಳಿಂದ ಪ್ರಾರಂಭಿಸಿದ್ದೇವೆ. ನಮ್ಮ ಬೀದಿಯಲ್ಲಿ 15ರಿಂದ 20 ಕುಟುಂಬಗಳು ಪ್ರತಿವರ್ಷ 1500-2000 ಗಣಪತಿ ವಿಗ್ರಹಗಳನ್ನು ಮಾಡುತ್ತೇವೆ. ಈ ವರ್ಷ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ಸರ್ಕಾರ ಯಾವ ನಿರ್ಧಾರ ಪ್ರಕಟಿಸುತ್ತದೆಂದು ಎದುರು ನೋಡುತ್ತಿದ್ದೇವೆ. ದೊಡ್ಡ ದೊಡ್ಡ ಗಣಪತಿ ತಯಾರಿ ಮಾಡಿಕೊಂಡಿರುತ್ತೇವೆ. ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ನಿಷೇಧವೆಂದು ಸರ್ಕಾರ ಘೋಷಿಸಿದರೆ ನಾವು ಮಾಡಿದ ಗಣಪತಿ ನಾವೇ ಕೆರೆಗೆ ಬಿಡಬೇಕಾಗುತ್ತದೆ. ಸರ್ಕಾರ ಆದಷ್ಟು ಬೇಗ ಮಾರ್ಗಸೂಚಿಯನ್ನು ಹೊರಡಿಸಿದರೆ ರಾಜ್ಯದ ಎಲ್ಲಾ ಗಣಪತಿ ವಿಗ್ರಹ ತಯಾರಕರಿಗೆ ಅನುಕೂಲವಾಗುತ್ತದೆ ಎಂದು ನಗರದ ಕುಂಬಾರ ಬೀದಿಯ ದಿನೇಶ್ ತಿಳಿಸಿದರು.
ಸರ್ಕಾರದ ಆದೇಶದಂತೆ ವಾಟರ್ ಪೆಯಿಂಟ್ ಬಳಸಿ ವಿಗ್ರಹಗಳನ್ನು ತಯಾರಿಸುತ್ತೇವೆ. ಕೋವಿಡ್ ದಿಂದ ಎಲ್ಲಾ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ವಿಗ್ರಹ ತಯಾರಿಕೆಗೆ ಬೇಕಾಗುವ ಕಚ್ಚಾವಸ್ತುವನ್ನು ಸಂಗ್ರಹಿಸಿಟ್ಟುಕೊಂಡಿದ್ದೇವೆ. ಸರ್ಕಾರ ಬೇಗ ಮಾರ್ಗಸೂಚಿ ಹೊರಡಿಸದಿದ್ದರೆ ನಮ್ಮ ಶ್ರಮ ಹಾಗೂ ಖರ್ಚು ಮಾಡಿದ ಹಣ ವ್ಯರ್ಥವಾಗುತ್ತದೆ ಎಂದರು.
ಪ್ರತಿ ವರ್ಷದಂತೆ ಈ ವರ್ಷ ಗಣಪತಿ ವಿಗ್ರಹ ರಚನೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ದೊಡ್ಡ ವಿಗ್ರಹಗಳನ್ನು ಮಾಡಿಲ್ಲ. ಸಣ್ಣಸಣ್ಣ ವಿಗ್ರಹಗಳನ್ನು ಮಾತ್ರ ಮಾಡುತ್ತೀದ್ದೇವೆ. ಸರ್ಕಾರ ಮಾರ್ಗಸೂಚಿ ಇನ್ನೂ ಹೊರಡಿಸಿಲ್ಲ, ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆಗೆ ಸರ್ಕಾರ ಅವಕಾಶ ನೀಡುತ್ತೋ ಇಲ್ಲವೋ, ಮಾರ್ಗಸೂಚಿ ಏನು ಎಂಬುದನ್ನು ಶೀಘ್ರವಾಗಿ ತಿಳಿಸುವಂತೆ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದೇವೆ. ತಡವಾಗಿ ಸಾರ್ವಜನಿಕ ಗಣಪತಿ ವಿಗ್ರಹ ಪ್ರತಿಷ್ಠಾಪನೆಗೆ ಅವಕಾಶ ನೀಡಿದರೂ ಗಣಪತಿ ವಿಗ್ರಹ ತಯಾರಿಕೆ ಸಾಧ್ಯವಿಲ್ಲ, ದೊಡ್ಡ ಗಣಪತಿ ವಿಗ್ರಹ ತಯಾರಿಸಿ ಸರ್ಕಾರ ಸಾರ್ವಜನಿಕ ಗಣಪತಿ ವಿಗ್ರಹ ಪ್ರತಿಷ್ಠಾಪನೆಗೆ ಅವಕಾಶ ನೀಡಿಲ್ಲವೆಂದರೆ ಸರ್ಕಾರದಿಂದ ಪರಿಹಾರ ಕೇಳಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರ ತನ್ನ ನಿರ್ಧಾರವನ್ನು ಶೀಘ್ರವಾಗಿ ಪ್ರಕಟಿಸಬೇಕೆಂದು ವಿಗ್ರಹ ತಯಾರಕ ಚೇತನ್ ತಿಳಿಸಿದರು.
ಗಣಪತಿ ಮೂರ್ತಿಯನ್ನೇ ತಯಾರಿಸಿ ಜೀವನ ಸಾಗಿಸುತ್ತಿರುವರ ಬದುಕು ಅತಂತ್ರವಾಗಿದ್ದು ಸರ್ಕಾರದ ನಿರ್ಧಾರದ ಮೇಲೆ ಇವರ ಬದುಕು ರೂಪುಗೊಳ್ಳಲಿದೆ. ಗಣೇಶ ಚತುರ್ಥಿಗೆ ಸರ್ಕಾರ ಸಾರ್ವಜನಿಕ ಗಣಪತಿ ವಿಗ್ರಹ ಪ್ರತಿಷ್ಠಾಪನೆಗೆ ಅವಕಾಶ ನೀಡುತ್ತೋ? ಅಥವಾ ಕೋವಿಡ್ ಹಿನ್ನೆಲೆಯಲ್ಲಿ ನಿಷೇಧ ಹೇರುತ್ತೋ? ಕಾದುನೋಡಬೇಕಿದೆ.
50 ವರ್ಷದಿಂದ ಗಣಪತಿ ವಿಗ್ರಹ ಹಾಗೂ ಮಡಿಕೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಈ ವರ್ಷ ಮಡಿಕೆಗೂ ಬೇಡಿಕೆಯಿಲ್ಲ, ಗಣಪತಿ ವಿಗ್ರಹ ತಯಾರು ಮಾಡುವುದೋ ಬೇಡವೋ ಎಂದು ಚಿಂತಿಸುತ್ತಿದ್ದೇವೆ. –
ರಾಜಣ್ಣ, ಕುಂಬಾರ ಬೀದಿಯ ಮಡಿಕೆ ವ್ಯಾಪಾರಿ
-ಸಂದೀಪ ಜಿ.ಎನ್.ಶೇಡ್ಗಾರ್