Advertisement

ಜಾತ್ರೆ,ಉತ್ಸವ ರದ್ದು;ಮನೆಗೆ ಸೀಮಿತವಾದ ಹಬ್ಬ

04:08 PM Nov 16, 2020 | Suhan S |

ಮೈಸೂರು: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಕ್ಕೆ ಕೋವಿಡ್  ಅಡ್ಡಿಯಾಗಿದ್ದು, ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾರ್ತೀಕ ಮಾಸದ ಆರಂಭದಲ್ಲಿ ಜರುಗುತ್ತಿದ್ದ ಜಾತ್ರೆ ಹಾಗೂ ಉತ್ಸವಗಳು ರದ್ದಾಗಿವೆ.

Advertisement

ಕೋವಿಡ್‌-19 ಸಂಕಷ್ಟದ ನಡುವೆಯೂ ದೀಪಾವಳಿ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದರೂ,ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಕೇವಲ ಸಾಂಪ್ರದಾಯಿಕ ಆಚರಣೆಗಷ್ಟೇ ಸೀಮಿತವಾಗಿದ್ದು, ಸಂಭ್ರಮಕ್ಕೆ ಬ್ರೇಕ್‌ ಬಿದ್ದಿದೆ. ಈ ವರ್ಷ ದೇವಾಲಯ ಹಾಗೂ ಮನೆಗಳಿಗೆ ಮಾತ್ರ ಹಬ್ಬ ಸೀಮಿತವಾಗಿದ್ದು, ಯುವ ಮಂದಿಗೆ ಪಟಾಕಿ ಸಿಡಿಸಿ ಸಂಭ್ರಮಿಸುವ ಅವಕಾಶಕೈತಪ್ಪಿದೆ.

ಜಾತ್ರೆ, ಉತ್ಸವ ರದ್ದು: ದೀಪಾವಳಿ ಹಬ್ಬದಂದು ಹಾಗೂ ಅಮಾವಾಸ್ಯೆ ದಿನದಂದು ಜಿಲ್ಲೆಯ ವಿವಿಧ ಭಾಗಗಳಲ್ಲಿ ಜಾತ್ರೆ ಮತ್ತು ಉತ್ಸವಗಳು ವಿಜೃಂಭಣೆಯಿಂದ ನಡೆಯುತ್ತಿದ್ದವು. ಜೊತೆಗೆ ದೇಗುಲಗಳಲ್ಲಿ ಕಾರ್ತೀಕ ಮಾಸದ ಮೊದಲ ದಿನದಂದು ವಿಶೇಷ ಪೂಜೆ, ಉತ್ಸವಗಳು ಜರುಗುತ್ತಿದ್ದವು. ಆದರೆ, ಈ ಬಾರಿ ಕೋವಿಡ್ ಹಿನ್ನೆಲೆ ಈ ಎಲ್ಲಾ ಆಚರಣೆಗಳಿಗೂ ಜಿಲ್ಲಾಡಳಿತ ಮತ್ತು ಸ್ಥಳೀಯ ಆಡಳಿತ ಕಡಿವಾಣ ಹಾಕಿದ್ದು, ಜಾತ್ರೆ ಮತ್ತು ಉತ್ಸವಗಳನ್ನು ರದ್ದುಗೊಳಿಸಿವೆ. ವಿಶೇಷ ಪೂಜೆ ಹಾಗೂ ಕೆಲ ಆಚರಣೆಗೆ ಸೀಮಿತ ಜನರೊಂದಿಗೆ ಸಾಂಪ್ರದಾಯಿಕವಾಗಿ ನಡೆಸಲು ನಿರ್ಬಂಧದೊಂದಿಗೆ ಅನುಮತಿ ನೀಡಲಾಗಿದೆ.

ಪಿರಿಯಾಪಟ್ಟಣದಲ್ಲಿ ಪ್ರತಿ ವರ್ಷ ದೀಪಾವಳಿಯಂದು ನಡೆಯುತ್ತಿದ್ದ ಮಲೆ ಮಹದೇಶ್ವರ ಜಾತ್ರೆಗೆ ಸಾವಿರಾರು ಮಂದಿ ಭಾಗಿಯಾಗಿ ಕೊಂಡ ಹಾಯುತ್ತಿದ್ದರು. ಆದರೆ, ಈ ಬಾರಿ ಜಾತ್ರೆಯನ್ನು ಅಲ್ಲಿನ ತಾಲೂಕು ಆಡಳಿತ ರದ್ದು ಮಾಡಿದ್ದು, ಪೂಜೆ ಕಾರ್ಯಗಳಿಗಷ್ಟೇ ಅವಕಾಶ ಮಾಡಿಕೊಟ್ಟಿದೆ. ಜೊತೆಗೆ ಹುಣಸೂರು ತಾಲೂಕಿನ ಗದ್ದಿಗೆಯಲ್ಲಿ ಕಾರ್ತೀಕ ಮಹೋತ್ಸವ ಹಾಗೂ ಗಾವಡಗೆರೆಯಲ್ಲಿ ಕಳೆದ ಹದಿನೈದು ವರ್ಷಗಳಿಂದ ವಿಜೃಂಭಣೆಯಿಂದ ಕಾಲಭೈರೇಶ್ವರ ಉತ್ಸವಕ್ಕೂ ಕೋವಿಡ್ ಅಡ್ಡಿಯಾಗಿದ್ದು,  ಕೇವಲ ಸಾಂಕೇತಿಕವಾಗಿ ಮಾತ್ರ ಆಚರಿಸಲಾಗುತ್ತಿದೆ.

ರದ್ದಾದ ದೀವಟಿಗೆ ಉತ್ಸವ: ದೀಪಾವಳಿಹಬ್ಬದಂದು ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ನಡೆಯುತ್ತಿದ್ದ ದೀವಟಿಗೆ ಉತ್ಸವ ಇಡೀ ಜಿಲ್ಲೆಯಲ್ಲಿ ಅತಿ ವಿಜೃಂಭಣೆಯಿಂದ ನಡೆಯುತ್ತಿತ್ತು. ಆದರೆ, ಕೋವಿಡ್ ಹಿನ್ನೆಲೆ ದೀವಟಿಗೆ ಉತ್ಸವ ಹಾಗೂ ಕುಡಕೂರು ಜಾತ್ರೆಯನ್ನು ರದ್ದು ಮಾಡಿದ್ದು, ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ದೇಗುಲದಲ್ಲಿ ಸಾಂಪ್ರ ದಾಯಿಕ ಪೂಜೆಗೆಷ್ಟೇ ಅವಕಾಶ ಮಾಡಿಕೊಡಲಾಗಿದೆ.

Advertisement

ಬೆಟ್ಟದಪುರದ ದೀವಟಿಗೆ ಉತ್ಸವದಲ್ಲಿ ಸುತ್ತಲಿನ 30ಕ್ಕೂ ಹೆಚ್ಚು ಗ್ರಾಮಗಳ ಎರಡ್ಮೂರು ಸಾವಿರಕ್ಕೂ ಹೆಚ್ಚು ಯುವ ಜನತೆ ದೀವಟಿಗೆ (ಪಂಜು) ಹಿಡಿದು ಮಲ್ಲಿಕಾರ್ಜುನ ಉತ್ಸವ ಮೂರ್ತಿಯೊಂದಿಗೆ ಬೆಟ್ಟದ ಸುತ್ತಾ ಇರುವ ಎಲ್ಲಾ ಗ್ರಾಮಗಳಲ್ಲಿ ಮೆರವಣಿಗೆ ನಡೆಸಿ ಹಬ್ಬ ಆಚರಿಸುತ್ತಿದ್ದರು. ದೀವಟಿಗೆ ಹಿಡಿದು ಸಂಭ್ರಮಿಸುತ್ತಿದ್ದ ಯುವ ಜನತೆಗೆ ಕೋವಿಡ್ ಅಡ್ಡಿಯಾಗಿದೆ.

ಮನೆಗೆ ಸೀಮಿತವಾದ ಸಂಭ್ರಮ: ದೀಪಾವಳಿಹಬ್ಬ ಬಂತೆಂದರೆ ಎಲ್ಲೆಡೆ ಪಟಾಕಿ ಸದ್ದು, ದೇಗುಲಗಳಲ್ಲಿ ಉತ್ಸವ, ಪೂಜಾ ಕಾರ್ಯಗಳು ನೆರವೇರುತ್ತಿದ್ದವು. ಆದರೆ, ಎಲ್ಲೆಡೆ ಕೋವಿಡ್ ಸೋಂಕಿನ ಆತಂಕ ಮನೆ ಮಾಡಿರುವುದರಿಂದ ಈ ಬಾರಿ ಉತ್ಸವ ಹಾಗೂ ಸಂಭ್ರಮ ಕೇವಲ ಮನೆಗಳಿಗಷ್ಟೇ ಸೀಮಿತವಾಗಿದೆ. ಸರಳವಾಗಿ ತಮ್ಮ ಮನೆಯಲ್ಲಿ ಲಕ್ಷ್ಮೀ ಪೂಜೆ ಮಾಡಿಕೊಂಡಿದ್ದಾರೆ.

ಬೆಲೆ ಏರಿಕೆಯ ಬಿಸಿ :  ಕೋವಿಡ್ ಸಂಕಷ್ಟದ ನಡುವೆ ಬಂದಿರುವ ದೀಪಾವಳಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.ಕೊರೊನಾಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಬಡವರನ್ನು ಬೆಲೆ ಏರಿಕೆ ಮತ್ತಷ್ಟು ಹೈರಾಣು ಮಾಡಿದ್ದರೆ, ಆರ್ಥಿಕ ನಷ್ಟ ಭರ್ತಿ ಮಾಡಿಕೊಳ್ಳಲು ಸಣ್ಣ ಮತ್ತು ದೊಡ್ಡ ವ್ಯಾಪಾರಿಗಳು ತಮ್ಮಖಜಾನೆ ತುಂಬಿಕೊಳ್ಳುವ ತವಕದಲ್ಲಿದ್ದಾರೆ. ಕಳೆದ ಬಾರಿ 60-70 ರೂ. ಇದ್ದ ಹೂವಿನ ಬೆಲೆ ಈ ಬಾರಿ 100 ರೂ. ಗಡಿ ದಾಟಿದೆ. ಜೊತೆಗೆ ಅಗತ್ಯ ವಸ್ತು, ಹೂ-ಹಣ್ಣುಗಳ ಬೆಲೆಯೂ ಗಗನಕ್ಕೇರಿದೆ.

 

ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next