Advertisement
ಒಂದು ಹಂತದಲ್ಲಿ ಇಡೀ ಜಗತ್ತೇ ತನ್ನ ಕಡೆಗೆ ನೋಡುವಂತೆ ಮಾಡಿದ್ದ ಜರ್ಮನಿಯ ಪರಿಸ್ಥಿತಿ ಈಗ ಆತಂಕದಲ್ಲಿದೆ. ಜನರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಲಾಕ್‌ಡೌನ್ ಸಡಿಲಿಸಿದ್ದ ದೇಶಕ್ಕೆ ಈಗ ಅದೇ ಮುಳುವಾದಂತಿದೆ. ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಿದ ಕೆಲವೇ ದಿನಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಆರ್ಥಿಕ ಹಿಂಜರಿತವು ವರ್ಷದ ಮಧ್ಯಭಾಗದವರೆಗೆ ಇರುತ್ತದೆ ಎಂದು ಜರ್ಮನಿಯ ಆರ್ಥಿಕ ಸಚಿವಾಲಯ ಹೇಳಿತ್ತು. ಹಾಗಾಗಿ ಲಾಕ್‌ಡೌನ್ ಸಡಿಲಿಸುವ ನಿರ್ಧಾರಕ್ಕೆ ಸರಕಾರ ಬಂದಿತ್ತು.
ಆರ್ಥಿಕ ಸುಧಾರಣೆಗಾಗಿ ಜರ್ಮನ್ ಸರಕಾರವು ಈಗಾಗಲೇ 750 ಬಿಲಿಯನ್ ಯುರೊ ಮೌಲ್ಯದ ಆರ್ಥಿಕ ಪರಿಹಾರ ನಿಧಿಯನ್ನು ಘೋಷಿಸಿದೆ. ದೇಶದ ಆರ್ಥಿಕ ವ್ಯವಹಾರ ಚಟುವಟಿಕೆಗಳಿಗೆ ಸಾಲ ನೀಡುವುದರೊಂದಿಗೆ, ಷೇರು ವಹಿವಾಟು ಮತ್ತು ದಿನಗೂಲಿ ಕಾರ್ಮಿಕರ ಆದಾಯ ಮಟ್ಟವನ್ನು ಬೆಂಬಲಿಸುವಂತಹ ಯೋಜನೆಗಳನ್ನು ಜಾರಿಗೆ ತಂದಿದೆ. ಆರೋಗ್ಯ ರಕ್ಷಣಾ ಉತ್ಪನ್ನಗಳ ತಯಾರಿಕೆ ಘಟಕಗಳನ್ನು ಮತ್ತು ಕಂಪನಿಗಳನ್ನು ಶೀಘ್ರವೇ ಪುನಃ ತೆರೆಯಲು ಸರಕಾರ ನಿರ್ಧರಿಸಿತ್ತು. ಸಾಮಾಜಿಕ ಅಂತರವನ್ನು ಪಾಲಿಸುವ ಅನಿವಾರ್ಯತೆ ಇರುವ ಕಾರಣ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಎಚ್ಚರಿಕೆಯಿಂದ ನಿಯಂತ್ರಿತ ರೀತಿಯಲ್ಲಿ ಕಾರ್ಯಾಚರಿಸಲು ಅನುಮತಿ ನೀಡಲಾಗಿತ್ತು. ಉಳಿದಂತೆ ಪಬ್-ಕ್ಲಬ್‌ಗಳನ್ನು, ಚಿತ್ರ ಮಂದಿರಗಳನ್ನು ಹಾಗೂ ಮಾಲ್‌ಗಳನ್ನು ಸದ್ಯಕ್ಕೆ ಮುಚ್ಚಿರಬೇಕು ಎಂದಿತ್ತು.
Related Articles
ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಯೋಜನೆ ಜತೆಗೆ 800 ಚದರ ಮೀಟರ್ ವಿಸ್ತೀರ್ಣದ ವರೆಗಿನ ಮಳಿಗೆಗಳನ್ನು ತೆರೆಯಲು ಅನುಮತಿಸಲಾಗಿತ್ತು. ಶಾಪಿಂಗ್ ಮಾಡುವಾಗ ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ ಪಾಲಿಸಲೇಬೇಕಾದ ಕೆಲವು ಅಗತ್ಯ ನಿಯಮಗಳನ್ನು ರೂಪಿಸಿದ್ದು, ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸಲು ಸೂಚಿಸಲಾಗಿತ್ತು. ಆದರೆ ಆಗಸ್ಟ್ 31 ರವರೆಗೆ ಯಾವುದೇ ದೊಡ್ಡ ಮತ್ತು ಸಾರ್ವಜನಿಕ ಸಭೆಗಳನ್ನು ನಡೆಸುವಂತಿಲ್ಲ. ಲಾಕ್‌ಡೌನ್ ಅನ್ನು ತೆರವುಗೊಳಿಸಲಾಗುವುದಾದರೂ ಜನರು ಬಹಳ ಎಚ್ಚರಿಕೆ ವಹಿಸಬೇಕು ಎಂದು ಹೇಳಲಾಗಿತ್ತು. ಇಷ್ಟೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡ ಹೊರತಾಗಿಯೂ ಜರ್ಮನ್‌ನಲ್ಲಿ ಕಡಿಮೆಯಾಗಿದ್ದ ಕೊರೊನಾ ಸೋಂಕಿತರ ಪ್ರಮಾಣ ಮತ್ತೆ ಏರಿಕೆಯಾಗಿರುವುದು ಇತರ ರಾಷ್ಟ್ರಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.
Advertisement