ಕೋವಿಡ್ ಸಂದರ್ಭದಲ್ಲಿನ ಲಾಕ್ ಡೌನ್ ವೇಳೆಯಲ್ಲಿ ಅತೀ ಹೆಚ್ಚು ಪರಿಣಾಮ ಬೀರಿದ್ದು ಕಲಿಯುವ ವಿದ್ಯಾರ್ಥಿಗಳ ಮೇಲೆ. ಅತ್ತ ಶಾಲೆ ಆರಂಭವೂ ಅಲ್ಲ, ಇತ್ತ ಓದು ಆರಂಭವೂ ಅಲ್ಲ. ಒಂದೆರೆಡು ತಿಂಗಳು ಹೇಗಾದರೂ ದಿನದೂಡಿದ ವಿದ್ಯಾರ್ಥಿಗಳು ಬಳಿಕ ಶಾಲೆಯ ದಿನಗಳನ್ನು ನೆನಪಿಸಲು ಶುರು ಮಾಡಿದರು. ಆನ್ ಲೈನ್ ಶಿಕ್ಷಣ ಇದ್ದರೂ ನೆಟ್ ವರ್ಕ್, ಸ್ಮಾರ್ಟ್ ಫೋನ್ ಇಲ್ಲದಿರುವ ಸಮಸ್ಯೆಗಳಿಂದ ವಿದ್ಯಾರ್ಥಿಗಳಿಗಾದ ತೊಂದರೆ ಅಷ್ಟಿಷ್ಟಲ್ಲ.
ಹೆಚ್ಚು ದಿನ ಕಲಿಕೆಯಿಂದ ದೂರ ಇದ್ದ ಕಾರಣ. ಹಿಂದೆ ಕಲಿತ ವಿಷಯಗಳು ನೆನಪು ಹೋಗುವುದು ಸಹಜ. ಜಾರ್ಖಂಡ್ ಚಂದಪುರ ಗ್ರಾಮದಲ್ಲಿರುವ ದೀಪಿಕಾ ಮಿನ್ಜ್ ಎನ್ನುವ 7 ತರಗತಿಯ ವಿದ್ಯಾರ್ಥಿಯೊಬ್ಬಳಿಗೂ ಹೀಗೆಯೇ ಆಯಿತು. ಲಾಕ್ ಡೌನ್ ಮುಂಚೆ ಕಲಿತ ಪಠ್ಯ ವಿಷಯಗಳತ್ತ ಮತ್ತೆ ಕಣ್ಣಾಡಿಸಿದಾಗ, ಆ ವಿಷಯಗಳ ಅರ್ಥ ನೆನಪಾಗದೆ ಕಂಗಾಲಾದ ಪರಿಸ್ಥಿತಿ ಬಂತು. ಕಲಿಕೆಯಲ್ಲಿ ಮುಂದಿದ್ದ ದೀಪಿಕಾ ಹಳೆಯದನ್ನು ಮತ್ತೆ ಕಲಿತು ಮನೆಯಲ್ಲೇ ವಿದ್ಯಾರ್ಥಿನಿ ಆದಳು.
ಪ್ರತಿನಿತ್ಯ ಪಠ್ಯವನ್ನು ಕರಗತ ಮಾಡುತ್ತಿದ್ದ ದೀಪಿಕಾಳಿಗೆ ಅದೊಂದು ದಿನ ಇನ ತನ್ನ ಗ್ರಾಮದಲ್ಲಿ ಸದಾ ಅತ್ತಿತ್ತ ಅಡ್ಡಾಡುತ್ತಾ, ಆಟವಾಡುತ್ತಾ ದಿನ ದೂಡುವ ಪ್ರೈಮರಿ ವಿದ್ಯಾರ್ಥಿಗಳು ಬಗ್ಗೆ ಚಿಂತೆ ಆಯಿತು. ಏಳನೇ ತರಗತಿಯಲ್ಲಿರುವ ತನಗೆ ಕಲಿತ ವಿಷಯಗಳು ನೆನಪಲ್ಲಿ ಉಳಿಯದಿದ್ದಾಗ. ತನಗಿಂತ ಚಿಕ್ಕದಿರುವ ಈ ಮಕ್ಕಳಿಗೆ ಶಾಲೆಯ ನೆನಪು ಹಾಗೂ ಪಾಠದ ನೆನಪು ಇರಬಹುದೇ ಎಂದು ಯೋಚಿಸುತ್ತಾಳೆ.
ದೀಪಿಕಾ ಹಾಗೇ ಸುಮ್ಮನೇ ಯೋಚಿಸಿ ಕೂರಲಿಲ್ಲ. ಮರುದಿನ ಬೆಳಗ್ಗೆ ತನ್ನ ಗ್ರಾಮದ ಮಕ್ಕಳಲ್ಲಿ ಈ ಕುರಿತು ಮಾತಾನಾಡಿ, ಎಲ್ಲರೂ ತನ್ನ ಮನೆಯ ಪಕ್ಕ ಬನ್ನಿ ನೀವು ಕಲಿತದ್ದನ್ನು ಮತ್ತೆ ನೆನಪಿಸಿಕೊಳ್ಳುವ ಎಂದು ಹೇಳುತ್ತಾರೆ.ಇದಾದ ಬಳಿಕ ಕೆಲ ವಿದ್ಯಾರ್ಥಿಗಳು ಪಠ್ಯ ಪುಸ್ತಕದೊಂದಿಗೆ ದೀಪಿಕಾಳ ಮನೆಯತ್ತ ಬರುತ್ತಾರೆ. ದೀಪಿಕಾ ದಿನ ಕಳೆದಂತೆ ಉತ್ಸಾಹದಿಂದ ತನಗಿಂತ ಸಣ್ಣ ವಯಸ್ಸಿನ ವಿದ್ಯಾರ್ಥಿಗಳಿಗೆ ಕಲಿಸುತ್ತಾಳೆ. ಇಂಗ್ಲೀಷ್ ಹಾಗೂ ಗಣಿತವನ್ನು ಸುಲಭವಾಗಿ ಮಕ್ಕಳಿಗೆ ಹೇಳಿಕೊಡುವ ದೀಪಿಕಾಳ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿ, ತಮ್ಮ ಮಕ್ಕಳನ್ನು ತಪ್ಪದೇ ದೀಪಿಕಾಳ ಕಲಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತಾರೆ.
20 ಜನರಿರುವ ದೀಪಿಕಾಳ ತರಗತಿಯಲ್ಲಿ, ದೀಪಿಕಾಳೊಂದಿಗೆ ಆಕೆ ಸ್ನೇಹಿತೆಯೂ ಶಿಕ್ಷಣವನ್ನು ಬೋಧಿಸಲು ಕೈಜೋಡಿಸುತ್ತಾರೆ. ಇಷ್ಟು ಮಾತ್ರವಲ್ಲದೆ ದೀಪಿಕಾ ಒಂದು ಹೆಜ್ಜೆ ಮುಂದೆ ಊರಿನ ಗ್ರಾ,ಪಂ. ನಲ್ಲಿ ಇದೇ ರೀತಿಯ ತರಗತಿಯನ್ನು ಹೈಸ್ಕೂಲ್ ಮಕ್ಕಳಿಗೂ ಪ್ರಾರಂಭಿಸಲು ಮನವಿ ಮಾಡುತ್ತಾರೆ.
11 ವರ್ಷದ ದೀಪಿಕಾ ಕೋವಿಡ್ ಸಮಯದಲ್ಲಿ ಪ್ರೈಮರಿ ಮಕ್ಕಳಿಗೆ ತಾನು ಕಲಿತ ಶಿಕ್ಷಣವನ್ನು ಕಲಿಸುತ್ತಿದ್ದಾರೆ. ದೀಪಿಕಾಳ ಈ ಕಾರ್ಯಕ್ಕೆ ಗ್ರಾ.ಪಂ ಕೂಡ ಶ್ಲಾಘಿಸಿದ್ದು. ತರಗತಿಗಳಿಗಾಗಿ ಮರದಡಿ ಬೆಂಚು, ಡೆಸ್ಕ್ ಗಳ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ. ಸಣ್ಣ ವಯಸ್ಸಿನಲ್ಲೇ ಇಂಥ ನಾಯಕತ್ವದ ಗುಣವನ್ನು ಹೊಂದಿರುವ ದೀಪಿಕಾ ಮುಂದೆ ಐಎಎಸ್ ಅಧಿಕಾರಿಯಾಗುವ ಗುರಿ ಹೊಂದಿದ್ದಾಳೆ.
-ಸುಹಾನ್ ಶೇಕ್