Advertisement

ಕೋವಿಡ್ ಏನಾದರೂ ಹೇಳಿ, ಕೇಳಿ ಬರುತ್ತಾ? ಕಾಂಗ್ರೆಸ್ ಗೆ ಸಚಿವ ಆನಂದ್‌ ಸಿಂಗ್‌

11:47 AM Jan 10, 2022 | Team Udayavani |

ಹೊಸಪೇಟೆ: ಕೋವಿಡ್ ಗೆ ಬಿಜೆಪಿ, ಕಾಂಗ್ರೆಸ್‌, ಹೆಣ್ಣು, ಗಂಡೆಂಬ ಬೇಧ ಇರಲ್ಲ. ಯಾರನ್ನೋ ನೋಡಿ ಕೋವಿಡ್ ಬರಲ್ಲಾ ಎಂದು ಪ್ರವಾಸೋದ್ಯಮ ಹಾಗೂ ಪರಿಸರ ಸಚಿವ ಆನಂದ್‌ ಸಿಂಗ್‌ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಏನಾದರೂ ಹೇಳಿ, ಕೇಳಿ ಬರುತ್ತಾ? ಕಾಂಗ್ರೆಸ್‌ ಪಾದಯಾತ್ರೆ ಇದೆ. ಆ ಮೇಲೆ ಬರ್ತೀನಿ ಅಂತ ಏನಾದರೂ ಹೇಳಿ ಬರುತ್ತಾ? ಎಲುಬಿಲ್ಲದ ನಾಲಿಗೆ ಏನೇನೋ ಮಾತನಾಡುತ್ತದೆ. ಪಾದಯಾತ್ರೆ ತಡೆಯಲು ಬಿಜೆಪಿ ಸರ್ಕಾರ ವೀಕೆಂಡ್‌ ಕರ್ಫ್ಯೂ ಹೇರಿದೆ ಎಂದು ಕಾಂಗ್ರೆಸ್‌ ನಾಯಕರು ಆರೋಪ ಮಾಡ್ತಿದ್ದಾರೆ. ಆದ್ರೆ ಅಕ್ಕ ಪಕ್ಕದ ರಾಜ್ಯಗಳಲ್ಲಿ ಈಗಾಗಲೇ ಲಾಕ್‌ಡೌನ್‌ ಆಗಿದೆ. ಕೇಸ್‌ ಗಳನ್ನು ನೋಡಿಕೊಂಡು ಸರ್ಕಾರ ಆದೇಶ ಮಾಡಿದೆ.

ಮೊದಲೇ ಫಿಕ್ಸ್‌ ಮಾಡಿದ್ವಿ, ಆ ನಂತರ ಬಿಜೆಪಿ ವೀಕೆಂಡ್‌ ಕರ್ಫ್ಯೂ ಹಾಕಿದೆ ಅಂತ ಆರೋಪ ಮಾಡ್ತಿದ್ದಾರೆ ಎಂದರು. ಕಾಂಗ್ರೆಸ್‌ನವರು ನಿಯಮ ಉಲ್ಲಂಘನೆ ಮಾಡಿದ್ರೆ ಆಯಾ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತದೆ. ಸರ್ಕಾರದ ಆದೇಶ ಉಲ್ಲಂಘನೆ ಮಾಡಿದ್ರೆ ಕ್ರಮ ಕೈಗೊಳ್ಳುವುದು ಗ್ಯಾರಂಟಿ. ಬಳ್ಳಾರಿ, ವಿಜಯನಗರ ಅವಳಿ ಜಿಲ್ಲೆಗಳಲ್ಲಿ ಬೂಸ್ಟರ್‌ ಡೋಸ್‌ ನೀಡಲು ಸಿದ್ಧತೆ ಮಾಡಿ ಕೊಳ್ಳಲಾಗಿದೆ. 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಈಗಾಗಲೇ ಲಸಿಕೆ ನೀಡಲಾಗುತ್ತಿದೆ.

ಮೊದಲನೇ ಡೋಸ್‌ ಪಡೆದವರು ಈಗ ಎರಡನೇ ಡೋಸ್‌ ಪಡೆಯುತ್ತಿದ್ದಾರೆ. 2ನೇ ಡೋಸ್‌ ಬಹಳಷ್ಟು ಜನರು ಪಡೆದಿರಲಿಲ್ಲ. ಎರಡನೇ ಡೋಸ್‌ ಪಡೆಯುವವರ ಸಂಖ್ಯೆ ಈಗ ಹೆಚ್ಚಾಗಿದೆ. ಉಭಯ ಜಿಲ್ಲೆಯ ಆಸ್ಪತ್ರೆಗಳಲ್ಲಿ ತಾತ್ಕಾಲಿಕ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಬಳ್ಳಾರಿಯ ಟ್ರಾಮಾಕೇರ್‌ ಸೆಂಟರ್‌ನ ಕೆಲವು ವಿಭಾಗಗಳು ಚಿಕಿತ್ಸೆಗೆ ಸಿದ್ಧಪಡಿಸಿಕೊಳ್ಳಲಾಗುತ್ತಿದೆ. ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಮೂರನೇ ಅಲೆ ಬರಬಹುದು, ಬಾರದೇ ಇರಬಹುದು. ನಾವು ಎದುರಿಸಲು ಸಿದ್ಧರಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next