ಚಾಮರಾಜನಗರ: ಕೋವಿಡ್-19 ತಡೆಗೆ ಜಿಲ್ಲೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಸೈನಿಕರಂತೆ ಕಾರ್ಯ ನಿರ್ವಹಿಸುತ್ತಿದ್ದು ಯಾರೂ ಭಯಪಡುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಶಾಸಕ ಪುಟ್ಟರಂಗಶೆಟ್ಟಿ ತಿಳಿಸಿದರು.
ಜಿಲ್ಲಾಡಳಿತ ಕೋವಿಡ್ ನಿಯಂತ್ರಣ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಮಾನಸಿಕ ಒತ್ತಡ ನಿರ್ವಹಣೆ ಪುನಃ ಶ್ಚೇತನ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಭಯ ಬಿಟ್ಟು ಸಾಮಾಜಿಕ ಅಂತರ ಕಾಯ್ದುಕೊಂಡು ಜವಾಬ್ದಾರಿಯಿಂದ ವರ್ತಿಸಬೇಕು. ಮಾಸ್ಕ್ ಧರಿಸುವುದು, ಆರೋಗ್ಯ ಸಂಬಂಧ ನೀಡುವ ಸಲಹೆ ಸೂಚನೆ ಪಾಲಿಸಬೇಕೆಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಮಾತನಾಡಿ, ನಗರದ ಎಂಜಿನಿಯರಿಂಗ್ ಕಾಲೇಜಿನ ಕೋವಿಡ್ ಕೇರ್ ಕೇಂದ್ರದಲ್ಲಿ ವಿಶೇಷವಾಗಿ ಕೋವಿಡ್ ವಾರಿಯರ್ಸ್ ಗಳಿಗೆ ಪ್ರತ್ಯೇಕ ವಾರ್ಡ್‌ಗಳನ್ನು ಮೀಸಲಿಡಲಾಗಿದೆ. ಕಾರ್ಯಾಗಾರದಿಂದ ಮತ್ತಷ್ಟು ಧೈರ್ಯ, ಆತ್ಮವಿಶ್ವಾಸ ತುಂಬಿ ಹೆಚ್ಚಾಗಿ ಕರ್ತವ್ಯದಲ್ಲಿ ತೊಡಗಿಸಿಕೊಳ್ಳಲು ಸಿದ್ಧರಾಗೋಣ ಎಂದರು.
ಮಾನಸಿಕ ಆರೋಗ್ಯ ತಜ್ಞೆ ಡಾ. ಪೂರ್ಣಿಮಾ ಮಾತನಾಡಿ, ಕರ್ತವ್ಯದ ನಡುವೆಯೂ ಸಕ್ರಿಯರಾಗಿ ಚಟುವಟಿಕೆಯಿಂದ ಕಾರ್ಯ ನಿರ್ವಹಿಸಬೇಕಾದರೆ ಉತ್ತಮ ಆಹಾರ, ದಿನಕ್ಕೆ 7ರಿಂದ 8 ಗಂಟೆ ನಿದ್ರೆ, ವ್ಯಾಯಾಮ, ಯೋಗ ಮುಖ್ಯವಾಗಿರುತ್ತದೆ. ಪರಸ್ಪರ ನಮ್ಮ ಕಾರ್ಯದ ಬಗ್ಗೆ ವಿಷಯ ಹಂಚಿಕೊಂಡಾಗ ಮನಸ್ಸು ಹಗುರವಾಗುತ್ತದೆ. ದೈಹಿಕ ಸಾಮರ್ಥ್ಯಕ್ಕಿಂತ ಮಾನಸಿಕ ಸಾಮರ್ಥ್ಯ ಮುಖ್ಯ ಎಂದರು.
ಕಾರ್ಯಾಗಾರವನ್ನು ಜಿಪಂ ಅಧ್ಯಕ್ಷೆ ಅಶ್ವಿನಿ ಉದ್ಘಾಟಿಸಿದರು. ಉಪಾಧ್ಯಕ್ಷೆ ಶಶಿಕಲಾ, ತಾಪಂ ಅಧ್ಯಕ್ಷೆ ಶೋಭಾ, ಚುಡಾ ಅಧ್ಯಕ್ಷ ಶಾಂತಮೂರ್ತಿ, ಎಡೀಸಿ ಆನಂದ್, ಡಿಎಚ್‌ಒ ಡಾ. ಎಂ.ಸಿ.ರವಿ, ಸಿಮ್ಸ್ ಡೀನ್ ಡಾ. ಸಂಜೀವ್, ಜಿಲ್ಲಾಸ್ಪತ್ರೆ ತಜ್ಞ ವೈದ್ಯ ಡಾ. ಮಹೇಶ್ ಇತರರಿದ್ದರು.