Advertisement

ಸಿಆರ್‌ಝಡ್‌ ಹೊಸ ನಿಯಮಾವಳಿ ನಕ್ಷೆಗೆ ಕೋವಿಡ್ ಅಡ್ಡಿ!

10:33 PM Sep 09, 2020 | mahesh |

ಮಹಾನಗರ: ಕರಾವಳಿಯ ಮೂರು ಜಿಲ್ಲೆಗಳ ಬಹುಬೇಡಿಕೆಯಾಗಿರುವ “ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್‌) ಅಧಿಸೂಚನೆ-2019’ರ ಅನುಷ್ಠಾನ ಸಂಬಂಧ ಹೊಸ ಕರಡು ನಕ್ಷೆ ರಚನೆಗೆ ಇದೀಗ ಕೊರೊನಾ ಅಡ್ಡಿಯಾಗಿದೆ!

Advertisement

2019ರ ಜ. 18ರಂದು ಕೇಂದ್ರ ಸರಕಾರ ಸಿಆರ್‌ಝಡ್‌ ಅಧಿಸೂಚನೆ-2019ನ್ನು ಪ್ರಕಟಿಸಿತ್ತು. ಈ ನಿಯಮಾವಳಿಯನ್ನೇ ಮುಂದಿನ ದಿನಗಳಲ್ಲಿ ಜಾರಿಗೆ ತರಬೇಕು ಎಂದು ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯ ತಿಳಿಸಿತ್ತು. ಆದರೆ, ನಿಯಮಾವಳಿ ಜಾರಿಗೊಳಿಸಲು ಅಗತ್ಯವಿರುವ ನಕ್ಷೆ ಮಾತ್ರ ಇನ್ನೂ ಜಾರಿಯಾಗಿಲ್ಲ. ಆದರೆ, ಸದ್ಯ ಈ ಬಗ್ಗೆ ಇಲಾಖೆಗಳಲ್ಲಿ ವಿಚಾರಿಸಿದಾಗ, ಕೊರೊನಾ ಕಾರಣದಿಂದ ಅಧ್ಯಯನ-ಅವಲೋಕನ ಕಷ್ಟ ವಾಗಿರುವುದರಿಂದ ನಕ್ಷೆ ಪೂರ್ಣಗೊಳ್ಳಲು ಸಾಧ್ಯವಾಗಿಲ್ಲ ಎನ್ನುತ್ತಾರೆ. ಹೀಗಾಗಿ ಮುಂದೆ ನಕ್ಷೆ ಅಂತಿಮವಾಗಲು ಇನ್ನೂ ಒಂದು ವರ್ಷ ಕಾಯಬೇಕಾಗಿದೆ.

ಸಿಆರ್‌ಝಡ್‌ ಅಧಿಸೂಚನೆ 2011ರಲ್ಲಿ ಆಗಿತ್ತು. ಆದರೆ ಇದರ ನಕ್ಷೆಗೆ ಒಪ್ಪಿಗೆ ಸಿಕ್ಕಿದ್ದು ಮಾತ್ರ 2018ರಲ್ಲಿ. ಆದರೆ, 2019ರ ಜನವರಿಯಲ್ಲಿ ಕೇಂದ್ರ ಸರಕಾರ ಹೊಸದಾಗಿ ಅಧಿಸೂಚನೆ ಹೊರಡಿಸಿತಾದರೂ, ನಕ್ಷೆ ಮಾತ್ರ ಪ್ರಕಟವಾಗಿರಲಿಲ್ಲ. ಹೀಗಾಗಿ ಇಲ್ಲಿಯವರೆಗೆ 2011ರ ನಿಯಮಾವಳಿಯ ನಕ್ಷೆಯೇ ಜಾರಿಯಲ್ಲಿದೆ.

ಭಾರತ ಸರಕಾರದ ಪರಿಸರ ಹಾಗೂ ಅರಣ್ಯ ಮಂತ್ರಾಲಯವು ಚೆನ್ನೈನ ನ್ಯಾಶನಲ್‌ ಸೆಂಟರ್‌ ಫಾರ್‌ ಸಸ್ಟನೇಬಲ್‌ ಕೋಸ್ಟಲ್‌ ಮ್ಯಾನೇಜ್‌ಮೆಂಟ್‌ (ಎನ್‌ಸಿಎಸ್‌ಸಿಎಂ)ಅನ್ನು ಭರತ ರೇಖೆ (ಹೈಟೈಡ್‌ ಲೈನ್‌)ಹಾಗೂ ಇಳಿತ ರೇಖೆ (ಲೋ ಟೈಡ್‌ ಲೈನ್‌)ಗಳನ್ನು ನಿರ್ಧರಿಸಲು ಅಧಿಕೃತ ಸಂಸ್ಥೆಯನ್ನಾಗಿ ರೂಪಿಸಲಾಗಿತ್ತು. ಇದರಂತೆ ಎನ್‌ಸಿಎಸ್‌ಸಿಎಂಗೆ ಕರಾವಳಿ ಭಾಗದ ಸಂಪೂರ್ಣ ವಿವರಗಳನ್ನು ನೀಡಲಾಗಿತ್ತು.

ಈಗಾಗಲೇ ನಕ್ಷೆಯ ಕರಡು ಸಿದ್ಧವಾಗ ಬೇಕಿತ್ತಾದರೂ, ಕೊರೊನಾ ನೆಪದಿಂದ ನಕ್ಷೆ ರಚನೆ ತಡವಾಗಿದೆ. ಕೇಂದ್ರ ಕಚೇರಿ ಚೆನ್ನೈ ಭಾಗದಲ್ಲಿ ಕೊರೊನಾ ಹೆಚ್ಚುಯಿರುವುದರಿಂದ ನಕ್ಷೆ ರಚನೆ ಪ್ರಕ್ರಿಯೆ ತಡವಾಗಿದೆ. ಹೀಗಾಗಿ ಹೊಸ ಅಧಿಸೂಚನೆಯಿಂದ ಲಾಭ ಪಡೆಯಬೇಕಾದ ಕರಾವಳಿ ತೀರದ ಜನರು ಇನ್ನೂ ಹಲವು ಸಮಯ ಕಾಯಬೇಕಾಗಿದೆ.

Advertisement

“ನಕ್ಷೆಯ ಕರಡು ಸಿದ್ಧವಾದ ಬಳಿಕ ರಾಜ್ಯ ಸರಕಾರಕ್ಕೆ ಸಲ್ಲಿಕೆಯಾಗಿ, ಒಪ್ಪಿಗೆ ಪಡೆದು, ಜಿಲ್ಲಾಡ ಳಿತದಿಂದ ಅಹವಾಲು ಸ್ವೀಕರಿಸಿ ಬಳಿಕ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಕೆಯಾಗಿ ಅನುಮೋದನೆ ಆಗಬೇಕಿದೆ’ ಎನ್ನುತ್ತಾರೆ ಪ್ರಾದೇಶಿಕ ಪರಿಸರ ಕಚೇರಿಯ ಮೀನುಗಾರಿಕ ಹಿರಿಯ ಸಹಾಯಕ ನಿರ್ದೇಶಕ ಮಹೇಶ್‌.

2011ರ ಅಧಿಸೂಚನೆಗೆ 8 ವರ್ಷದ ಬಳಿಕ ನಕ್ಷೆ!
1991ರ ಸಿಆರ್‌ಝಡ್‌ ಅಧಿಸೂಚನೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ 2006ರಲ್ಲಿ ಕರಾವಳಿ ನಿರ್ವಹಣ ವಲಯ (ಸಿಎಂಝಡ್‌) ಕರಡು ಅಧಿಸೂಚನೆಯನ್ನು ಹೊರಡಿಸಿತ್ತು. ಇದರಲ್ಲಿ ಸಿಆರ್‌ಝಡ್‌ನ‌ “ನಿಯಂತ್ರಣ’ ಎಂಬ ಪದವನ್ನು ತೆಗದು “ನಿರ್ವಹಣೆ’ ಎಂದು ಸೇರಿಸಲಾಗಿತ್ತು. ಈ ಅಧಿಸೂಚನೆಯ ಮೇಲೆ ಬಹಳಷ್ಟು ಚರ್ಚೆಗಳು ನಡೆದು, ಸಾಕಷ್ಟು ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸಿಎಂಝಡ್‌ ಅಧಿಸೂಚನೆಯನ್ನು ಹಿಂದಕ್ಕೆ ಪಡೆದುಕೊಂಡು 1991ರ ಸಿಆರ್‌ಝಡ್‌ ಅಧಿಸೂಚನೆಯಲ್ಲಿ ಕೆಲವೊಂದು ತಿದ್ದುಪಡಿಗಳೊಂದಿಗೆ 2011ರಲ್ಲಿ ಮತ್ತೆ ಅನುಷ್ಠಾನಕ್ಕೆ ತಂದಿದೆ. ಇದರ ಆಧಾರದ ಮೇಲೆ 2018ರ ಜುಲೈಯಲ್ಲಿ ಹೊಸ ನಕ್ಷೆ ಸಿದ್ದಗೊಂಡಿತ್ತು. ಇದಾದ ಕೆಲವೇ ತಿಂಗಳಲ್ಲಿ ಕೇಂದ್ರವು ಹೊಸ ಅಧಿಸೂಚನೆ ಹೊರಡಿಸಿದ ಕಾರಣದಿಂದ ಇದೀಗ ಹೊಸ ನಕ್ಷೆ ರಚನೆಯಾಗಬೇಕಿದೆ.

ಹೊಸ ನಕ್ಷೆ ಲಾಭವೇನು?
2019ರ ಹೊಸ ಅಧಿಸೂಚನೆ ಪ್ರಕಾರ ನಕ್ಷೆ ರಚನೆಯಾದರೆ ಕಡಲ ತೀರದಲ್ಲಿ ಪ್ರವಾಸೋದ್ಯಮಕ್ಕೆ ಇರುವ ಕೆಲವು ಸಿಆರ್‌ಝಡ್‌ ನಿಯಮಾವಳಿಯಿಂದ ರಿಯಾಯಿತಿ ದೊರೆಯಲಿದೆ. ಜತೆಗೆ, ಮೀನುಗಾರರು ಮನೆ ನಿರ್ಮಿಸುವುದಾದರೂ ಅದಕ್ಕೂ ಅನುಮತಿ ನೀಡಲು ಸಾಧ್ಯವಿದೆ. ಸದ್ಯ ನದಿಯಿಂದ 100 ಮೀ. ದೂರ ದವರೆಗೆ ಸಿಆರ್‌ಝಡ್‌ ನಿರ್ಬಂಧವಿದ್ದರೆ, ಹೊಸ ಅಧಿಸೂಚನೆ ಪ್ರಕಾರ ಕೇವಲ 50 ಮೀ. ವರೆಗೆ ಮಾತ್ರ ನಿರ್ಬಂಧವಿರಲಿದೆ. ಹೀಗೆ ಹಲವು ರಿಯಾಯಿತಿಗಳು ಈ ನಕ್ಷೆಯಲ್ಲಿವೆ.

ಸಿಆರ್‌ಝಡ್‌ ವರ್ಗೀಕರಣ
ಸಿಆರ್‌ಝಡ್‌ ಒಟ್ಟು 4 ವರ್ಗೀಕರಣವನ್ನು ಹೊಂದಿದೆ. ಇವುಗಳನ್ನು ಸರಳವಾಗಿ ಹೇಳುವುದಾದರೆ ವರ್ಗ 1ರಲ್ಲಿ ಭರತ ಮತ್ತು ಇಳಿತ ನಡುವಣ ಪ್ರದೇಶ ಹಾಗೂ ಸಾಗರ ತೀರದಲ್ಲಿ ಪರಿಸರಾತ್ಮಕವಾಗಿ ಅತಿ ಸೂಕ್ಷ್ಮ ಪ್ರದೇಶಗಳು ಇದರಲ್ಲಿ ಒಳಗೊಳ್ಳುತ್ತವೆ. ವರ್ಗೀಕರಣ- 2ರಲ್ಲಿ ಸಾಗರ ತೀರಕ್ಕೆ ಹತ್ತಿರವಿರುವ ಅಥವಾ ತೀರದವರೆಗೆ ಈಗಾಗಲೇ ಅಭಿವೃದ್ಧಿ ಹೊಂದಿದ ಪ್ರದೇಶ. ವರ್ಗೀಕರಣ- 3ರಲ್ಲಿ ಹೊಂದಿಕೊಂಡತೆ ಅಬಾಧಿತ ಅಥವಾ 1 ಮತ್ತು 2ಕ್ಕೆ ಸೇರದ, ಗ್ರಾಮಾಂತರ ಪ್ರದೇಶದಲ್ಲಿ ಕರಾವಳಿ ಪ್ರದೇಶಗಳು ಹಾಗೂ ವರ್ಗಿಕರಣ- 4ರಲ್ಲಿ ಇಳಿತ ರೇಖೆಯಿಂದ 12ನಾಟಿಕಲ್‌ ಮೈಲ್‌ ಸಮುದ್ರಮುಖ ಪ್ರದೇಶಗಳು, ಭರತ ಸಮಯದಲ್ಲಿ ನೀರು ನುಗ್ಗುವ ಪ್ರದೇಶಗಳು ಒಳಗೊಳ್ಳುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next